ಹದಿನೆಂಟು ತಿಂಗಳ ಕಾಲ ಕಾಡಾ ಈಗ ಕಿತ್ತೋದ ಸೂಡಾ, ಸ್ವಪಕ್ಷದ ವಿರುದ್ದವಾಗಿ ಹೆಚ್ ಎಸ್ ಸುಂದರೇಶ್ ತೀವ್ರ ವಾಗ್ದಾಳಿ
ಶಿವಮೊಗ್ಗ : ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದು ಸುಮಾರು 40 ವರ್ಷಗಳು ಕಳೆದಿದೆ.. ವಿದ್ಯಾರ್ಥಿ ದಿನದಿಂದಲೂ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದೇನೆ. ಆದರೆ ಇತ್ತೀಚಿಗೆ ಪಕ್ಷ ನಮ್ಮಂತಹ ಹಿರಿಯರನ್ನು ಬಿಟ್ಟು ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕುತ್ತಿದೆ. ಯಾವುದೇ ಉನ್ನತ ಹುದ್ದೆ ನೀಡದೆ 18 ತಿಂಗಳ ಕಾಲ ಕಾಡ ಈಗ ಕಿತ್ತೋಗಿದ್ ಸೂಡಾ ನೀಡಿದ್ದಾರೆ ಎಂದು ಎಚ್ ಎಸ್ ಸುಂದರೇಶ್ ತೀವ್ರ ವಾಗ್ದಾಳಿ ನಡೆಸಿದರು..
ಖಾಸಗಿ ಹೋಟೆಲ್ ನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನನ್ನನ್ನು ಎಂಎಲ್ಎ ಮಾಡಲಿಲ್ಲ, ಎಂಪಿ ಚುನಾವಣೆಗೆ ನನ್ನ ಹೆಸರು ಫೈನಲ್ ಆಗಿದ್ದರೂ ಅದನ್ನು ಕೈತಪ್ಪಿಸಲಾಯಿತು. 40 ವರ್ಷಗಳಿಂದ ಪಕ್ಷ ಕಟ್ಟಿದ ನಾವು ಸಿಎಂ ಬಂದಾಗ ಕೊನೆಯಲ್ಲಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪಕ್ಷವನ್ನು ತೊರೆಯುವುದಾಗಿ ಎಚ್ಚರಿಕೆ ನೀಡಿದರು..
ತೀರ್ಥಹಳ್ಳಿಯಲ್ಲಿ ಆರ್.ಎಂ. ಮಂಜುನಾಥ್ ಗೌಡರಿಗೆ ಮುಂದಿನ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು, ಶಿವಮೊಗ್ಗದಲ್ಲಿ ನನಗೆ ಟಿಕೆಟ್ ಕೊಡಬೇಕು. ಸೊರಬದಲ್ಲಿ ಹೊಸ ಕ್ಯಾಂಡಿಡೇಟ್ ಹಾಕುತ್ತಿದ್ದೇವೆ, ಅವರಿಗೆ ಟಿಕೆಟ್ ಕೊಡಬೇಕು. ಶಿಕಾರಿಪುರದಲ್ಲಿ ಏನೂ ಇಲ್ಲದ ನಾಗರಾಜ್ ಗೌಡರಿಗೆ ಟಿಕೆಟ್ ಕೊಟ್ಟಿದ್ದರು, ಮುಂದಿನ ಬಾರಿ ಅವರಿಗೆ ಟಿಕೆಟ್ ಕೊಡಬಾರದು. ಕಳೆದ ಬಾರಿ ನಾನು ಜಿಲ್ಲಾಧ್ಯಕ್ಷನಾಗಿದ್ದಾಗ ಇದೇ ನನ್ನ ಕೊನೆ ಚುನಾವಣೆ ಎಂದಿದ್ದ ಕಿಮ್ಮನೆ ರತ್ನಾಕರ್, ಈಗ ಮತ್ತೆ ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಅವರಿಗೆ ಟಿಕೆಟ್ ನೀಡಬಾರದು. ನಾವು ಹೇಳಿದವರಿಗೆ ಟಿಕೆಟ್ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಜಿಲ್ಲೆಯ 7ಕ್ಕೆ 7 ಸ್ಥಾನಗಳನ್ನು ಗೆಲ್ಲುತ್ತದೆ. ಇಲ್ಲದಿದ್ದರೆ ನಾವೆಲ್ಲರೂ ಪಕ್ಷ ಬಿಡುತ್ತೇವೆ ಎಂಬುದಾಗಿ ತಿಳಿಸಿದರು..
ಜಿಲ್ಲೆಯಲ್ಲಿ ಯಾರಿಗ್ಯಾರಿಗೋ ಮಂತ್ರಿ ಸ್ಥಾನ ನೀಡಲಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಬೈದವರನ್ನು ಕರೆದು ಮಂತ್ರಿ ಮಾಡಿದ್ದಾರೆ. ಸಾಗರದ ಬೇಳೂರು ಗೋಪಾಲಕೃಷ್ಣ ಹಾಗೂ ಭದ್ರಾವತಿಯ ಸಂಗಮೇಶ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು. ಯಾರೋ ಕೇರಳದಿಂದ ಇಲ್ಲಿಗೆ ಬಂದು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿ ಹೋಗುತ್ತಾರೆ. ನಿನ್ನೆ ಮೊನ್ನೆ ಬಂದವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.