ನೀಟ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ - ಬಿ ವೈ ರಾಘವೇಂದ್ರ BYR

ನೀಟ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ - ಬಿ ವೈ ರಾಘವೇಂದ್ರ 

ಶಿವಮೊಗ್ಗ :  ನೀಟ್ (NEET) ಪರೀಕ್ಷೆ ಅಕ್ರಮ ಪ್ರಕರಣವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಜೊತೆಗೆ ಕಾನೂನು ಮತ್ತಷ್ಟು ಬಲಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ನೀಟ್ ಪರೀಕ್ಷೆ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ನೀಟ್ ಅಕ್ರಮದ ಬಳಿಕ ಕೇಂದ್ರ ಸರ್ಕಾರ ತಕ್ಷಣ ಕ್ರಮ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬೆಳಕಿಗೆ ಬಂದ ತಕ್ಷಣವೇ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವಾಲಯ ತ್ವರಿತ ಕ್ರಮ ಕೈಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಪರೀಕ್ಷಾ ಅಕ್ರಮದ ಕುರಿತು ಪರಿಶೀಲನೆ ನಡೆಸಿ, ಅಗತ್ಯವಿದ್ದ ಕಡೆ ಮರುಪರೀಕ್ಷೆ ನಡೆಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಹೇಳಿದರು.

ಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಈಗಾಗಲೇ ತಮ್ಮ ಮುಂದಿನ ಶಿಕ್ಷಣಕ್ಕಾಗಿ ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದಾರೆ. ಯಾವುದೇ ವಿದ್ಯಾರ್ಥಿಯ ಭವಿಷ್ಯ ಹಾಳಾಗದಂತೆ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ಈಗಿರುವ ಕಾನೂನುಗಳನ್ನು ಇನ್ನಷ್ಟು ಬಿಗಿಗೊಳಿಸಿ, ಭಾರೀ ದಂಡ ಹಾಗೂ ದೀರ್ಘಾವಧಿಯ ಜೈಲು ಶಿಕ್ಷೆಗೆ ಅವಕಾಶ ಕಲ್ಪಿಸುವ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.

ಕಾಂಗ್ರೆಸ್ ಯುವಕರ ಭವಿಷ್ಯ ಕಟ್ಟಲಿಲ್ಲ

ಕಾಂಗ್ರೆಸ್ ಆಡಳಿತದಲ್ಲಿ ದೇಶದ ಯುವಕರ ಭವಿಷ್ಯ ನಿರ್ಮಾಣಕ್ಕೆ ಯಾವುದೇ ಪರಿಣಾಮಕಾರಿ ಕೆಲಸ ನಡೆದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷಗಳ ಆಡಳಿತದಲ್ಲಿ ಶಿಕ್ಷಣ ಹಾಗೂ ಯುವಜನರ ಅಭಿವೃದ್ಧಿಗೆ ಅನೇಕ ಸುಧಾರಣೆಗಳು ಜಾರಿಯಾಗಿವೆ. ನೀಟ್ ಪ್ರಕರಣದಲ್ಲೂ ಸರ್ಕಾರ ಅಗತ್ಯ ತೀರ್ಮಾನಗಳನ್ನು ತೆಗೆದುಕೊಂಡಿದ್ದರೂ, ಕೆಲ ರಾಜಕೀಯ ಪಕ್ಷಗಳು ಯುವಕರ ಪ್ರತಿಭಟನೆಗೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.

ಯುವಕರ ಸಮಸ್ಯೆಗಳನ್ನು ಕೇಳುವುದು ತಪ್ಪಲ್ಲ. ಆದರೆ ಕೆಲವು ಪ್ರತಿಭಟನೆಗಳಲ್ಲಿ ದೇಶವಿರೋಧಿ ಶಕ್ತಿಗಳು ನುಸುಳಿದ್ದು, ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟರ್‌ಗಳು ಹಾಗೂ ಘೋಷಣೆಗಳನ್ನು ಬಳಸಲಾಗುತ್ತಿದೆ. ಕೆಲವರು ಉಮರ್ ಖಾಲಿದ್ ಸೇರಿದಂತೆ ವಿವಾದಾತ್ಮಕ ವ್ಯಕ್ತಿಗಳ ಚಿತ್ರಗಳನ್ನು ಬಳಸಿಕೊಂಡು ಪ್ರತಿಭಟನೆಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.


Previous Post Next Post