ಗಾಳಿ ಮಳೆಯಿಂದ ಮರ ಬಿದ್ದು ಕಾಲೇಜು ವಿದ್ಯಾರ್ಥಿನಿಗೆ ಗಂಭೀರ ಗಾಯ
ರಿಪ್ಪನ್ಪೇಟೆ: ಕಳೆದ ಎರಡು ದಿನಗಳಿಂದ ಮತ್ತೆ ಭಾರಿ ಗಾಳಿ ಮತ್ತು ಮಳೆಯ ಅಬ್ಬರ ಹೆಚ್ಚಾಗಿದ್ದು ಗಾಳಿಯ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರವೊಂದು ಏಕಾಏಕಿ ಉರುಳಿ ಬಿದ್ದ ಪರಿಣಾಮ ಕಾಲೇಜು ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಿಪ್ಪನ್ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಸಾನಿ ಗ್ರಾಮದ ಬಳಿ ನಡೆದಿದೆ.
ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಹಿರೆಸಾನಿ ಗ್ರಾಮದ ಶೇಖರಪ್ಪ ಅವರ ಪುತ್ರಿ ಎಂದು ಗುರುತಿಸಲಾಗಿದೆ. ಅವರು ಗರ್ತಿಕೆರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶುಕ್ರವಾರ ಸಂಜೆ ತರಗತಿಗಳು ಮುಗಿದ ಬಳಿಕ ಇಬ್ಬರು ಸ್ನೇಹಿತರೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನೆಯ ಪರಿಣಾಮ ವಿದ್ಯಾರ್ಥಿನಿಯ ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು, ಕಾಲು ಸಂಪೂರ್ಣವಾಗಿ ಮುರಿದಿರುವುದಾಗಿ ತಿಳಿದುಬಂದಿದೆ. ಮರದಡಿ ಸಿಲುಕಿದ್ದ ವಿದ್ಯಾರ್ಥಿನಿ ನೋವಿನಿಂದ ಕೂಗಿಕೊಂಡಾಗ ಸ್ಥಳೀಯರು ತಕ್ಷಣ ಧಾವಿಸಿ ಮರವನ್ನು ತೆರವುಗೊಳಿಸಿ ರಕ್ಷಣೆ ನೀಡಿದ್ದಾರೆ. ಬಳಿಕ ತುರ್ತು ವಾಹನದ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
Tags:
ರಿಪ್ಪನ್ ಪೇಟೆ ಸುದ್ದಿ