ಜಾತ್ರೆಗೆ " ನ " ನ್ನ "ವಿನ್" ಮಾಡ್ತಾರಾ? ಎಂದು ಕುಳಿತ ಕಮಾನು ಸೇತುವೆ..! Tunga Bridge

ಜಾತ್ರೆಗೆ " ನ " ನ್ನ "ವಿನ್" ಮಾಡ್ತಾರಾ? ಎಂದು ಕುಳಿತ ಕಮಾನು ಸೇತುವೆ..!

ಕಣ್ಮುಚ್ಚಿ ಕುಳಿತ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು..!

ತೀರ್ಥಹಳ್ಳಿ: ತೀರ್ಥಹಳ್ಳಿ - ಕೊಪ್ಪ ರಸ್ತೆಯಲ್ಲಿರುವ ತುಂಗಾ ನದಿಗೆ  ಸರ್. ಎಂ. ವಿಶ್ವೇಶ್ವರಯ್ಯರವರ ತಂತ್ರಜ್ಞಾನದಲ್ಲಿ  ಕಟ್ಟಿದ ಶ್ರೀ ಜಯಚಾಮರಾಜೇಂದ್ರ ಕಮಾನು ಸೇತುವೆಗೆ ವರ್ಷಕ್ಕೊಮ್ಮೆ ಸುಣ್ಣ ಬಣ್ಣ ಬಳಿಯಲು ಸಹ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮೀನಾ ಮೇಷ ಯೋಚಿಸುತ್ತಿದ್ದಾರೆ.
ಎಳ್ಳಮಾವಾಸ್ಯೆ ಜಾತ್ರೆಯ ಸಂದರ್ಭದಲ್ಲಿ ಅರ್ಧಂಬರ್ದ ಸುಣ್ಣ ಬಣ್ಣ ಬಳಿದು ಬೇಜವಾಬ್ದಾರಿ ಕೆಲಸ ನಿರ್ವಹಿಸುತ್ತಿರುವುದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಎಳ್ಳಮವಾಸ್ಯೆ ಜಾತ್ರೆಯ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸುಣ್ಣ ಬಣ್ಣ ಬಳಿದು ಸಂಬಂಧ ಪಟ್ಟ ಅಧಿಕಾರಿಗಳು ಸೇತುವೆಗೆ ಮೆರಗು ನೀಡುತ್ತಿದ್ದರು.  ತೆಪ್ಪೋತ್ಸವ ಸಮಿತಿಯವರು ಈ ಸೇತುವೆಗೆ ವಿಶೇಷ ರೀತಿಯ ದೀಪಾಲಂಕಾರ ಮಾಡುತ್ತಿದ್ದರು. ಎಳ್ಳಮವಾಸ್ಯೆ ಜಾತ್ರೆಯಲ್ಲಿ ಈ ದೀಪಾಲಂಕಾರ ಮಾಡಿರುವ ಸೇತುವೆಯನ್ನು ನೋಡಲೆಂದೇ ಸಾವಿರಾರು ಜನರು ಬಂದು ಪೋಟೋಗಳನ್ನು ತೆಗೆಯುತ್ತಿದ್ದರು. ಆದರೆ ಇತ್ತೀಚಿಗೆ ಜಾತ್ರೆ ಸಮಯದಲ್ಲಿ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿ ವರ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ.

ಈ ಬಾರಿ ಪುರಾಣ ಪ್ರಸಿದ್ಧ ರಾಮೇಶ್ವರ ಜಾತ್ರೆ ಡಿ .19, 20 ಹಾಗೂ 21 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು  ಈಗಾಗಲೇ ಜಾತ್ರ ಸಮಿತಿ ಕೂಡ ರಚನೆಯಾಗಿದ್ದು ಸಮಿತಿಯ ಎಲ್ಲಾ ಸದಸ್ಯರು  ತಮಗೆ ಕೊಟ್ಟ ಜವಾಬ್ದಾರಿಯನ್ನು ಈಗಾಗಲೇ ಪ್ರಾರಂಭ ಮಾಡಿದ್ದಾರೆ. ಈಗಾಗಲೇ ಹಲವು ವಿಶೇಷ ಆಕರ್ಷಣೆ ಜಾತ್ರೆಯಲ್ಲಿ ಕಂಡು ಬರಲಿದೆ. ಆದರೆ ಜಾತ್ರೆಗೆ ಮೆರಗು ನೀಡುವ ತೀರ್ಥಹಳ್ಳಿಯ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಸೇತುವೆಗೆ ಮೆರಗು ನೀಡಲು ಮೀನಾ ಮೇಷ ಯೋಚಿಸಲಾಗುತ್ತಿದೆ. ಪ್ರತಿದಿನ ಸೋಲುವುದೇ ನನ್ನ ಕಾಯಕ ಜಾತ್ರೆ ಸಮಯದಲ್ಲಾದರೂ " ನ " ನ್ನ "ವಿನ್" ಮಾಡ್ತಾರಾ? ಎಂದು ಸೇತುವೆ ಅಂಗಲಾಚುತ್ತಿದೆ.

ಇನ್ನಾದರೂ ಸಂಬಂಧಪಟ್ಟವರು ತಕ್ಷಣ ಗಮನಿಸಿ ಜಾತ್ರೆಗೆ  ಕೇಂದ್ರ ಬಿಂದುವಾಗಿರುವ ಈ ತುಂಗಾ ನದಿಯ ಕಮಾನು ಸೇತುವೆಗೆ ಸಂಪೂರ್ಣ ಸುಣ್ಣ ಬಣ್ಣ ಹಚ್ಚಿ ಐತಿಹಾಸಿಕ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸೇತುವೆಗೆ ವಿಶೇಷ ಮೆರಗು ನೀಡಲಿ ಎನ್ನುವುದು ಪಟ್ಟಣದ ಸಾರ್ವಜನಿಕರ ಅಭಿಪ್ರಾಯವಾಗಿದೆ.




Previous Post Next Post