ಹೋಯ್ ತೀರ್ಥಳ್ಳಿ ಎಳ್ಳಮಾಸ್ಯೆ ಜಾತ್ರೆ ಬಂತೋ...! ನಾನ್ ಹೋಗ್ತೀನಿ ನೀವ್ ಬರ್ತೀರಾ ಅಲಾ.... jatre special

ಹೋಯ್ ತೀರ್ಥಳ್ಳಿ ಎಳ್ಳಮಾಸ್ಯೆ ಜಾತ್ರೆ ಬಂತೋ...! ನಾನ್ ಹೋಗ್ತೀನಿ ನೀವ್ ಬರ್ತೀರಾ ಅಲಾ....

ತೀರ್ಥಹಳ್ಳಿ: ಹೋಯ್ ಎಳ್ಳಮಾಸ್ಯೆ ಜಾತ್ರೆ ಶುರು ಅಂತೇ,  ಲಾಸ್ಟ್ ದಿನ ತೆಪ್ಪೋತ್ಸವ ಅಲ್ನ, ಅವತ್ ಕಾಲಿಡಕ್ ಜಾಗ ಇರಲ್ಲ. ಫಸ್ಟ್ನೆ ದಿನನೆ ಹೋಗಣ ಅತ್ಲಗೆ, ಜನ್ರು ಕೈಕಾಲಾಲಿಡಿ ಎಂತಹಾ ಬಿಳೋದ್ ಹೇಳು. ಇದು ಮಲೆನಾಡಿನ ಬಾಗದಲ್ಲಿ ತೀರ್ಥಹಳ್ಳಿ ಎಳ್ಳಮಾಸ್ಯೆ ಜಾತ್ರೆಯ ಟೈಮಲ್ಲಿ ಕೇಳಿ ಬರೋ ಮಾತ್ ಕಂಡ್ರಿ. ಈಗ ಆ ವಿಚಾರ ಎಂತಕ್ ಅಂತ ಕೇಳುದ್ರೆ. ವಿಷಯ ಇದೇ ಕಂಡ್ರಿ, ಅದೇನಂದ್ರೆ ಈ ಸತಿ ಎಳ್ಳಮಾಸ್ಯೆ ಜಾತ್ರೆ ಗೆ ಡೇಟ್ ಫಿಕ್ಸ್ ಆಗದೇ ಕಣ್ರೀ

ಹೌದು, ಯಾವಾಗ್ಲೂ ಬರೋ ಹಂಗೆ ಈ ಸತಿನೂ ಎಳ್ಳಮಾಸ್ಯೆ ಜಾತ್ರೆ ಡಿಸೆಂಬರ್‌ಲ್ಲೇ ಬಂದ್ಯದೆ. ಅದು ಯಾವತ್ತಂದ್ರೆ ಡಿಸೆಂಬರ್ 19 20, 21 ಕಂಡ್ರಿ. ಚೂರ್ ಬೇಗನೆ ಬಂದ್ಯದೆ. ಚಳಿ ಜಾಸ್ತಿ ಹಂಗಂತ ಹೋಗೊದ್ ಬಿಡಲ್ಲ. ಒಂದ್ ಮಂಕಿ ಟೊಪ್ಪಿ ಹಾಕಂಡು, ಜರ್ಕಿ ಹಾಕೋಂಡ್ ಬಿರ್ರನೆ ಹೋಗಿ ಬರೋದು. ಯಾವಾಗ್ಲೂ ಇರೋಹಂಗೆ ಈ ಸತಿನು ಬಾಳಾ ಗೌಜ್​​ ಗಮ್ಮತ್ ಉಂಟ್ ಕಂಡ್ರಿ. ಮೂರ್ ದಿನನೂ ತುಂಬಾ ಕಾರ್ಯಕ್ರಮ.

ಕಾರ್ಯಕ್ರಮದ್ ಬಗ್ಗೆ ತಿಳ್ಕಣ ಅಂತ ಎಳ್ಳಮಾಸ್ಯೆ ಜಾತ್ರೆ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಅವರ ಹತ್ರ ಮಾತಾಡುದ್ವಿ. ಅವ್ರ ಎಂಥ ಅಂದ್ರು ಗೊತ್ತಾ..ಈ ಸತಿನು ಮೂರ್ ದಿನ ಬಾಳಾ ಗೌಜ್​ಯಿಂದ ಎಳ್ಳಮಾಸ್ಯೆ ಜಾತ್ರೆ ನಡೀತಾ ಅದೆ. ಡಿಸೆಂಬರ್ 19 ಕ್ಕೆ ತೀರ್ಥಸ್ನಾನ, ಡಿಸೆಂಬರ್ 20 ರಥೋತ್ಸವ, ಡಿಸೆಂಬರ್ 21 ಕ್ಕೆ ತೆಪ್ಪೋತ್ಸವ ನಡಿತದೆ ಅಂದ್ರು, ಅಷ್ಟೇ ಅಲ್ದೆ ಜಾತ್ರೆಗೆ ಸುಮಾರು 20 ರಿಂದ 25 ಲಕ್ಷ ಖರ್ಚು ಬರ್ತಾದೆ. ಪ್ರತಿದಿನ 40 ರಿಂದ 50 ಸಾವಿರ ಜನ ಜಾತ್ರೆಗೆ ಬರ್ತಾರೆ. ತೆಪ್ಪೋತ್ಸವದ ದಿನ ಒಂದೂವರೆ ಲಕ್ಷದಿಂದ 2 ಲಕ್ಷ ಜನ ಸೇರ್ಬೋದು. ರಾಮೇಶ್ವರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ನಡಿತದೆ ಅಂದ್ರು..


ಈ ಸಾರಿ ಬಾರಿ ವಿಶೇಷ ಅಂತೇ, ಎಂತ ಅಂದ್ರೆ ಎರಡ್ ಕಡೆ ಸೆಲ್ಫಿ ಪಾಯಿಂಟ್ ಮಾಡಿದ್ರಂತೆ, ಒಂದೋ ಅದೇ ಪರಶುರಾಮ ಕೊಡಲಿ ಇಟ್ಕೊಂಡ್ ಇರೋದಂತೆ, ಇನ್ನೊಂದು ಐ ಲವ್ ತೀರ್ಥಹಳ್ಳಿ ಅನ್ನೋದಂತೆ, ಎಂತದೆ ಆಗ್ಲಿ ಮಾರಾಯ, ತೀರ್ಥಹಳ್ಳಿಯ ರಾಮೇಶ್ವರ ದೇವರ ಎಳ್ಳಮಾಸ್ಯೆ ಜಾತ್ರೆ ಅಂದ್ರೆ ಓಂತಾರ ಖುಶಿ ಕಣ್ಲಾ, ಆ ರಾಮ ಕೊಂಡದಲ್ಲಿ ಈ ಚಳಿಲಿ ಜನ ಮುಳಗಿ ಏಳೋದು. ಇತಿಹಾಸ ಇರೋ ಆ ಸೇತುವೆ ಸಿಂಗಾರ ಮಾಡೋದನ್ನ ನೋಡೋದು. ಆಕಾಶದ್ ಮೇಲ್ಗಡೆ ಸಿಡಿಯೋ ಪಟಾಕಿನ ನೋಡೋಕಂತಾನೆ ಹೋಗೋದು, ಇದೆಲ್ಲದ್ರ ಮಧ್ಯೆ ಆ ಮೇಲೆ ಹೋಗಿ ಕೆಳ್ಗೆ ಬರ್ತಾಲ್ಲ ಅದೇ ಆಟ ಕಣೋ ಹೂ ಜಾಯಿಂಯ್ ವೀಲು, ಹಾಗೆ ಟಿ ಎಂ ಆರ್ ಅಲ್ಲಿ ದೋಸೆ ತಿನ್ನೋದು,  ಇದೆಲ್ಲಾ  ಓಂತರಾ ಖುಷಿ ಕೊಡುತ್ತೆ ಅಲಾ..

ಒಟ್ನಲ್ಲಿ ತೀರ್ಥಳ್ಳಿ ಎಳ್ಳಮಾಸ್ಯೆ ಜಾತ್ರೆ ಬಂತು,  ನಾನ್ ಹೋಗ್ತೀನಿ ನೀವ್ ಬರ್ತೀರಾ ಅಲಾ ಮರೀಬೇಡಿ.....
Previous Post Next Post