ತ್ರಿಯಂಬಕಪುರ ಗ್ರಾಾಮಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ : 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ
ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಅಧ್ಯಕ್ಷ ಟಿ.ಜೆ.ಅನಿಲ್
ತೀರ್ಥಹಳ್ಳಿ :ತ್ರಿಯಂಬಕಪುರ ಗ್ರಾಮ ಪಂಚಾಯತಿಗೆ 2023-24 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾಾರ ಲಭಿಸಿದ್ದು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಪ್ರೋತ್ಸಾಹ ಧನವಾಗಿ 5 ಲಕ್ಷ ರೂಪಾಯಿ ಬಿಡುಗಡೆಗೆ ಆದೇಶ ನೀಡಿದೆ.
ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14 ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯತಿಯನ್ನು ಗಾಂಧಿ ಗ್ರಾಮ ಪುರಸ್ಕಾಾರಕ್ಕೆ ಆಯ್ಕೆ ಮಾಡಿ ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾತ್ಮ ಗಾಂಧಿಯವರ ಸ್ಮರಣಾರ್ಥ ಗಾಂಧಿ ಗ್ರಾಮ ಪುರಸ್ಕಾರವನ್ನು ಗಾಂಧಿ ಜಯಂತಿಯಂದು ನೀಡಲಾಗುತ್ತಿತ್ತು.
ಬರಬರುತ್ತಾ ಪಂಚಾಯತ್ ರಾಜ್ ವ್ಯವಸ್ಥೆಯ ಧ್ಯೋತಕದ ಜೊತೆಗೆ ಪ್ರತಿಷ್ಠೆಯಾಗಿ ಮಾರ್ಪಟ್ಟ ಈ ಪುರಸ್ಕಾಾರಕ್ಕಾಗಿ ಪಂಚಾಯಿತಿಗಳು ಕಾರ್ಯ ನಿರ್ವಹಿಸತೊಡಗಿದವು. ಪ್ರಸಕ್ತ ಬಾರಿಯ ಅಂದರೆ 2023-24 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಗಾಂಧಿ ಜಯಂತಿಯಂದೇ ನೆರವೇರಬೇಕಾಗಿದ್ದರೂ ಕಾರಣಾಂತರಗಳಿಂದ ಸಮಾರಂಭ ಮೂಂದೂಡಲ್ಪಟ್ಟು ಇದೀಗ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅರ್ಹ ಪಂಚಾಯತಿಗಳ ಹೆಸರುಗಳು ಘೋಷಣೆಯಾಗುವುದರ ಜೊತೆಗೆ 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ಗಾಂಧಿಗ್ರಾಮ ಪುರಸ್ಕೃತ ಪಂಚಾಯತಿಗಳಿಗೆ ಬಿಡುಗಡೆ ಮಾಡಿದೆ.
ಕಳೆದ ಎರಡು ವರ್ಷಗಳಿಂದ ಗಾಂಧಿ ಗ್ರಾಮ ಪುರಸ್ಕಾಾರಕ್ಕೆ ಪೈಪೋಟಿ ನಡೆಸುತ್ತಿದ್ದ ತ್ರಿಯಂಬಕಪುರ ಗ್ರಾಮ ಪಂಚಾಯಿತಿಗೆ ಪ್ರಥಮ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು, ಆ ಭಾಗದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸುವಂತಾಗಿದೆ.
ಗಾಂಧಿ ಗ್ರಾಾಮ ಪುರಸ್ಕಾರ ದೊರೆತಿರುವುದು ತ್ರಿಯಂಬಕಪುರ ಪಂಚಾಯಿತಿಯವರ ಕಾರ್ಯಕ್ಷಮತೆಯ ಫಲ - ಶಾಸಕ ಆರಗ
ತ್ರಿಯಂಬಕಪುರ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ಅತ್ಯಂತ ಶ್ಲಾಘನೀಯ ಸಂಗತಿ. ಅಧ್ಯಕ್ಷ ಅನಿಲ್ ರವರ ಕಾರ್ಯತತ್ಪರತೆಯ ಪರಿಣಾಮ ಪಂಚಾಯತಿ ಇಂದು ಈ ಪುರಸ್ಕಾರಕ್ಕೆ ಭಾಜನವಾಗಿದೆ. ಆರಂಭದಿಂದಲೂ ಅತ್ಯಂತ ಜನಸ್ನೇಹಿಯಾಗಿ ಪಂಚಾಯತಿ ಆಡಳಿತವನ್ನು ಕೊಂಡೋಯ್ದು ಯಾವುದೇ ಸ್ವಂತ ಸಂಪನ್ಮೂಲಗಳಿಲ್ಲದ ಪಂಚಾಯತಿಯನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸುವಲ್ಲಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ಶ್ರಮವನ್ನು ಗಮನಿಸುತ್ತಾ ಬಂದಿದ್ದೇನಲ್ಲದೆ ನನ್ನ ಅನುದಾನದಿಂದಲೂ ಪಂಚಾಯತಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಇದು ಇತರ ಪಂಚಾಯಿತಿಗಳಿಗೂ ಮಾದರಿಯಾಗಬೇಕು.
ಗ್ರಾಮೀಣಾಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ, ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆ ತಂದಾಗ ಮಾತ್ರ ಇಂತಹ ಯಶಸ್ಸು ಸಾಧ್ಯ. ಹೀಗೆ ನನ್ನ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿಗಳು ಪ್ರಶಸ್ತಿ ಪಡೆಯಬೇಕೆಂಬುದು ನನ್ನ ಆಸೆಯಾಗಿದ್ದು, ಈ ಹಿಂದೆಯೂ ಅನೇಕ ಗ್ರಾಮ ಪಂಚಾಯಿತಿಗಳು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 2023-24 ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾಾರಕ್ಕೆ ಭಾಜನರಾದ ತ್ರಿಯಂಬಕಪುರ ಗ್ರಾಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಸದಸ್ಯರು, ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಪ್ರಶಸ್ತಿಗೆ ಭಾಜನರಾಗಲು ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು - ಅನಿಲ್ ಟಿ. ಜೆ
ಕಳೆದ ಮೂರು ವರ್ಷಗಳಿಂದ ತ್ರಿಯಂಬಕಪುರ ಗ್ರಾಾಮಪಂಚಾಯತಿ ಅಧ್ಯಕ್ಷನಾಗಿ ಶಕ್ತಿ ಮೀರಿ ಸೇವೆ ಸಲ್ಲಿಸುತ್ತಾಾ ಬಂದಿದ್ದೇನೆ.ಮಹಾತ್ಮ ಗಾಂಧಿಯವರ ಕನಸಿನಂತೆ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುವುದು ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರೆ ಮಾತ್ರ ದೇಶ ಕಟ್ಟುವ ಕೆಲಸವಾಗುತ್ತದೆ ಎಂಬಂತೆ ಪಂಚಾಯತಿ ಆಡಳಿತವನ್ನು ನಡೆಸಲಾಗಿದೆ. ಸರ್ಕಾರ ನೀಡಿದ ಅನುದಾನವನ್ನು ಅಚ್ಚುಕಟ್ಟಾಗಿ, ಗುಣಾತ್ಮಕವಾಗಿ ಬಳಸುವುದರ ಜೊತೆಗೆ ಪಂಚಾಯತ್ ರಾಜ್ ಇಲಾಖೆಯ ನಿಯಮಾನುಸಾರ ಕಾರ್ಯನಿರ್ವಹಿಸಿ ಪಂಚಾಯತಿ ವ್ಯಾಪ್ತಿಯ ಎಲ್ಲಾ ಇಲಾಖೆಯ ವಿಭಾಗಕ್ಕೂ ಒತ್ತು ನೀಡಿ ಕೆಲಸ ನಿರ್ವಹಿಸುವುದರ ಜೊತೆಗೆ ಶೈಕ್ಷಣಿಕ ಪ್ರಗತಿ, ಆರೋಗ್ಯ, ನೈರ್ಮಲ್ಯ ಹಾಗೂ ಮಹಿಳಾ ಸಬಲೀಕರಣದತ್ತ ಶ್ರಮ ವಹಿಸಿದ್ದು ಪಂಚಾಯತ್ ಆಡಳಿತದ ಕಾರ್ಯ ವೈಖರಿಯನ್ನು ದಾಖಲೆ ಸಹಿತ ಪರಿಶೀಲಿಸಿ ತಾಲೂಕಿನಲ್ಲಿ ಅತ್ಯುತ್ತಮ ಆಡಳಿತ ನೀಡಿದ ಗ್ರಾಮಪಂಚಾಯತಿಯಾದ ತ್ರಿಯಂಬಕಪುರ ಗ್ರಾಮಪಂಚಾಯತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಈ ಪ್ರಶಸ್ತಿಗೆ ಭಾಜನರಾಗಲು ಸಹಕರಿಸಿದ ಪಂಚಾಯತಿಯ ಎಲ್ಲಾ ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು, ಪಂಚಾಯತಿ ವ್ಯಾಪ್ತಿಯ ಅಧಿಕಾರಿ ವರ್ಗ ಹಾಗೂ ಗ್ರಾಮಸ್ಥರಿಗೆ ಅನಂತ ಅನಂತ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ.
ಅಧ್ಯಕ್ಷರ ಆಡಳಿತ ವೈಖರಿ - ಗ್ರಾಾಮೀಣಾಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಟಾನ ಶ್ಲಾಘನೀಯ : ಶೈಲಾ- ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು
ತಾಲೂಕಿನಲ್ಲಿಯೇ ಸಮರ್ಪಕ ರೀತಿಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಆಡಳಿತ ನಿರ್ವಹಣೆ ಮಾಡುವಲ್ಲಿ ತ್ರಿಯಂಬಕಪುರ ಪಂಚಾಯತಿ ಅಧ್ಯಕ್ಷರಾದ ಅನಿಲ್ ಮೇಲುಗೈ ಸಾಧಿಸಿದ್ದಾರೆ. ಅಭಿವೃದ್ಧಿ ಅಧಿಕಾರಿಗಳಿಲ್ಲದ ಸಂದರ್ಭದಲ್ಲಿಯೂ ಪಂಚಾಯತಿ ವ್ಯವಸ್ಥೆಗೆ ಎಳ್ಳಷ್ಟೂ ಕುಂದುಂಟಾಗದಂತೆ ಕಾರ್ಯ ನಿರ್ವಹಿಸಿದ್ದಲ್ಲದೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅಗತ್ಯವಿರುವ ಅಷ್ಟೂ ಕಡತಗಳನ್ನು ಇತರೆ ಸಿಬ್ಬಂದಿಗಳ ಸಹಕಾರದೊಂದಿಗೆ ಖುದ್ದು ಅಧ್ಯಕ್ಷರೇ ತಯಾರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುವ ಜವಾಬ್ದಾಾರಿ ಹೊತ್ತದ್ದು ನಿಜಕ್ಕೂ ಶ್ಲಾಘನೀಯ.
ಪಂಚಾಯತಿ ಪ್ರಗತಿ ಕುರಿತ ಪ್ರಶ್ನಾವಳಿಗಳ ಕಂಡಿಕೆಗಳನ್ನು ಅಧ್ಯಕ್ಷರು ಸ್ವತಃ ಸಿದ್ದಪಡಿಸುತ್ತಾರೆಂದರೆ ಪಂಚಾಯತಿ ಆಡಳಿತದಲ್ಲಿನ ಅವರ ಶ್ರಮ ಹಾಗೂ ಶ್ರದ್ದೆಗಳು ಎಷ್ಟರಮಟ್ಟಿಗಿದೆಯೆಂದು ನಾವು ಅರಿಯಬೇಕು. ಯಾವುದೇ ಸ್ವಂತ ಸಂಪನ್ಮೂಲಗಳು ಹಾಗೂ ಆದಾಯದ ಮೂಲಗಳಿಲ್ಲದ ತ್ರಿಯಂಬಕಪುರ ಪಂಚಾಯತಿಗೆ ನನ್ನ ಮೇಲುಸ್ತುವಾರಿಯಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಸಂತಸ ತಂದಿದೆ.
