ಹಳ್ಳಿ ಹಳ್ಳಿಗಳನ್ನು ಸದೃಢವಾಗಿ ಕಟ್ಟಿದರೆ ಅದು ದೇಶವನ್ನೇ ಕಟ್ಟಿದ ಹಾಗೆ - ಎಸ್ ರಂಜಿತ್ tth

ಹಳ್ಳಿ ಹಳ್ಳಿಗಳನ್ನು ಸದೃಢವಾಗಿ ಕಟ್ಟಿದರೆ ಅದು ದೇಶವನ್ನೇ ಕಟ್ಟಿದ ಹಾಗೆ - ಎಸ್ ರಂಜಿತ್ 


ತೀರ್ಥಹಳ್ಳಿ : ಐವತ್ತರ ದಶಕದಿಂದ ಇಂದಿನವರೆಗೆ ನಮ್ಮ ದೇಶವೂ ಬೆಳೆದು ಬಂದ ಹಾದಿ ರೋಚಕವಾಗಿದೆ. ಒಂದು ಸೈಕಲ್ ಹಿಂಭಾಗದಲ್ಲಿ ಪುಟ್ಟ ರಾಕೆಟ್ ಹೊತ್ತು ಬಾಹ್ಯಕಾಶದ ಕನಸನ್ನು ಹೊತ್ತ ಅರವತ್ತರ ದಶಕದ ಭಾರತ ಇಂದು ಅದೇ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿದೆ. ಯುದ್ಧದಲ್ಲಿ ಹಿನ್ನಡೆ ಪಡೆದ 70ರ ದಶಕದ ಭಾರತ ಇಂದು ಹಲವಾರು ದೇಶಕ್ಕೆ ಯುದ್ಧ ವಿಮಾನಗಳನ್ನು ಯುದ್ಧ ಕ್ಷಿಪಣಿಗಳನ್ನು ಯುದ್ಧದ ಸಲಕರಣೆಗಳನ್ನು ಬರಿ ರಫ್ತು ಮಾಡುವುದಲ್ಲದೆ ಜಾಗತಿಕವಾಗಿ ನಾಲ್ಕನೇ ಅತ್ಯಂತ ಬಲಿಷ್ಠ ಸೈನ್ಯ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂದು ತಾಲೂಕಿನ ದಂಡಾಧಿಕಾರಿ ಎಸ್ ರಂಜಿತ್ ತಿಳಿಸಿದರು.


ಭಾನುವಾರ ಯು ಆರ್ ಅನಂತಮೂರ್ತಿ ಶಾಲೆಯ ಕ್ರೀಡಾಂಗಣದಲ್ಲಿ ನಡೆದ  76 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.


ಬಡತನ, ಬರ ಹಾಗೂ ಕೃಷಿ ಉತ್ಪನ್ನಗಳಿಗೆ ಬೇರೆ ದೇಶಗಳಿಗೆ ಅವಲಂಭಿತರಾದ 80 ರ ದಶಕದ ಭಾರತ ಇಂದು ಹಲವಾರು ದೇಶಗಳಿಗೆ ಖರ್ಚು ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ 90ರ ದಶಕದ ಭಾರತ ಇಂದು ಐದನೇ ಅತ್ಯಂತ ಬಲಿಷ್ಠ ಆರ್ಥಿಕತೆ ಹೊಂದಂತಹ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.


ಕಲೆ, ಶಿಕ್ಷಣ, ಜ್ಞಾನ, ವಿಜ್ಞಾನ ತಂತ್ರಜ್ಞಾನ,ಆರ್ಥಿಕತೆ ಸುರಕ್ಷತೆ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪು ಮೂಡಿಸಿದ ಹೆಮ್ಮೆಯ ಭಾರತ ನಮ್ಮದು. ಗಣರಾಜ್ಯವಾಗಿ ಇಂದಿಗೆ 76 ವರ್ಷಗಳು ಆಗಿದೆ. ಈ ಆಚರಣೆಯ ಅಗತ್ಯತೆ ಮತ್ತು ದೇಶ ಕಟ್ಟುವ ಅನಿವಾರ್ಯತೆ ಇದೆಯೇ ಎಂಬುವ ಪ್ರೆಶ್ನೆ ಸಹಜ . ಆದರೆ ದೇಶ ಕಟ್ಟುವ ಪ್ರಕ್ರಿಯೆ ನಿರಂತರವಾದದ್ದು. ದೇಶವನ್ನು ಕಟ್ಟಲು ಡೆಲ್ಲಿಯನ್ನೇ ಕಟ್ಟಬೇಕೆಂದೇನಿಲ್ಲ. ನಮ್ಮ ಹಳ್ಳಿ ಹಳ್ಳಿಗಳನ್ನು ಸದೃಢವಾಗಿ ಕಟ್ಟಿದರೆ ಅದು ದೇಶವನ್ನೇ ಕಟ್ಟಿದ ಹಾಗೆ ಎಂದರು.


ತೀರ್ಥಹಳ್ಳಿ ಎಂದರೆ ನೆನಪಾಗುವುದು ಇದೊಂದು ಸಾಹಿತಿಗಳ ನಾಡು, ಪ್ರವಾಸೋದ್ಯಮದ ಬೀಡು, ಧಾರ್ಮಿಕ ಪುಣ್ಯಕ್ಷೇತ್ರ, ಆದರೆ ಮುಂದಿನ 20 ವರ್ಷದ ದೂರದೃಷ್ಟಿಯ ತೀರ್ಥಹಳ್ಳಿ ನೋಡಿದರೆ ಚಿತ್ರಣ ಸ್ವಲ್ಪ ಬದಲಾದಿತು, ಕಳೆದ ಒಂದು ವರ್ಷದಲ್ಲಿ ಬಾಳಿ ಬೆಳಗಬೇಕಾದ 11 ಬಾಲಕಿಯರು ಫೋಕ್ಸೊ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಕೇವಲ ಒಂದೇ ಬೆಳೆಯ ಬೆಲೆಯನ್ನಷ್ಟೇ  ಅವಲಂಭಿತರಾದ ನಮ್ಮ ಭಾಗದ ರೈತರು ಮುಂದೆ ಬೆಳೆಯು ಕುಂಠಿತವಾದಲ್ಲಿ ಅವರ ಜೀವನದ ಪರಿಸ್ಥಿತಿ ಊಹಿಸಲು ಅಸಾಧ್ಯ ಎಂದರು.


ಹುಟ್ಟು ಊರಿನಲ್ಲಿಯೇ ಬೆಳೆಯಬೇಕಾದ ನಮ್ಮ ಮಕ್ಕಳು ದೂರದ ಊರುಗಳಲ್ಲಿ ಜೀವನ ಕಟ್ಟಿಕೊಂಡು ಹಬ್ಬಕ್ಕೆ ಅಥವಾ ಇತರ ಕಾರ್ಯಕ್ರಮಗಳಿಗಾಗಿ ಬರುವುದನ್ನು ನೋಡಿದರೆ ಮಲೆನಾಡು ವೃದ್ಧಾಶ್ರಮ ಆದರೂ ಆಶ್ಚರ್ಯ ಪಡಬೇಕಾಗಿಲ್ಲ. ಎಲ್ಲದಕ್ಕೂ ಮೂಲ ಕಾರಣ  ಇಲ್ಲಿ ಆರ್ಥಿಕತೆ ಸೃಜನೆ ಮಾಡುವ ಅವಕಾಶ ಬೇಕಾಗಿದೆ. ನಮಗೆ ಕಾಡು ಕಡಿದು ಕಾರ್ಖಾನೆ ಬೇಕಾಗಿಲ್ಲ ಆದರೆ ನಮ್ಮ ಮಕ್ಕಳು ಉನ್ನತ  ಅಧಿಕಾರಿಗಳು ಆಗುವಂತಹ  ತರಬೇತಿ ಶಿಬಿರಗಳು ನಮಗೆ ಬೇಕಾಗಿದೆ ಎಂದರು.


ಈ ಸಂದರ್ಭದಲ್ಲಿ ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಹಲವರನ್ನು ಸನ್ಮಾನಿಸಲಾಯಿತು.


ಈ ವೇಳೆ ಶಾಸಕ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೈಲಾ, ಪೊಲೀಸ್ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್ ಸೇರಿದಂತೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಸಾರ್ವಜನಿಕರು ಭಾಗಿಯಾಗಿದ್ದರು.







Previous Post Next Post