ನದಿಯ ನೀರನ್ನು ನದಿಗೆ ಚೆಲ್ಲಿ ಎಂಬ ತತ್ವ ಪರಿಪಾಲಿಸುತ್ತಿರುವ ನಿತ್ಯ ಅನ್ನಸಂತರ್ಪಣಾ ಸಮಿತಿ...!
ತೀರ್ಥಹಳ್ಳಿ : ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆ ಮಾತಿದೆ, ಹಾಗೆ ನದಿಯ ನೀರನ್ನು ನದಿಗೆ ಚೆಲ್ಲಿ ಎಂಬ ಶ್ರೀ ರಾಮೇಶ್ವರ ದೇವಸ್ಥಾನದ ನಿತ್ಯ ಅನ್ನ ಸಂತರ್ಪಣಾ ಸಮಿತಿಯವರು ಪರಿಪಾಲಿಸುತ್ತಿದ್ದಾರೆ. ಹೌದು ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ, ಎಳ್ಳಮಾವಾಸ್ಯೆ ಜಾತ್ರೆ ಹೀಗೆ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿತ್ತು.
ಆದರೆ ಕಳೆದ ಮೂರು ವರ್ಷಗಳಿಂದ ರಾಮೇಶ್ವರ ದೇವಸ್ಥಾನದಲ್ಲಿ ನಿತ್ಯ ಅನ್ನ ಸಂತರ್ಪಣೆ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿದೆ. ಆದರೆ ಕೆಲವು ಮಂದಿಯ ಬೇಜವಾಬ್ದಾರಿತನದಿಂದ ನಲ್ಲಿಯ ನೀರು ನಿರಂತರ ಪೋಲಾಗುತ್ತಿದ್ದು ಮಲಿನ ನೀರು ತುಂಗಾ ನದಿಯ ಪಾಲಾಗುತ್ತಿದೆ.
ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತವಾಗಿ ಈಗಾಗಲೇ ಎಲ್ಲಾ ರೀತಿಯ ತಯಾರಿಗಳು ತುಂಗಾ ನದಿಯ ದಡದ ಅಕ್ಕಪಕ್ಕದಲ್ಲಿ ಜಾತ್ರಾ ಸಮಿತಿಯಿಂದ ನಡೆಯುತ್ತಿದ್ದು ಮೂರು ದಿನಗಳ ಪರ್ಯಂತ ಲಕ್ಷಾಂತರ ಮಂದಿ ಜನರು ಜಾತ್ರೆಯಲ್ಲಿ ಪಾಲ್ಗೊಂಡು ನಂತರ ಅನ್ನ ಪ್ರಸಾದವನ್ನು ಸ್ವೀಕರಿಸಲಿದ್ದಾರೆ. ಆದರೆ ಜಾತ್ರೆಗೆ ಪ್ರಸಾದ ಮಾಡುವ ಉದ್ಯಾನವನದ ಜಾಗದಲ್ಲಿ ರಾಮೇಶ್ವರ ಕಲ್ಯಾಣ ಮಂಟಪದಿಂದ ನಿತ್ಯ ಊಟ ಮಾಡಿ ಕೈ ತೊಳೆದ ನೀರು, ಪಾತ್ರೆ ತೊಳೆದ ನೀರು, ಅನ್ನದ ತಿಳಿ ಹೀಗೆ ಅನುಪಯುಕ್ತವಾದ ಕೊಳಚೆ ನೀರು, ಜಲಪಾತದ ರೀತಿ ಹರಿಯುತ್ತಿದ್ದು ಇದರಿಂದ ಅಲ್ಲಿನ ಉದ್ಯಾನವನದ ವಾತಾವರಣ ಗಬ್ಬೆದ್ದು ನಾರುತ್ತಿದೆ .
ತಕ್ಷಣವೇ ಸಂಬಂಧಪಟ್ಟವರು ಈ ಬಗ್ಗೆ ಗಮನವಹಿಸಿ ಮಲಿನದ ನೀರನ್ನು ಬೇರೆಡೆಗೆ ಬಿಡುವ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು ಎಂಬ ಮಾತು ಭಕ್ತ ವೃಂದದವರಿಂದ ಕೇಳಿ ಬಂದಿದೆ.
