ತುಂಗಾ ಕಮಾನು ಸೇತುವೆಗೆ ಬಂತು ಜೀವ ಕಳೆ!
ಸುಣ್ಣ ಬಣ್ಣ, ಹೆಸರು ಹಾಗೂ ವಿದ್ಯುತ್ ಅಲಂಕಾರದೊಂದಿಗೆ ಜಗಮಗ!
ತೀರ್ಥಹಳ್ಳಿ : ತೀರ್ಥಹಳ್ಳಿ ಎಂದರೆ ಎಲ್ಲರಿಗೂ ನೆನಪಾಗುವುದು ತುಂಗಾ ಕಮಾನು ಸೇತುವೆ. ಜನರಿಗೆ ಮಾತ್ರವಲ್ಲದೆ ಗೂಗಲ್ ನಲ್ಲೂ ತೀರ್ಥಹಳ್ಳಿ ಎಂದಾಕ್ಷಣ ಬರುವ ಚಿತ್ರಗಳೇ ತುಂಗಾ ಕಮಾನು ಸೇತುವೆಯದ್ದು. ಆದರೆ ವರ್ಷಕ್ಕೊಮ್ಮೆ ಬರುವ ಎಳ್ಳಮಾವಾಸ್ಯೆ ಜಾತ್ರೆಗೆ ಸುಣ್ಣ ಬಣ್ಣ ಹೊಡೆದು ಅಲಂಕಾರ ಮಾಡಲಾಗುತ್ತದೆ. ಕೆಲವು ವರ್ಷಗಳಿಂದ ಅರ್ಧಂ ಬರ್ಧ ಸುಣ್ಣ ಬಣ್ಣ ಹೊಡೆಯುತ್ತಿದ್ದ ಕೆಲವು ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದ್ದು ಶಿವಮೊಗ್ಗ ಸುದ್ದಿ ಮಾಧ್ಯಮ.
ಈಗ ತುಂಗಾ ಕಮಾನು ಸೇತುವೆಗೆ ಸುಣ್ಣ ಬಣ್ಣ, ಜಯಚಾಮರಾಜೇಂದ್ರ ಸೇತುವೆ ಎನ್ನುವ ಹೆಸರು ಹಾಗೂ ವಿದ್ಯುತ್ ಅಲಂಕಾರದೊಂದಿಗೆ ಜಗಮಗಿಸುತ್ತಿದೆ. ಹೌದು ಸುಣ್ಣ ಬಣ್ಣ ಹಾಗೂ ಹೆಸರು ಬರೆಯುವ ಕೆಲಸವನ್ನು ಈ ಬಾರಿ ಅಭಿನವ ವರ್ಕ್ಸ್ ಶಾಪ್ ಮಾಲೀಕರಾದ ರಾಘವೇಂದ್ರ ಅವರು ವಹಿಸಿಕೊಂಡಿದ್ದರು. ಅದರಂತೆ ಒಂದು ದಿನ ರಸ್ತೆ ಸಂಚಾರ ಬಂದ್ ಮಾಡಿ ಸುಣ್ಣ ಬಣ್ಣ ಹೊಡೆಯಲಾಗಿತ್ತು.
ಶನಿವಾರ ರಾತ್ರಿ ಸೇತುವೆಗೆ ಜೀವ ಕೊಡುವ ಹೆಸರನ್ನು ಬರೆಯಲಾಗಿದೆ. ಈಗಾಗಲೇ ವಿದ್ಯುತ್ ದೀಪಾಲಂಕಾರ ಸಹ ಮಾಡಲಾಗಿದ್ದು ಒಟ್ಟಿನಲ್ಲಿ ಈ ಬಾರಿ ಜಾತ್ರೆಯಲ್ಲಿ ತುಂಗಾ ಕಮಾನು ಸೇತುವೆ ಜಗಮಗಿಸುತ್ತಿದ್ದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಜೊತೆಗೆ ಸೆಲ್ಫಿ ಪಾಯಿಂಟ್ ಆಗಲಿದೆ.
ಐ ಲವ್ ತೀರ್ಥಹಳ್ಳಿ ಎಂಬ ಸೆಲ್ಫಿ ಪಾಯಿಂಟ್ ಬಗ್ಗೆ ಇಂದು ಸಂಜೆ ಶಿವಮೊಗ್ಗ ಸುದ್ದಿ ವಿಶೇಷ ಸುದ್ದಿ ಪ್ರಕಟಿಸಲಿದೆ.
