ತೀರ್ಥಹಳ್ಳಿಯ ಜಾತ್ರೆ ಮತ್ತು ಹೊಸವರ್ಷದ ಹಿನ್ನಲೆ - ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ ಏನೇನು?
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನಡೆಯುವ ಎಳ್ಳಮಾವಾಸ್ಯೆಯ ಜಾತ್ರೆಯ ಅಂಗವಾಗಿ ಹಾಗೂ ಈ ವರ್ಷದ ತೆಪ್ಪೋತ್ಸವವೂ ಹೊಸ ವರ್ಷದಂತೆ ಬರುತ್ತಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಇಲಾಖೆ ಸಾರ್ವಜನಿಕರು ಹಾಗೂ ನಾಗರಿಕರಿಗೆ ಮಹತ್ವದ ಸೂಚನೆಗಳನ್ನು ನೀಡಿದೆ.
ಹಾಗಾದ್ರೆ ಆ ಸೂಚನೆಗಳು ಏನೇನು?
1. ಜಾತ್ರೆಯಲ್ಲಿ ಸಿಸಿ ಕ್ಯಾಮರ ಕಣ್ಗಾವಲಿರಿಸಿದ್ದು, ಎಲ್ಲಾ ಸಾರ್ವಜನಿಕರು ಸಭ್ಯತೆಯಿಂದ ನಡೆದುಕೊಳ್ಳುವುದು.
2. ಜಾತ್ರೆಯಲ್ಲಿ ಪುಂಡಾಟಿಕೆ ಮತ್ತು ಇತರೆ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸತಕ್ಕದ್ದಲ್ಲ. ಇಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ತೀರ್ಥಹಳ್ಳಿ ಪೊಲೀಸ್ ಠಾಣೆ/112/ಮೇಲಾಧಿಕಾರಿಗಳ ಗಮನಕ್ಕೆತರುವುದು.
3. ಜಾತ್ರೆಯಲ್ಲಿ ಜೇಬುಗಳ್ಳರು ಮತ್ತು ಸರಗಳಿದ್ದು, ಧರಿಸುವ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸದೇ ಎಚ್ಚರಿಕೆ ವಹಿಸುವುದು.
4. ತುಂಗಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದಲ್ಲದೇ ಅನಗತ್ಯವಾಗಿ ನದಿಗೆ ಇಳಿಯುವುದು ಈಜಾಡುವುದು ಮಾಡತಕ್ಕದ್ದಲ್ಲ.
5. ಜಾತ್ರೆಯಲ್ಲಿ ಮಹಿಳೆಯರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳುವುದು, ನೂಕುನುಗ್ಗಲನ್ನು ಮಾಡತಕ್ಕದ್ದಲ್ಲ.
6. ರಥಬೀದಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವುದು.
ದೇವಸ್ಥಾನಕ್ಕೆ ಸಂಬಂಧಿಸಿದ ವಾಹನಗಳಿಗೆ ಪಾಸ್ ವಿತರಿಸಲಾಗಿದ್ದು ಪಾಸ್ ಹೊಂದಿರುವ ವಾಹನಗಳು ಮಾತ್ರ ರಥಬೀದಿಯಲ್ಲಿ ಸಂಚರಿಸುವುದು.
ರಥಬೀದಿಯಲ್ಲಿ ಮನೆಗಳನ್ನು ಹೊಂದಿರುವ ಸಾರ್ವಜನಿಕರು ಛತ್ರಕೇರಿ ರಸ್ತೆಯಲ್ಲಿ ಸಂಚರಿಸುವುದು
7. ಜಾತ್ರೆ ಮತ್ತು ಎಳ್ಳಮಾವಾಸ್ಯೆಯ ಪ್ರಯುಕ್ತ ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದರಿಂದ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲುಗಡೆಗೊಳಿಸುವುದು. ವಾಹನಗಳ ನಿಲುಗಡೆಯನ್ನು ನಿಷೇಧಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆಗೊಳಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು.
8. ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸತಕ್ಕದ್ದಲ್ಲ. ಅಪ್ರಾಪ್ತರು ವಾಹನಗಳನ್ನು ಚಲಾಯಿಸತಕ್ಕದ್ದಲ್ಲ. ಉಲ್ಲಂಘಿಸಿದ್ದಲ್ಲಿ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು.
9. ಹೊಸವರ್ಷದ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಯನ್ನು ಹಮ್ಮಿಕೊಂಡಿದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಪೊಲೀಸ್ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು.
ರೆಸಾರ್ಟ್/ಹೋಂಸ್ಟೇ ಮಾಲೀಕರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಲ್ಲಿ ಮುಂಚಿತವಾಗಿ ಪೊಲೀಸ್ ಅನುಮತಿಯನ್ನು ಪಡೆದುಕೊಳ್ಳುವುದಲ್ಲದೇ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ಧ್ವನಿವರ್ಧಕ ಪರವಾನಿಗೆಯನ್ನು ಪಡೆದುಕೊಂಡು ಧ್ವನಿವರ್ಧಕ ಪರವಾನಿಗೆಯ ಮಾರ್ಗಸೂಚಿಗಳನ್ನು ಮತ್ತು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು. ತಪ್ಪಿದ್ದಲ್ಲಿ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು.
10. ಮದ್ಯದಂಗಡಿ ಮಾಲೀಕರು ಅಬಕಾರಿ ಇಲಾಖೆಯಿಂದ ನೀಡಲಾಗುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆಮಾಡಲು ಸೂಚಿಸಿದೆ.
II. ದಿನಾಂಕ:31/12/2024 ರಂದು ನಡೆಯುವ ಶ್ರೀ ರಾಮೇಶ್ವರ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ರಥಬೀದಿಯಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ತೆರೆದಿರುವ ವ್ಯಾಪಾರಸ್ಥರು ರಥಕ್ಕೆ ಅಡ್ಡಿಯಾಗದಂತೆ ತಮ್ಮ ವಸ್ತುಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಹಕರಿಸಲು ಸೂಚಿಸಿದೆ.
12. ತೀರ್ಥಹಳ್ಳಿಯ ಶ್ರೀ ರಾಮೇಶ್ವರಸ್ವಾಮಿಯ ಜಾತ್ರೆ ಮತ್ತು ಹೊಸವರ್ಷದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು/ಮಾರ್ಗಸೂಚಿಗಳನ್ನು ಪಾಲನೆ ಮಾಡುವುದರ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಕೋರಿದೆ.
%20(4)%20(10)%20(8).jpg)