ಎಳ್ಳಮಾವಾಸ್ಯೆ ಜಾತ್ರೆ ಪ್ರಯುಕ್ತ ರಾಮಕೊಂಡದಲ್ಲಿ ಸಾವಿರಾರು ಭಕ್ತರಿಂದ ತೀರ್ಥಸ್ನಾನ
zತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಎಳ್ಳಮಾವಾಸ್ಯೆ ಜಾತ್ರೆಯ ಮೊದಲ ದಿನದ ಕಾರ್ಯಕ್ರಮವಾಗಿ ಇಲ್ಲಿನ ತುಂಗಾನದಿಯ ನಡುವಿನ ಶ್ರೀರಾಮ ಕೊಂಡದಲ್ಲಿ ಸಾವಿರಾರು ಭಕ್ತಾದಿಗಳು ತೀರ್ಥಸ್ನಾನ ಮಾಡುವುದರೊಂದಿಗೆ ಪುನೀತರಾದರು.
ತುಂಗಾನದಿಯಲ್ಲಿ ಇಂದು ಬೆಳಗಿನ ಜಾವ 5ಗಂಟೆಗೆ ಶ್ರೀರಾಮೇಶ್ವರ ದೇವರಿಗೆ ಸಂಪ್ರೊಕ್ಷಣೆ, ಪೂಜಾ ಕಾರ್ಯದ ನಂತರ ಸಾವಿರಾರು ಭಕ್ತರು ಪರಶುರಾಮಕೊಂಡದಲ್ಲಿ ತೀರ್ಥಸ್ನಾನ ಮಾಡಿದರು.
ತಾಲೂಕಿನ ನಾಡ ದೇವತೆ ಎಂದೇ ಹೆಸರಾಗಿರುವ ಶ್ರೀರಾಮೇಶ್ವರ ದೇವರ ಸನ್ನಿಧಿಯಲ್ಲಿ ನಡೆಯುವ ಎಳ್ಳಮಾವಾಸ್ಯೆ ಜಾತ್ರೆಯ ತೀರ್ಥಸ್ನಾನ ಇಂದು ಅತ್ಯಂತ ವಿಜೃಂಭಣೆಯಿಂದ ನೆಡೆಯಿತು. ಭಕ್ತಾದಿಗಳು ಸಾಲುಸಾಲಾಗಿ ಬಂದು ತೀರ್ಥಸ್ನಾನದಲ್ಲಿ ಪಾಲ್ಗೊಂಡಿದ್ದರು. ತುಂಗಾನದಿಯ ಸುತ್ತಮುತ್ತ ಬಿಗಿ ಪೊಲೀಸ್ ಹಾಗೂ ಗೃಹರಕ್ಷಕ ದಳದ ಭದ್ರತೆ ಆಯೋಜನೆ ಮಾಡಲಾಗಿದೆ.
ಇಂದಿನ ತೀರ್ಥಸ್ನಾನಕ್ಕೆ ಹೊರಜಿಲ್ಲೆ ಹಾಗೂ ಬೇರೆ ಊರುಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು. ತೀರ್ಥಸ್ನಾನದ ಶ್ರೀರಾಮ ಕೊಂಡಕ್ಕೆ ತಹಶೀಲ್ದಾರ್ ರಂಜಿತ್ ಎಸ್ ಸಮಿತಿ ಪ್ರಮುಖರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸೇರಿ ಎಲ್ಲಾ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಪ್ರಮುಖರು ಇದ್ದರು.
ಶ್ರೀರಾಮೇಶ್ವರ ದೇವಾಲಯದ ಪಕ್ಕದ ಶ್ರೀರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಭಕ್ತಾದಿಗಳಿಗೆ ಇಂದಿನಿಂದ ಮೂರು ದಿನಗಳ ಪರ್ಯಂತ ಶ್ರೀ ರಾಮೇಶ್ವರ ಅನ್ನದಾಸೋಹ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.