ಶಿವಮೊಗ್ಗದ ಮಹದ್ವಾರ ನಿರ್ಮಾಣಕ್ಕೆ ಕ್ಷಣಗಣನೆ - ಈ ಬಾರಿ ಏನೆಲ್ಲಾ ವಿಶೇಷ ಗೊತ್ತಾ..!?
ಶಿವಮೊಗ್ಗ: ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಜನರ ಕಣ್ಮನ ಸೆಳೆಯುವ ಮಹಾದ್ವಾರ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ.. ಈ ಬಾರಿ ಎರಡು ವಿಶೇಷ ದ್ವಾರ ನಿರ್ಮಾಣ ಮಾಡಲಾಗುತ್ತಿದ್ದು ಇಂದು ರಾತ್ರಿ ದ್ವಾರ ಪ್ರತಿಷ್ಠಾಪನೆಗೊಳ್ಳಲಿದೆ..
ಅಮಿರ್ ಅಹಮದ್ ಸರ್ಕಲ್ ನಲ್ಲಿ ಶಿವಾಜಿ ಮಹಾರಾಜರು ದೇವಿ ತುಳಜಾಭವಾನಿಯಿಂದ ಖಡ್ಗವನ್ನು ಸ್ವೀಕರಿಸುತ್ತಿರುವ ದಿವ್ಯ ದೃಶ್ಯದ ವಿಗ್ರಹವನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ವಿಗ್ರಹಗಳು ಸ್ಥಳಕ್ಕೆ ಬಂದಿದ್ದು ಶಿವಾಜಿ ಮಹಾರಾಜರ ಬೃಹತ್ ವಿಗ್ರಹ ಪ್ರತಿಷ್ಠಾಪನೆಯ ಕಾರ್ಯ ಭರದಿಂದ ಸಾಗುತ್ತಿದೆ. ಕಳೆದ ಬಾರಿ ಈ ಸರ್ಕಲ್ ನಲ್ಲಿ ಪರಶುರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿತ್ತು..
ಈ ದೃಶ್ಯ ನಿರ್ಮಾಣದ ಹಿನ್ನೆಲೆ ಏನು??
ಶಿವಾಜಿ, ನಿನ್ನ ಧರ್ಮನಿಷ್ಠೆ ಹಾಗೂ ಪ್ರಜಾರಕ್ಷಣೆಯ ಸಂಕಲ್ಪದಿಂದ ನಾನು ಪ್ರಸನ್ನಳಾಗಿದ್ದೇನೆ. ಈ ಭೂಮಿಯಲ್ಲಿ ಅಧರ್ಮವನ್ನು ನಾಶಮಾಡಿ, ಧರ್ಮವನ್ನು ಮತ್ತು ಸಜ್ಜನರನ್ನು ರಕ್ಷಿಸಲು ನಿನಗೆ ಈ ದಿವ್ಯ ಖಡ್ಗವನ್ನು ನೀಡುತ್ತಿದ್ದೇನೆ. ಈ ಖಡ್ಗವು ನಿನ್ನ ಬಳಿ ಇರುವವರೆಗೆ ನಿನಗೆ ಯಾವುದೇ ಯುದ್ಧದಲ್ಲಿ ಸೋಲಿಲ್ಲ, ನಿನ್ನ ಸ್ವರಾಜ್ಯದ ಕನಸು ನನಸಾಗುತ್ತದೆ. ಎಂದು ಛತ್ರಪತಿ ಶಿವಾಜಿ ಮಹಾರಾಜರ ಭಕ್ತಿಗೆ ಮೆಚ್ಚಿ ಅವರ ಇಷ್ಟದೇವತೆಯಾದ ತುಳಜಾ ಭವಾನಿಯು ಪ್ರತ್ಯಕ್ಷಳಾಗಿ ಖಡ್ಗವನ್ನು ನೀಡುವಂತ ವಿಶೇಷ ದೃಶ್ಯವನ್ನು ನಿರ್ಮಾಣ ಮಾಡಲಾಗುತ್ತಿದೆ..
ಗಾಂಧಿ ಬಜಾರ್ನಲ್ಲಿ ಪಂಚಮುಖಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ
ಕಳೆದ ಬಾರಿ ಶಿಲ್ಪಿ ಜೀವನ್ ಅವರು ಗಾಂಧಿ ಬಜಾರ್ನ ಮುಖ್ಯ ದ್ವಾರದಲ್ಲಿ ಸಮುದ್ರಮಂಥನದ ಕಥೆಯ ರೂಪಕವನ್ನು ರೂಪಿಸಿದ್ದರು. ಈ ಬಾರಿ ಅದೇ ಸ್ಥಳದಲ್ಲಿ ಪಂಚಮುಖಿ ಆಂಜನೇಯನ ವಿಶೇಷ ಕಲಾಕೃತಿಯನ್ನು ಸಿದ್ಧಪಡಿಸಲಾಗುತ್ತಿದೆ. ಆಂಜನೇಯನ ಎದೆಯೊಳಗಿನ ಹೃದಯದಲ್ಲಿ ಶ್ರೀರಾಮನ ದರ್ಶನವಾಗುವಂತಹ ಕಲ್ಪನೆಯನ್ನು ಬಿಂಬಿಸುವ ದೃಶ್ಯವನ್ನು ದ್ವಾರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಈ ವಿನ್ಯಾಸದ ಮೇಲ್ಭಾಗದಲ್ಲಿ ಆಂಜನೇಯನ ಒಂದು ಮುಖ್ಯ ಮುಖ ಹಾಗೂ ಕೆಳಭಾಗದಲ್ಲಿ ಉಳಿದ ನಾಲ್ಕು ಮುಖಗಳು ಕಾಣುವಂತೆ ರೂಪಿಸಲಾಗಿದೆ. ಈ ಕಲಾಕೃತಿಯು ಇಂದು ಸಂಜೆಯ ವೇಳೆಗೆ ಶಿವಮೊಗ್ಗಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ತದನಂತರ ಮಹಾದ್ವಾರದಲ್ಲಿ ವಿಗ್ರಹ ಅಳವಡಿಕೆ ನೆರವೇರಲಿದೆ
Tags:
ಗಣೇಶೋತ್ಸವ