ಇಂದು ಎರಡು ಗಣಪತಿಗಳ ಸಮಾಗಮ - ಸಾವಿರಾರು ಜನ ಸೇರುವ ನಿರೀಕ್ಷೆ
ದೇವಂಗಿ - ಇಲಿಕೆರೆ ಗಣಪತಿಗಳ ವೈಭವದ ವಿಸರ್ಜನಾ ಮೆರವಣಿಗೆ
ತೀರ್ಥಹಳ್ಳಿ : ತಾಲೂಕಿನ ಅತ್ಯಂತ ವಿಜೃಂಭಿತ ಗಣೇಶೋತ್ಸವಗಳಲ್ಲಿ ಹಾಗೂ ಅತ್ಯಂತ ಹಳೆಯ ಗಣೇಶೋತ್ಸವ ಸಮಿತಿಯಾಗಿರುವ ಈ ಬಾರಿ 100 ನೇ ವರ್ಷದ ಗಣೇಶೋತ್ಸವ ಮಾಡುತ್ತಿರುವ ದೇವಂಗಿಯ ಗಜಾನನ ನಾಟ್ಯ ಸಂಘ ಹಾಗೂ 50 ನೇ ವರ್ಷದ ಗಣೇಶೋತ್ಸವ ನಡೆಸುತ್ತಿರುವ ಹಿಲಿಕೆರೆಯ ಗಜಾನನ ಸೇವಾ ಸಮಿತಿಯ ಮಹಾ ಸಮಾಗಮ ಇಂದು ರಾತ್ರಿ ದೇವಂಗಿಯ ಮಾನಪ್ಪ ಸರ್ಕಲ್ ಸಮೀಪ ಅತ್ಯಂತ ವೈಭವದಿಂದ ನಡೆಯಲಿದೆ.
ಈ ವೇಳೆ ಎರಡು ಸಮಿತಿಗಳ ಡಿಜೆ ಸದ್ದಿಗೆ ಸಾವಿರಾರು ಜನರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಲಕ್ಷಾಂತರ ರೂ ವೆಚ್ಚದ ಬಣ್ಣ ಬಣ್ಣದ ಪಟಾಕಿ ಸಿಡಿಸಿ ತೀರ್ಥಹಳ್ಳಿಯ ಎಳ್ಳಮಾವಾಸ್ಯೆಯ ತೆಪ್ಪೋತ್ಸವವನ್ನು ನೆನಪಿಸುತ್ತಾರೆ. ತೀರ್ಥಹಳ್ಳಿ ತಾಲೂಕಿನಲ್ಲೇ ಈ ಎರಡು ಗಣಪತಿಗಳು ಬಲು ವಿಭಿನ್ನ ಎಂದರೆ ತಪ್ಪಾಗಲಾರದು.
ಹೌದು. ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ರೀತಿ ಗಣೇಶನ ಹಬ್ಬಕ್ಕೆ ಸುಮಾರು 3 ಗಂಟೆಗಳ ಕಾಲ ಪಟಾಕಿ ಹೊಡೆಯಲಾಗುತ್ತದೆ. ಜತೆಗೆ ಈ ಎರಡು ಗಣಪತಿಗಳು ಪ್ರಸಿದ್ದ ದೇವಂಗಿ ಮಾನಪ್ಪ ಸರ್ಕಲ್ ನಲ್ಲಿ ಸಮಾಗಮ ಆಗುವ ಮೂಲಕ ಸಂಭ್ರಮ ಪಡುತ್ತಾರೆ. ಈ ವೇಳೆ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರಿ ಈ ಗಣೇಶ ಮೂರ್ತಿಗಳ ಸಮಾಗಮ ವೀಕ್ಷಿಸುತ್ತಾರೆ.
ಈ ವೇಳೆ, ಡಿಜೆ, ಚಂಡೆ, ವಾದ್ಯ, ಯುವಕ ಯುವತಿಯರ ಡ್ಯಾನ್ಸ್, ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಇಂದು ಸಂಜೆ 7:30 ರಿಂದ ಪಟಾಕಿ ಪ್ರದರ್ಶನ ನಡೆಯಲಿದ್ದು ಇದನ್ನು ತಾಲೂಕಿನ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.
Tags:
ಗಣೇಶೋತ್ಸವ