ಕೆಪಿಎಸ್ ಹೊನ್ನೇತಾಳು ಶಾಲೆಗೆ ಖುದ್ದಾಗಿ ಭೇಟಿ ನೀಡುವುದಾಗಿ ತಿಳಿಸಿದ ಮಧು ಬಂಗಾರಪ್ಪ Madhu Bangarappa

ಕೆಪಿಎಸ್ ಹೊನ್ನೇತಾಳು ಶಾಲೆಗೆ ಖುದ್ದಾಗಿ ಭೇಟಿ ನೀಡುವುದಾಗಿ ತಿಳಿಸಿದ ಮಧು ಬಂಗಾರಪ್ಪ 

ತೀರ್ಥಹಳ್ಳಿ : ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಹೊನ್ನೇತಾಳು ಶಾಲೆಯ ಅಭಿವೃದ್ಧಿ, ಗ್ರಾಮಾಂತರ ಭಾಗದಲ್ಲಿದ್ದರೂ ಸಹ ಅತಿ ಹೆಚ್ಚು ಮಕ್ಕಳ ಸೇರ್ಪಡೆ, ಎಸ್'ಡಿಎಂಸಿಯವರ ಕಾರ್ಯ ಚಟುವಟಿಕೆ, ಶಿಕ್ಷಕರ ಅತ್ಯುತ್ತಮ ಕೆಲಸ, ಗ್ರಾಮಸ್ಥರ ಸಹಾಯ 
ಹೀಗೆ ಗ್ರಾಮವೊಂದರ ಪ್ರತಿಯೊಬ್ಬರ ಒಗ್ಗಟ್ಟಿನಿಂದಾಗಿ ಈ ಶಾಲೆ ಈಗಾಗಲೇ ರಾಜ್ಯಾದ್ಯಂತ  ಹೆಸರು ಮಾಡುತ್ತಿದೆ. ಈ ಬಗ್ಗೆ ಪತ್ರಿಕೆ ಒಂದರಲ್ಲಿ ಬಂದ ಸುದ್ದಿಯನ್ನ ಗಮನಿಸಿದ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಲೆಗೆ ಖುದ್ದಾಗಿ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ಮಕ್ಕಳ ಕೊರತೆಯಿಂದ ಈ
ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತಂತೆ. ಕೇವಲ 19 ಮಕ್ಕಳು ಮಾತ್ರ ಇದ್ದರಂತೆ. ಆದರೆ ಈಗ ಗ್ರಾಮಸ್ಥರು, ಎಸ್‌ಡಿಎಂಸಿ, ಶಿಕ್ಷಕರು ಮತ್ತು ದಾನಿಗಳ ಒಗ್ಗಟ್ಟಿನ ಪ್ರಯತ್ನದಿಂದ ಈ ಶಾಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ದಾಖಲಾತಿ ಹೊಂದಿರುವ ಶಾಲೆಗಳಲ್ಲಿ ಒಂದಾಗಿದೆ ಎಂದು ತಿಳಿದಾಗ ಹೆಮ್ಮೆ ಎನಿಸಿತು. ಈ ವರ್ಷ 1ರಿಂದ 7ನೇ ತರಗತಿವರೆಗೆ 134 ಮಕ್ಕಳು ಇಲ್ಲಿ ದಾಖಲಾಗಿದ್ದಾರಂತೆ. ಇದು ನನ್ನ ಪಾಲಿಗಂತೂ ಬಹುದೊಡ್ಡ ಸುದ್ದಿ ಎಂದು ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಯಾವುದೇ ಶಾಲೆಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಸದಾ ಸಿದ್ಧವಿದೆ. ಒಮ್ಮೆಗೆ ಅಲ್ಲವಾದರೂ ಹಂತ ಹಂತವಾಗಿ ಸೌಕರ್ಯಗಳನ್ನು ಒದಗಿಸಿ, ನಮ್ಮ ಸರ್ಕಾರಿ ಶಾಲೆಗಳನ್ನು ಬಲಪಡಿಸುತ್ತೇವೆ. ಆದರೆ ಈ ನಮ್ಮ ಕಾರ್ಯಕ್ಕೆ ಪೋಷಕರ, ಎಸ್‌ಡಿಎಂಸಿ ಸಮಿತಿಯವರ ಮತ್ತು ಗ್ರಾಮಸ್ಥರ ಸಹಕಾರ ತೀರಾ ಅಗತ್ಯ. ಅವರೆಲ್ಲರೂ ಹೊನ್ನೇತಾಳವಿನ ಗ್ರಾಮಸ್ಥರಂತೆ ಸಹಕಾರ ನೀಡಿದಲ್ಲಿ ನಮ್ಮ ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯನ್ನೂ ಇದೇ ರೀತಿಯಾಗಿ ಅಭಿವೃದ್ಧಿಪಡಿಸಬಹುದು. ಅತ್ಯುತ್ತಮ ಶಿಕ್ಷಣ ನೀಡುವ ಕೇಂದ್ರಗಳಾಗಿಸಬಹುದು ಎಂದಿದ್ದಾರೆ..

ಮುಂದೆ ನಾನು ಆಗುಂಬೆ ಕಡೆ ಪ್ರವಾಸ ಕೈಗೊಂಡಾಗ ಖಂಡಿತವಾಗಿಯೂ ಈ ಶಾಲೆಗೆ ಭೇಟಿ ನೀಡಿ, ಖುದ್ದಾಗಿ ಈ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ. ಈಗಾಗಲೇ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ಈ ಶಾಲೆಯ ಎಸ್‌ಡಿಎಂಸಿ ಸದಸ್ಯರ ಬಾಯಿಯಿಂದಲೇ ಅವರ ಈ ಯಶೋಗಾಥೆಯನ್ನು ಕೇಳಲು ನಾನು ಉತ್ಸುಕನಾಗಿದ್ದೇನೆ  ಎಂದು ತಿಳಿಸಿದ್ದಾರೆ..
Previous Post Next Post