ಹಿಂದೂ ದೇವಾಲಯಗಳ ಕಾಣಿಕೆ ಹುಂಡಿಯ ಹಣವನ್ನು ಮಂಜೂರು ಮಾಡಿಕೊಂಡಿರುವ ಅಧಿಕಾರಿ/ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ಪತ್ರ
ತೀರ್ಥಹಳ್ಳಿ : ನನ್ನ ವಿಧಾನಸಭಾ ಕ್ಷೇತ್ರದ ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಶ್ರೀ.ಚೌಡೇಶ್ವರಿ ಶ್ರೀ.ಭೂತರಾಯ ಹಜರತ್ ಸೈಯದ್ ಸಾದತ್ ಅಲಿ ದರ್ಗಾ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಯ ಹಣದಿಂದ ಉಪವಿಭಾಗಾಧಿಕಾರಿಗಳು ಶಿವಮೊಗ್ಗ ಇವರು ಜಾತ್ರಾ ಬೋನಸ್ ಆಗಿ ಒಂದು ತಿಂಗಳ ವೇತನವನ್ನು ತಾವೇ ಮಂಜೂರು ಮಾಡಿಕೊಂಡಿರುವುದಲ್ಲದೆ, ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್ ಮತ್ತು ತಾಲ್ಲೂಕು ಕಛೇರಿ ಮುಜರಾಯಿ ಶಾಖೆಯ ವಿಷಯ ನಿರ್ವಾಹಕರು ತಾಲ್ಲೂಕಿನ ಎ, ಬಿ ಮತ್ತು ಸಿ ಗ್ರೇಡ್ ಎಲ್ಲಾ ದೇವಸ್ಥಾನಗಳ ಕಾಣಿಕೆ ಹುಂಡಿಯ ಹಣದಿಂದ ಪ್ರತಿವರ್ಷ ತಾವೇ ಜಾತ್ರಾ ಬೋನಸ್ ಆಗಿ ಒಂದು ತಿಂಗಳ ವೇತನವನ್ನು ಮಂಜೂರು ಮಾಡಿಕೊಂಡಿರುತ್ತಾರೆ.
ಕೆಲವು ದೇವಾಲಯಗಳ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವ ತೀರಾ ಅನಿವಾರ್ಯತೆ ಇದ್ದು,
ದೇವಸ್ಥಾನದ ಹಣ ಇದ್ದಾಗ್ಯೂ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸರ್ಕಾರದ ನಿಯಮಾವಳಿಗಳ ಸಬೂಬು ಹೇಳಿ
ತಿರಸ್ಕರಿಸುವ ಅಧಿಕಾರಿಗಳು, ಕಾಣಿಕೆ ಹುಂಡಿಯ ಹಣವನ್ನು ವೈಯಕ್ತಿಕವಾಗಿ ಬಳಸುವಾಗ ಸರ್ಕಾರದ ನಿಯಮಾವಳಿಗಳನ್ನು ಪಾಲಿಸದೇ ವೇತನ ಪಡೆದಿರುವುದು ಪ್ರಶ್ನಾರ್ಹ ವಿಚಾರವಾಗಿರುತ್ತದೆ. ಜಾತ್ರಾ ಸಂದರ್ಭದಲ್ಲಿ ಸ್ವಚ್ಛತೆ ನೈರ್ಮಲ್ಯತೆ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುವ ಕನಿಷ್ಠ ವೇತನದ ಬಡ ನೌಕರರಿಗೆ ದೇವಸ್ಥಾನದ ಹಣವನ್ನು ಬೋನಸ್ ಆಗಿ ಕೊಡುವ ಉದ್ದೇಶ ಸರ್ಕಾರದ್ದಾಗಿರುತ್ತದೆ. ಆದರೆ ಬಡ ನೌಕರರಿಗೆ ಯಾವುದೇ ಬೋನಸ್ ಹಣವನ್ನು ನೀಡದೇ ತಾವು ಮಾತ್ರ ಎಲ್ಲಾ ದೇವಸ್ಥಾನಗಳಿಂದ ಹಣವನ್ನು ತಾವೇ ಮಂಜೂರು ಮಾಡಿಕೊಂಡಿರುವುದು ತೀರಾ ಅಮಾನವೀಯವಾಗಿರುತ್ತದೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಜರುಗುವ ಜಾತ್ರಾ ಮಹೋತ್ಸವ, ರಥೋತ್ಸವ ಹಾಗೂ ವಿಶೇಷ ಧಾರ್ಮಿಕ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಿದ ದೇವಾಲಯದ ನೌಕರರುಗಳಿಗೆ ಒಂದು ತಿಂಗಳ ವೇತನ ಹಾಗೂ ಸರ್ಕಾರಿ ಅಧಿಕಾರಿ/ ನೌಕರರುಗಳಿಗೆ ಎಂದು ಮಾತ್ರ ನಮೂದಿಸಿದ್ದು, ಉಪವಿಭಾಗಾಧಿಕಾರಿ, ತಹಶೀಲ್ದಾರ್ರವರನ್ನು ಉಲ್ಲೇಖಿಸಿರುವುದಿಲ್ಲ. ಆದರೂ ಜಾತ್ರಾ ಮಹೋತ್ಸವದ ಸಂದರ್ಭಗಳಲ್ಲಿ ತಮ್ಮಗಳ ಯಾವುದೇ ಪಾಲ್ಗೊಳ್ಳುವಿಕೆಯಿಲ್ಲದೇ ಈ ರೀತಿ ನಿಯಮಬಾಹಿರವಾಗಿ ಪ್ರತಿ ದೇವಸ್ಥಾನದ ಖಾತೆಯಿಂದ ತಾವೇ ವೇತನ ಮಂಜೂರು ಮಾಡಿಕೊಂಡಿರುವ ಮೇಲ್ಕಂಡ ಅಧಿಕಾರಿ ಮತ್ತು ಮುಜರಾಯಿ ಶಾಖೆಯ ನೌಕರರ ವಿರುದ್ಧ ತಕ್ಷಣವೇ ತನಿಖೆ ಮಾಡಿ, ಶಿಸ್ತು ಕ್ರಮ ತೆಗೆದುಕೊಳ್ಳುವುದರೊಂದಿಗೆ ಅವರು ಇದುವರೆಗೆ ಪಡೆದಿರುವ ಕಾಣಿಕೆ ಹುಂಡಿ ಹಣವನ್ನು ಅವರಿಂದ ವಸೂಲಿ ಮಾಡುವಂತೆ ಶಾಸಕ ಆರಗ ಜ್ಞಾನೇಂದ್ರ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರಿಗೆ ಪತ್ರವನ್ನು ಬರೆದಿದ್ದಾರೆ..
Tags:
ಆರಗ ಜ್ಞಾನೇಂದ್ರ