ಕ್ರೈಸ್ಟ್ ಕಿಂಗ್ ಸಂಸ್ಥೆಯಲ್ಲಿ ರೋಬೊ ಟೀಚರ್ ಸ್ವಾಗತದೊಂದಿಗೆ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ Christ King

ಕ್ರೈಸ್ಟ್ ಕಿಂಗ್ ಸಂಸ್ಥೆಯಲ್ಲಿ ರೋಬೊ ಟೀಚರ್ ಸ್ವಾಗತದೊಂದಿಗೆ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ 

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ರೋಬೋ ಟೀಚರ್ ಸ್ವಾಗತದೊಂದಿಗೆ ಶಾಲಾ ಆರಂಭವನ್ನು ಅದ್ದೂರಿಯಾಗಿ ನಡೆಸಲಾಯಿತು.  ಸಂಸ್ಥೆಯಲ್ಲಿ ನೂತನವಾಗಿ ಅಳವಡಿಸಲಾಗಿರುವ ಎಐ ತಂತ್ರಜ್ಞಾನಾಧಾರಿತ ರೋಬೋ ಟೀಚರ್ ಕ್ರಿಸ್ಟಿ ಅತಿಥಿಗಣ್ಯರಿಗೆ ಹೂ ನೀಡಿ ಸ್ವಾಗತಿಸಿತು. ಈ ಸಂದರ್ಭದಲ್ಲಿ ರೋಬೋ ಟೀಚರ್ ವಿದ್ಯಾರ್ಥಿಗಳೊಂದಿಗೆ ಚುಟುಕು ಸಂವಹನ ನಡೆಸುವ ಮೂಲಕ ಮಕ್ಕಳಲ್ಲಿ ಹುರುಪು ತುಂಬಿತು. ನಂತರ ವಿದ್ಯಾರ್ಥಿಗಳ ಕೈಯಲ್ಲಿ ದೀಪ ಬೆಳಗಿಸುವುದರ ಮೂಲಕ ಶಾಲಾ ಆರಂಭಕ್ಕೆ ಚಾಲನೆ ನೀಡಲಾಯಿತು. 

ಆಳ್ವಾಸ್ ಇಂಜನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ| ಗುರುಪ್ರಸಾದ್‌ರವರು  ರೋಬೋ ಟೀಚರ್ ಚಟುವಟಿಕೆಯನ್ನು ನಿರ್ವಹಿಸಿದರು. ಸಂಸ್ಥೆಯ ಪ್ರಾಥಮಿಕ ವಿಭಾಗದ ಪ್ರಾಚಾರ್ಯ ಐ ಕ್ರಿಸ್ಟೋಫರ್ ಕೋಟ್ಯಾನ್‌ರವರು ಶಾಲಾ ನಿಯಮ ಹಾಗೂ ಚಟುವಟಿಕೆಗಳ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಕಾರ್ಕಳದಲ್ಲಿ ಪ್ರಪ್ರಥಮವಾಗಿ ನೂತನ ಎಐ  ತಂತ್ರಜ್ಞಾನಾಧಾರಿತ ರೋಬೋ ಟೀಚರ್ ಅಳವಡಿಸಿಕೊಂಡಿರುವುದು ನಮ್ಮ ಸಂಸ್ಥೆಯ ವಿಶೇಷತೆಯಾಗಿದ್ದು ಹೊಸತನದೊಂದಿಗೆ ಬೆರೆತು ಎಲ್ಲರೂ ಶೈಕ್ಷಣಿಕವಾಗಿ ಮುನ್ನಡೆಯಿರಿ” ಎಂದು ಹೇಳಿ ಶುಭ ಹಾರೈಸಿದರು. 

ಪ್ರೌಢಶಾಲಾ ಮುಖ್ಯ ಶಿಕ್ಷಕಿ  ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ  ಉಪಪ್ರಾಚಾರ್ಯೆ ಸಿ. ಜಾಲಿ ಜೇಕಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಜಯಲಕ್ಷ್ಮಿ ಸ್ವಾಗತಿಸಿ,  ಆ್ಯಲಿಸ್ ಲೋಬೊ ಕಾರ್ಯಕ್ರಮ ನಿರೂಪಿಸಿ, ರಮಿತಾ ವಂದಿಸಿದರು. 
Previous Post Next Post