ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ ! ಡಿಸಿ ಆದೇಶ ! ಪರ್ಯಾಯ ಮಾರ್ಗ ಇಲ್ಲಿದೆ 👇
ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 169ಎ ವ್ಯಾಪ್ತಿಯ ಪ್ರಸಿದ್ಧ ಆಗುಂಬೆ ಘಾಟಿ ರಸ್ತೆಯಲ್ಲಿ ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಮತ್ತು ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 15ರಿಂದ ಜಾರಿಗೆ ಬರುವಂತೆ ಮಳೆಗಾಲ ಮುಗಿಯುವವರೆಗೂ ಜಲ್ಲಿ ಮತ್ತು ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಹಿನ್ನೆಲೆ
ಶಿವಮೊಗ್ಗ–ಉಡುಪಿ ಸಂಪರ್ಕಿಸುವ ಮತ್ತೊಂದು ಪ್ರಮುಖ ಮಾರ್ಗವಾದ ಹುಲಿಕಲ್ ಘಾಟಿಯಲ್ಲಿ ಇತ್ತೀಚೆಗೆ ಭೂಕುಸಿತ ಸಂಭವಿಸಿದ್ದು, ರಕ್ಷಣಾತ್ಮಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ.ಇದರಿಂದ ವಾಹನಗಳ ಒತ್ತಡ ಆಗುಂಬೆ ಘಾಟಿಯ ಮೇಲೆ ಹೆಚ್ಚಿದ್ದು, ಮಳೆಗಾಲದಲ್ಲಿ ಅಪಾಯದ ಮಟ್ಟವೂ ಏರಿಕೆಯಾಗಿದೆ.
ಆರೋಗ್ಯ ಸೇವೆಗಳ ಸಂಪರ್ಕ ಕಾಪಾಡಲು ಕ್ರಮ
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ಸಾವಿರಾರು ಜನರು ತುರ್ತು ಚಿಕಿತ್ಸೆಗಾಗಿ ಮಣಿಪಾಲ್, ಉಡುಪಿ ಮತ್ತು ಮಂಗಳೂರು ಆಸ್ಪತ್ರೆಗಳಿಗೆ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಈ ಸಂಪರ್ಕ ಕಡಿತವಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಬಂಧ ಜಾರಿಗೊಳಿಸಲಾಗಿದೆ.
ಪರ್ಯಾಯ ಮಾರ್ಗಗಳ ವಿವರ
ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ:
ತೀರ್ಥಹಳ್ಳಿ – ನಗರ – ನಾಗೋಡಿ – ಕೊಲ್ಲೂರು – ಕುಂದಾಪುರ – ಉಡುಪಿ
ತೀರ್ಥಹಳ್ಳಿ – ಶೃಂಗೇರಿ – ಕೆರೆಕಟ್ಟೆ – ಬಜಗೋಳಿ – ಕಾರ್ಕಳ – ಉಡುಪಿ
ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ:
ಉಡುಪಿ – ಕುಂದಾಪುರ – ಕೊಲ್ಲೂರು – ನಾಗೋಡಿ – ನಗರ – ತೀರ್ಥಹಳ್ಳಿ
ಕಾರ್ಕಳ – ಬಜಗೋಳಿ – ಕೆರೆಕಟ್ಟೆ – ಶೃಂಗೇರಿ – ತೀರ್ಥಹಳ್ಳಿ
ಮಳೆಗಾಲದಲ್ಲಿ ಭೂಕುಸಿತ, ಅಪಘಾತ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ.
Tags:
ಆಗುಂಬೆ ಸುದ್ದಿ