ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ! sakrebailu

ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ!
ಶಿವಮೊಗ್ಗ: ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಸಕ್ರೆಬೈಲು ಆನೆ ಬಿಡಾರಕ್ಕೆ ನಾಳೆಯಿಂದ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಕುರಿತು ಶಿವಮೊಗ್ಗ ಸುದ್ದಿ ಡಿಜಿಟಲ್ ಗೆ ಮಾಹಿತಿ ಲಭ್ಯವಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಕೊಡಗಿನ ದುಬಾರೆ ಆನೆ ಬಿಡಾರದಲ್ಲಿ ಆನೆಗಳ ನಡುವಿನ ಗುದ್ದಾಟದ ಸಂದರ್ಭದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯು, ಆನೆ ಬಿಡಾರಗಳಲ್ಲಿ ಕಟ್ಟುನಿಟ್ಟಿನ ಎಸ್‌ಒಪಿ (SOP) ನಿಯಮಗಳನ್ನು ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಸಕ್ರೆಬೈಲಿಗೂ ಸಹ ವಿವಿಧೆಡೆಯಿಂದ ಆನೆಗಳನ್ನು ನೋಡಲು ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೆ ಆನೆಗಳಿಗೆ ಸ್ನಾನ ಮಾಡಿಸುವುದು ಮತ್ತು ಅವುಗಳನ್ನು ಮುಟ್ಟುವುದು ಮಾಡುತ್ತಾರೆ. ದುಬಾರೆಯಲ್ಲಿ ನಡೆದಂತಹ ಅಹಿತಕರ ಘಟನೆಗಳು ಇಲ್ಲಿ ಮರುಕಳಿಸಬಾರದು ಎಂಬ ಮುನ್ನೆಚ್ಚರಿಕೆಯಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೊಸ ಎಸ್‌ಒಪಿ (SOP) ನಿಯಮಗಳು ಸಂಪೂರ್ಣವಾಗಿ ಜಾರಿಗೆ ಬರುವವರೆಗೂ ಸಕ್ರೆಬೈಲು ಆನೆ ಬಿಡಾರವು ಮುಚ್ಚಿರಲಿದೆ.

ಸಕ್ರೆಬೈಲು ಆನೆ ಬಿಡಾರದಲ್ಲಿ ಈ ಹಿಂದೆ ಆನೆಗಳಿಗೆ ಸಾರ್ವಜನಿಕರು ಸ್ನಾನ ಮಾಡಿಸುವ ಅವಕಾಶ ಇತ್ತು
ದುಬಾರೆ ಆನೆ ಬಿಡಾರದ ದುರಂತದ ನಂತರ ಆನೆಗಳಿಗೆ ಸ್ನಾನ ಮಾಡಿಸುವ ವ್ಯವಸ್ಥೆ ಬಂದ್ ಮಾಡಲಾಗಿದೆ. ಸದ್ಯ ಸಕ್ರೆಬೈಲು ಆನೆ ಬಿಡಾರದಲ್ಲಿ 24 ಆನೆಗಳು ಇವೆ. 19 ಗಂಡು ಆನೆಗಳು 5 ಹೆಣ್ಣು ಆನೆಗಳು ಆನೆ ಬಿಡಾರದಲ್ಲಿ ಇವೆ..ಆನೆಗಳಿಗೆ ಸ್ನಾನ ಮಾಡಿಸುವ ಜಾಗದಿಂದ 50 ಮೀಟರ್ ದೂರದಲ್ಲಿ ಆನೆಗಳನ್ನು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಹತ್ತಕ್ಕೂ ಹೆಚ್ಚು ಆನೆಗಳ ದಂತಗಳನ್ನು ಟ್ರಿಮ್ ಮಾಡಲು ನಿರ್ಧಾರ ಮಾಡಲಾಗಿದೆ.

ಸಕ್ರೆಬೈಲು ಆನೆ ಬಿಡಾರವು ಇಂದಿನಿಂದಲೇ ಮುಚ್ಚಬೇಕಿತ್ತು. ಆದರೆ ಇಂದು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು . ಆದರೆ ನಾಳೆಯಿಂದ ಕೆಲ ದಿನಗಳ ಕಾಲ ಇದು ಬಂದ್ ಆಗಿರಲಿದೆ.






Previous Post Next Post