ತೀರ್ಥಹಳ್ಳಿಯಲ್ಲಿ ಶುರುವಾಗುತ್ತಾ ಹೊಸ ಪಕ್ಷ ? ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ?
ತೀರ್ಥಹಳ್ಳಿ : ದೇಶಾದ್ಯಂತ ಸಿಜೆಪಿ ಎಂಬ ಪಕ್ಷದ ಬಗ್ಗೆ ಈಗಾಗಲೇ ಎಲ್ಲೆಡೆ ಚರ್ಚೆ ಆಗುತ್ತಿರುವ ಬೆನ್ನಲ್ಲೇ ತೀರ್ಥಹಳ್ಳಿಯಲ್ಲಿ ಹೊಸ ಪಕ್ಷ ಒಂದಕ್ಕೆ ನಾಮಕರಣವನ್ನು ಮಾಡಲಾಗಿದೆ.. ತೀರ್ಥಹಳ್ಳಿಯಲ್ಲಿ ಇಲ್ಲಿಯವರೆಗೆ ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಜೊತೆಗೆ ಕಳೆದ ಬಾರಿ ಚುನಾವಣೆಯಲ್ಲಿ ಆಪ್ ಪಕ್ಷ ಕೂಡ ಸ್ಪರ್ಧೆ ಮಾಡಿತ್ತು. ಆದರೆ ಈಗ ಈ ಎಲ್ಲದರ ಮಧ್ಯೆ ಮುಂದಿನ ಬಾರಿಯ ಚುನಾವಣೆಯಲ್ಲಿ ಹೊಸ ಪಕ್ಷವಂದು ರಚನೆಯಾಗುತ್ತಾ? ಯುವಕರೇ ಈ ಪಕ್ಷವನ್ನ ಮುನ್ನಡೆಸಲಿದ್ದಾರ? ಎಂಬ ಕುತೂಹಲವೊಂದು ಈಗ ಮೂಡಿದೆ..
ಹೌದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪಕ್ಷವೊಂದರ ಲೋಗೋವನ್ನ ಬಿಡುಗಡೆ ಮಾಡಿದ್ದು
ತುಂಗಾ ತೀರದ ಪ್ರಜಾಪಕ್ಷ ಎಂಬ ಹೆಸರಿನಲ್ಲಿ ನಾಮಕರಣವನ್ನು ಮಾಡಲಾಗಿದೆ.. ಲೊಗೋ ಜೊತೆಯಲ್ಲಿ ಈ ಪಕ್ಷದ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದ್ದು ಇದರ ಜೊತೆಗೆ ಸಾರ್ವಜನಿಕರಿಗೆ ಪ್ರಣಾಳಿಕೆಯಲ್ಲಿ ಇನ್ನೇನೆಲ್ಲ ಸೇರಿಸಬೇಕು ಎಂಬುದಾಗಿ ಕೇಳಲಾಗಿದೆ. ಈಗಾಗಲೇ ರಾಷ್ಟ್ರೀಯ ಪಕ್ಷಕ್ಕೆ ಬೇಸತ್ತು ಹೋಗಿರುವಂತಹ ಯುವಕರು ಪ್ರತಿಯೊಂದು ಕ್ಷೇತ್ರಗಳಲ್ಲೂ ಹೊಸ ಪಕ್ಷವನ್ನ ರಚನೆ ಮಾಡುತ್ತಾರಾ? ಎಂಬುದಾಗಿ ಕುತೂಹಲ ಮೂಡಿಸಿದೆ...
ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ?
1.. ಆರೋಗ್ಯ ಕ್ರಾಂತಿ - ಉನ್ನತ ಚಿಕಿತ್ಸೆ ನಮ್ಮೂರಿನಲ್ಲೇ - ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೆ..
ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಯನ್ನು 24×7 ಸುಸಜ್ಜಿತ ತುರ್ತು ಚಿಕಿತ್ಸಾ ಘಟಕ ಮತ್ತು ಐಸಿಯು (ICU) ಸೌಲಭ್ಯದೊಂದಿಗೆ ಮೇಲ್ದರ್ಜೆಗೆ ಏರಿಸುವುದು.
ತಜ್ಞ ವೈದ್ಯರ ನೇಮಕ:
ಪ್ರಸೂತಿ, ಹೃದಯರೋಗ ಮತ್ತು ಮಕ್ಕಳ ತಜ್ಞ ವೈದ್ಯರು ತಾಲ್ಲೂಕಿನಲ್ಲೇ ಕಾಯಂ ಆಗಿ ಇರುವಂತೆ ಕ್ರಮ ಕೈಗೊಳ್ಳುವುದು. ತುರ್ತು ಚಿಕಿತ್ಸೆಗೆ ಶಿವಮೊಗ್ಗ-ಮಣಿಪಾಲ ಓಡುವುದು ತಪ್ಪಿಸುವುದು.
ಉಚಿತ ಡಯಾಲಿಸಿಸ್ ಮತ್ತು ಸ್ಕ್ಯಾನಿಂಗ್: ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಉಚಿತ ರೋಗನಿರ್ಣಯ ಕೇಂದ್ರಗಳನ್ನು ಸ್ಥಾಪಿಸುವುದು
2..ಸುರಕ್ಷಿತ ಸಮಾಜ - ಅಕ್ರಮ ಮುಕ್ತ ತೀರ್ಥಹಳ್ಳಿ..
ಅಕ್ರಮ ಸರಾಯಿ ದಂಧೆಗೆ ಮುಕ್ತಿ..
ಹಳ್ಳಿಗಳ ಕಿರಾಣಿ ಅಂಗಡಿ, ಗೂಡಂಗಡಿಗಳಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಟ್ಟುನಿಟ್ಟಿನ ಪೊಲೀಸ್ ಮತ್ತು ಅಬಕಾರಿ ಜಾಗೃತ ದಳ ರಚನೆ.
ಮಾದಕ ಮುಕ್ತ ತಾಲೂಕು... ಯುವಜನತೆಯನ್ನು ಕಾಡುತ್ತಿರುವ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತೆಸೆಯುವುದು.
ಮಹಿಳಾ ಸುರಕ್ಷತೆ: ಪ್ರಮುಖ ಗ್ರಾಮೀಣ ಜಂಕ್ಷನ್‌ಗಳು ಮತ್ತು ಶಾಲಾ-ಕಾಲೇಜುಗಳ ಮುಂಭಾಗ ಸಿಸಿಟಿವಿ (CCTV) ಅಳವಡಿಕೆ
3... ಕೃಷಿ ಮತ್ತು ರೈತರ ರಕ್ಷಣೆ - ಅಡಿಕೆಗೆ ಜೀವದಾನರೋಗ ನಿಯಂತ್ರಣಕ್ಕೆ ವಿಶೇಷ ಪ್ಯಾಕೇಜ್..
ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗದಿಂದ ನಷ್ಟ ಅನುಭವಿಸುತ್ತಿರುವ ಅಡಿಕೆ ಬೆಳೆಗಾರರಿಗೆ ವಿಶೇಷ ಸರ್ಕಾರಿ ಅನುದಾನ ಮತ್ತು ಉಚಿತ ಔಷಧಿ ವಿತರಣೆ.
ವೈಜ್ಞಾನಿಕ ಸಂಶೋಧನಾ ಕೇಂದ್ರ...
ತೀರ್ಥಹಳ್ಳಿಯಲ್ಲೇ ಅಡಿಕೆ ರೋಗಗಳ ತಡೆಗೆ ಕಾಯಂ ಕೃಷಿ ವಿಜ್ಞಾನಿಗಳ ತಂಡ ಮತ್ತು ಉಚಿತ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆ.
ಪರ್ಯಾಯ ಬೆಳೆಗೆ ಪ್ರೋತ್ಸಾಹ: ರೈತರ ಆದಾಯ ಹೆಚ್ಚಿಸಲು ಸಾಂಬಾರ ಪದಾರ್ಥಗಳು ಮತ್ತು ಹೈನುಗಾರಿಕೆಗೆ ವಿಶೇಷ ಸಬ್ಸಿಡಿ.
4...ಯುವಜನತೆಗೆ ಉದ್ಯೋಗ - ವಲಸೆ ತಡೆಗೆ ಕಟ್ಟುನಿಟ್ಟಿನ ಕ್ರಮ
ಸ್ಥಳೀಯ ಕೈಗಾರಿಕಾ ವಲಯ ಪರಿಸರಕ್ಕೆ ಪೂರಕವಾದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಿ, ಸ್ಥಳೀಯ ಯುವಕ-ಯುವತಿಯರಿಗೆ ಇಲ್ಲೇ ಉದ್ಯೋಗ ಸೃಷ್ಟಿ ಮಾಡುವುದು.
ಉದ್ಯಮಶೀಲತೆಗೆ ಬೆಂಬಲ...
ಸ್ವಯಂ ಉದ್ಯೋಗ ಮಾಡಬಯಸುವ ಯುವಕರಿಗೆ ಬ್ಯಾಂಕ್ ಸಾಲ ಮತ್ತು ತರಬೇತಿ ನೀಡಲು 'ತಾಲ್ಲೂಕು ಉದ್ಯೋಗ ಕೋಶ' ಸ್ಥಾಪನೆ.
ಕೌಶಲ್ಯಾಭಿವೃದ್ಧಿ ಕೇಂದ್ರ ...
ಇಂದಿನ ಮಾರುಕಟ್ಟೆಗೆ ತಕ್ಕಂತೆ ಕಂಪ್ಯೂಟರ್, ಡಿಜಿಟಲ್ ತಂತ್ರಜ್ಞಾನ ಮತ್ತು ತಾಂತ್ರಿಕ ಕೌಶಲ್ಯಗಳ ಉಚಿತ ತರಬೇತಿ
5.. ಗುಣಮಟ್ಟದ ಶಿಕ್ಷಣ - ಎಲ್ಲರಿಗೂ ಸಮಾನ ಅವಕಾಶ, ಸರ್ಕಾರಿ ಶಾಲೆಗಳ ಸಬಲೀಕರಣ...
ತಾಲೂಕಿನ ಸರ್ಕಾರಿ ಶಾಲೆಗಳನ್ನು 'ಮಾದರಿ ಶಾಲೆ'ಗಳಾಗಿ ಪರಿವರ್ತಿಸಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಡಿಜಿಟಲ್ ಕ್ಲಾಸ್‌ರೂಮ್ ಸ್ಥಾಪನೆ.
ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ..
ಮಧ್ಯಮ ವರ್ಗದ ಪೋಷಕರಿಗೆ ಹೊರೆಯಾಗದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಅತಿಯಾದ ಶುಲ್ಕ ದಂದೆಗೆ ಕಾನೂನಾತ್ಮಕ ಲಗಾಮು.
ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ: IAS, KAS, ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಿದ್ಧರಾಗಲು ಉಚಿತ ಕೋಚಿಂಗ್ ಮತ್ತು ಅತ್ಯಾಧುನಿಕ ಡಿಜಿಟಲ್ ಗ್ರಂಥಾಲಯ ಸ್ಥಾಪನೆ.
6..ಮೂಲ ಸೌಕರ್ಯ ಮತ್ತು ಸುಗಮ ಸಾರಿಗೆ , ಗುಣಮಟ್ಟದ ರಸ್ತೆ ಸಂಪರ್ಕ:
ಗ್ರಾಮೀಣ ಭಾಗದ ಲಿಂಕ್ ರಸ್ತೆಗಳು ಮತ್ತು ಸಂಪರ್ಕ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸುವುದು ಹಾಗೂ ಕಳಪೆ ಕಾಮಗಾರಿಗೆ ಮುಕ್ತಿ ಹಾಡುವುದು.
ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯ:
ಶಾಲಾ-ಕಾಲೇಜು ಸಮಯದಲ್ಲಿ ಹಳ್ಳಿಗಳಿಂದ ಪೇಟೆಗೆ ಹೆಚ್ಚುವರಿ ಸರ್ಕಾರಿ ಬಸ್ಸುಗಳ ಸಂಚಾರ ವ್ಯವಸ್ಥೆ.
ಕೈಗೆಟುಕುವ ದರದಲ್ಲಿ ನಿವೇಶನ:
ಮಧ್ಯಮ ವರ್ಗದ ಮತ್ತು ವಸತಿ ರಹಿತ ಕುಟುಂಬಗಳಿಗೆ ಪೇಟೆಯ ಸುತ್ತಮುತ್ತ ಸರ್ಕಾರಿ ದರದಲ್ಲಿ ನಿವೇಶನ ಮತ್ತು ಮನೆಗಳ ಹಂಚಿಕೆ.
ಹೀಗೆ ಪ್ರಣಾಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿ ಪಕ್ಷ ರಚನೆಗೆ ಹೆಜ್ಜೆಯೊಂದನ್ನು ಇಡಲಾಗಿದ್ದು ಈ ಪಕ್ಷ ಮುಂದಿನ ಬಾರಿಯ ವಿಧಾನಸಭಾ ಚುನಾವಣೆಯ ಹೊತ್ತಿಗೆ ಅಖಾಡದಲ್ಲಿ ಇರುತ್ತಾ? ಅಥವಾ ರಾಷ್ಟ್ರೀಯ ಪಕ್ಷಗಳ ಎದುರು ಮಂಕಾಗುತ್ತಾ ಕಾಡುನೋಡಬೇಕಿದೆ..
Tags:
ತೀರ್ಥಹಳ್ಳಿ ಸುದ್ದಿ