ಶ್ರೀ ರಾಮ ಎಂದು ಅಯೋಧ್ಯೆಗೆ ಹೋಗಿದ್ದೆ ಎಂದು ಹೇಳುವ ಶಾಸಕರು ಈಶ್ವರನ ಚಕ್ರದ ಬಗ್ಗೆ ಏಕೆ ಮಾತನಾಡಲಿಲ್ಲ - ಕಿಮ್ಮನೆ ರತ್ನಾಕರ್ ಪ್ರೆಶ್ನೆ
ತೀರ್ಥಹಳ್ಳಿ : ರಾಮೇಶ್ವರ ದೇವಸ್ಥಾನಕ್ಕೆ ಆರಗ ಜ್ಞಾನೇಂದ್ರ ಎಂಎಲ್ಎ ಅಲ್ವಾ? ರಥದ ಚಕ್ರ ಹಾಳಾದಾಗ ವಿಶ್ವನಾಥ ಶೆಟ್ರು ಬಗ್ಗೆ ಕಂಪ್ಲೇಂಟ್ ಕೊಟ್ಟರು, ನಾನು ಅದರ ಬಗ್ಗೆ ಮಾತಾಡಲ್ಲ ತಪ್ಪು ಸರಿಯ ವಿಚಾರ ಕೋರ್ಟ್ ನೋಡಿಕೊಳ್ಳುತ್ತೆ, ಆದರೆ ಚಕ್ರ ಹಾಳಾದ ಮೇಲೆ ಚಕ್ರ ಬೇಕು ಎಂದು ಶಾಸಕರಿಗೆ ಗೊತ್ತಾಗಲಿಲ್ಲವೇ? ಇಲ್ಲಿಂದ ಶ್ರೀ ರಾಮ ಎಂದು ಅಯೋಧ್ಯೆಗೆ ಹೋಗಿದ್ದೆ ಎಂದು ಹೇಳುವ ಶಾಸಕರು ಈಶ್ವರನ ಚಕ್ರದ ಬಗ್ಗೆ ಏಕೆ ಮಾತನಾಡಿಲಿಲ್ಲ ಎಂದು ಪ್ರೆಶ್ನೆ ಮಾಡಿದರು.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ನಾನು ಸಾಲ ಮಾಡಿ ರಾಮೇಶ್ವರ ದೇವರ ರಥದ ಚಕ್ರಕ್ಕೆ ಹಣ ಕೊಟ್ಟೆ, ಇವರು ಮಂತ್ರಿಯಾಗಿದ್ದರು 25 ವರ್ಷಗಳ ಕಾಲ ಶಾಸಕರಾಗಿದ್ರು, ರಾಮೇಶ್ವರ ದೇವಸ್ಥಾನದ ಸಮಸ್ಯೆಯನ್ನು ಸರಿ ಬಿಡಿಸಬೇಕು ಎಂದು ಗೊತ್ತಾಗಲಿಲ್ಲವೇ? ನನ್ನ ಜವಾಬ್ದಾರಿಯಲ್ಲಿ ನಾಲ್ಕು ಕೋಟಿ ಕೆಲಸ ಮಾಡಿಸಿದ್ದೇನೆ, ಯಾವಾಗ ಕೇಳಿದರೂ ಶ್ರೀರಾಮ ಶ್ರೀರಾಮ ಎನ್ನುತ್ತಾರೆ. ಇವರ ದೇವಸ್ಥಾನಕ್ಕೆ ಏನು ಮಾಡಿದ್ದಾರೆ? ಎಷ್ಟು ದೇವಸ್ಥಾನಕ್ಕೆ ಹಣ ನೀಡಿದ್ದಾರೆ? ಅದನ್ನ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು..
ಈ ರಾಜ್ಯದಲ್ಲಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಒಂದು ಗೌರವವಿದೆ. ಈ ದೇಶದ ಯಾವುದೇ ಮೂಲೆಗೆ ಹೋದರು ತೀರ್ಥಹಳ್ಳಿಯಿಂದ ಬಂದವರು ಎಂದರೆ ಅದಕ್ಕೊಂದು ಪ್ರತೀತಿ ಇದೆ. ಕುವೆಂಪು, ಗೋಪಾಲ ಗೌಡರು, ಕಡಿದಾಳ ಮಂಜಪ್ಪ ಅವರಂಥ ಶ್ರೇಷ್ಠರು ಈ ಕ್ಷೇತ್ರಕ್ಕೆ ಒಂದು ಗೌರವವನ್ನು ತಂದು ಕೊಟ್ಟಿದ್ದಾರೆ. ಆದರೆ ಕ್ಷೇತ್ರಕ್ಕೆ ಕಳಂಕವನ್ನು ತಂದವರು ಅಂತ ಇದ್ದರೆ ಅದು ಶಾಸಕನಾಗಿದ್ದ ಎಂದು ವಾಗ್ದಾಳಿ ನಡೆಸಿದರು..
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು. ಈ ಬಗ್ಗೆ ನಮ್ಮ ಜ್ಞಾನೇಂದ್ರರವರು ಏಕೆ ಮಾತನಾಡುತ್ತಿಲ್ಲ. ನನ್ನ ವಿರುದ್ಧ ಜ್ಞಾನೇಂದ್ರ ಅವರು ಮತ್ತು ಎಬಿವಿಪಿ ರವರು ಪ್ರತಿಭಟನೆ ಮಾಡಿದ್ದರು ಅಲ್ಲವೇ ಈಗ ಏಕೆ ಸುಮ್ಮನಿದ್ದಾರೆ. ಇವರು ತೀರ್ಥಹಳ್ಳಿಯ ಎಂಎಲ್ಎ ಅಲ್ಲವೇ? ತೀರ್ಥಹಳ್ಳಿಯವರು ಕೂಡ ಎಕ್ಸಾಮ್ ಮಾಡಿಲ್ಲವೇ? ನಾವು 40 ಜನ ಅಧಿಕಾರಿಗಳನ್ನು ಒಮ್ಮೆಲೇ ಸಸ್ಪೆಂಡ್ ಮಾಡಿದ್ದೆವು. ನೀಟ್ ಎಕ್ಸಾಮ್ ಆಯಾಯ ಸ್ಟೇಟ್ ಗಳಿಗೆ ಬಿಟ್ಟು ಬಿಡಬೇಕು ಎಂದರು.
ಆರಗ ಜ್ಞಾನೇಂದ್ರರವರಿಗೆ ಸಬ್ ಇನ್ಸ್ಪೆಕ್ಟರ್ ಗೆ ಎಷ್ಟು ಫಿಕ್ಸ್ ಆಗಿದೆ ಎಂದು ಗೊತ್ತಿದೆ ತಹಸೀಲ್ದಾರ್ ಅವರಿಗೆ ಎಷ್ಟು ಫಿಕ್ಸ್ ಆಗಿದೆ ಅಂತ ಗೊತ್ತಿದೆ. ತನಗೆ ರೇಟ್ ಕಡಿಮೆ ಆಗಿದ್ದಕ್ಕೆ ಮರಳಿನ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ನನಗೆ ಬಂದ ಮಾಹಿತಿ ಪ್ರಕಾರ ಇವರು 25 ಲಕ್ಷ ಕೇಳಿದ್ದರೂ ಅವರು 10 ಲಕ್ಷ ಕೊಡಲು ರೆಡಿಯಾಗಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು. ಎಲ್ಲಾ ಇವರ ಪಾರ್ಟ್ನರ್ ಗಳೇ ಮರಳು ಹೊಡೆಯುವುದು. ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ಬಂಡೆ ಕಲ್ಲು ಮತ್ತು ಮರಳು 99% ಆರಗ ಜ್ಞಾನೇಂದ್ರ ರವರ ಬೆಂಬಲಿಗರದ್ದು. ಇಡೀ ತೀರ್ಥಹಳ್ಳಿ ಕ್ಷೇತ್ರದಲ್ಲಿ ಯಾವ ಮರಳಿನಿಂದಲೂ ನಾನು ಒಂದು ರುಪಾಯಿ ತೆಗೆದುಕೊಂಡಿಲ್ಲ ಎಂದರು.