ತೀರ್ಥಹಳ್ಳಿಯಲ್ಲಿ ಕೆಎಫ್ ಡಿ ಯಿಂದ ಎರಡನೇ ಸಾವು..! KFD

ತೀರ್ಥಹಳ್ಳಿಯಲ್ಲಿ ಕೆಎಫ್ ಡಿ ಯಿಂದ ಎರಡನೇ ಸಾವು..!

ತೀರ್ಥಹಳ್ಳಿ: ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷ ಎರಡನೇ ಸಾವು  ಸಂಭವಿಸಿದ್ದು, ಗುರುವಾರ ಅರಳಸುರುಳಿ ಸಮೀಪದ ತಟ್ಟಿಕೇವಿ ಗ್ರಾಮದ ಮಹಿಳೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಗುಲಾಬಿ ಶೆಟ್ಟಿ (ನಾಗು ಶೆಡ್ತಿ 60 ವರ್ಷ) ಮೃತರು. 

ಜ್ವರ ಉಲ್ಬಣಗೊಂಡ ಸ್ಥಿತಿಯಲ್ಲಿ ಮಂಗಳವಾರ ಸರ್ಕಾರಿ ಜೆಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಅದೇ ದಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ
ಫಲಕಾರಿಯಾಗದೆ ಗುರುವಾರ ಅಸುನೀಗಿದರು. ಕಿಡ್ನಿ ಸಮಸ್ಯೆ ಕೂಡ ಇತ್ತು ಎಂದು ಹೇಳಲಾಗಿದೆ. ಈ ಮೊದಲು ಕಟಗಾರು ಆಸ್ಪತ್ರೆ ವ್ಯಾಪ್ತಿಯ ಹೊನ್ನೇಕೇರಿಯ ಯುವಕ
ಕೆಎಫ್‌ಡಿ ಸೋಂಕಿನಿಂದ ಸಾವಿಗೀಡಾಗಿದ್ದ. ತಾಲೂಕಿನಲ್ಲಿ 29 ಪ್ರಕರಣ ದಾಖಲಾಗಿದ್ದು, ಜನವರಿಯಿಂದ ಈವರೆಗೆ ಇಬ್ಬರು ಮೃತರಾಗಿದ್ದಾರೆ. 

ಪ್ರಸ್ತುತ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ 5 ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ 3 ಜನರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ
ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್‌ ತಿಳಿಸಿದ್ದಾರೆ. ಜೆಸಿ ಆಸ್ಪತ್ರೆಯಲ್ಲಿ 5 ರೋಗಿಗಳಿದ್ದು, ಗುಣಮುಖರಾಗಿ ಮನೆಗೆ ಹೋಗಿದ್ದ ಇಬ್ಬರು ಮತ್ತೆ ಜ್ವರ ಮರುಕಳಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜೆಸಿ
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರವಿಂದ್ ತಿಳಿಸಿದ್ದಾರೆ.





Previous Post Next Post