ಏಕಾಏಕಿ ಜೇನುದಾಳಿ ಶಾಲಾ ಮಕ್ಕಳು ಸೇರಿ ನಾಲ್ವರಿಗೆ ಗಾಯ
ಹೊಸನಗರ: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಜೇನು ನೊಣಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಬ್ಯಾಂಕ್ ನೌಕರ ಹಾಗೂ ಶಾಲಾ ಮಕ್ಕಳು ಸೇರಿ ನಾಲ್ವರಿಗೆ ಗಾಯವಾಗಿರುವ ಘಟನೆ ಹೊಸನಗರ ತಾಲೂಕು ರಿಪ್ಪನಪೇಟೆಯಲ್ಲಿ ನಡೆದಿದೆ.
ರಿಪ್ಪನ್ಪೇಟೆ ಗ್ರಾಮದ ಮುಖ್ಯರಸ್ತೆಯಲ್ಲಿನ ಎಸ್ಬಿಐ ಬ್ಯಾಂಕ್ ಮುಂಭಾಗ ಏಕಾಏಕಿ ಜೇನು ನೊಣಗಳು ದಾಳಿ ನಡೆಸಿವೆ. ಈ ವೇಳೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಮಕ್ಕಳ ಮೇಲೆ ಹಾಗೂ ಬ್ಯಾಂಕ್ ನೌಕರ ತೌಸಿಫ್ ಅವರ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ. ಇದರಲ್ಲಿ ತೌಸಿಫ್ ಅವರ ಮುಖಕ್ಕೆ 20ಕ್ಕೂ ಹೆಚ್ಚು ಜೇನು ನೊಣಗಳು ದಾಳಿ ಮಾಡುತ್ತಿದ್ದಂತಯೇ ಶಾಲಾ ವಿದ್ಯಾರ್ಥಿಗಳು ಓಡಿ ಹೋಗಿ ಬಚಾವ್ ಆಗಿದ್ದಾರೆ. ಆದರೂ ವಿದ್ಯಾರ್ಥಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಜೇನು ಕಚ್ಚಿವೆ.
ತಕ್ಷಣ ಎಲ್ಲರನ್ನೂ ರಿಪ್ಪನ್ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಆದರೆ, ತೌಸಿಫ್ ಅವರ ಮುಖಕ್ಕೆ ಜೇನು ಹೆಚ್ಚು ಕಚ್ಚಿದ ಪರಿಣಾಮ ಅವರ ಮುಖ ದಪ್ಪಗಾಗಿತ್ತು. ಇದರಿಂದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ರಿಪ್ಪನ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Tags:
ಹೊಸನಗರ ಸುದ್ದಿ