ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಶೀಘ್ರ ಪೂರ್ಣ - ಸಂಸದ ಬಿ.ವೈ. ರಾಘವೇಂದ್ರ ಭರವಸೆ
ಶಿವಮೊಗ್ಗ: ಮುಂಬರುವ ದಿನಗಳಲ್ಲಿ ಶಿವಮೊಗ್ಗದ ವಿಮಾನ
ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಪೂರ್ಣಗೊಳ್ಳಲಿದೆ. ಇದರಿಂದ ಮುಂಬೈ ಮತ್ತು ದೆಹಲಿಯಂತಹ ನಗರಗಳಿಗೆ ನೇರ ಸಂಪರ್ಕ ಕಲ್ಪಿಸಲು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೊಸ ಆಯಾಮ ನೀಡಲು ನಾವು ಬದ್ಧರಾಗಿರುವುದಾಗಿ ಸಂಸದ ಬಿ.ವೈ.
ರಾಘವೇಂದ್ರ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಡಿ ಕರ್ನಾಟಕವು ದೇಶದಲ್ಲೇ ಯಶಸ್ವಿ ರಾಜ್ಯವಾಗಿ ಹೊರಹೊಮ್ಮಿದ್ದು, ಒಟ್ಟು ಮಂಜೂರಾದ 128 ಮಾರ್ಗಗಳಲ್ಲಿ 118 ಮಾರ್ಗಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಉಡಾನ್ ಯೋಜನೆ ಮಾರ್ಗಗಳು, ಮಾನದಂಡ, ವಿಮಾನಯಾನ
ಜವಾಬ್ದಾರಿಗಳ ಬಗ್ಗೆ ಧ್ವನಿ ಎತ್ತಿದ್ದ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ವಿವರವಾಗಿ ಮಾಹಿತಿ ನೀಡಿದ್ದಾರೆ.
ಈ ಯಶಸ್ಸಿನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಕೊಡುಗೆ ಕೂಡ ಗಣನೀಯವಾಗಿದೆ. ಅತ್ಯಲ್ಪ ಅವಧಿಯಲ್ಲಿ ಯಶಸ್ವಿ ಕಾರ್ಯಾಚರಣೆ ಮೂಲಕ ಸುಸಜ್ಜಿತ ಸಂಪರ್ಕ ಕಲ್ಪಿಸುವ ಜೊತೆಗೆ ಮಲೆನಾಡು ಭಾಗದ ಆರ್ಥಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ವೇಗ ನೀಡಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಗುಣಮಟ್ಟದ ಮತ್ತು ಸಮಯೋಚಿತ ಸೇವೆ ಸಿಗುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ವಿಮಾನಯಾನ ಸೇವೆ ಒದಗಿಸುವಲ್ಲಿ ವಿಳಂಬ ಮಾಡುವ ಅಥವಾ ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಧಿಕಾರ
ಕೇಂದ್ರ ಸರ್ಕಾರಕ್ಕಿದೆ. ಅಂತಹ ಸಂಸ್ಥೆಗಳ ಪರ್ಫಾರ್ಮೆನ್ಸ್ ಬ್ಯಾಂಕ್ ಗ್ಯಾರಂಟಿ ಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅವರ ಒಪ್ಪಂದವನ್ನು ರದ್ದುಪಡಿಸಲು ಸಚಿವಾಲಯಕ್ಕೆ ಸಂಪೂರ್ಣ ಅಧಿಕಾರವಿದೆ ಎಂದು ಕೇಂದ್ರ ಸರ್ಕಾರ ಸಪ್ತಪಡಿಸಿದೆ. ಪ್ರಾದೇಶಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಮತ್ತು ಸಮತೋಲಿತ ಬೆಳವಣಿಗೆಯನ್ನು ಸಾಧಿಸಲು ಕಾಲಕಾಲಕ್ಕೆ ಮೇಲ್ವಿಚಾರಣಾ ವ್ಯವಸ್ಥೆಯನ್ನು ನವೀಕರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದ ಬಿ.ವೈ.ರಾಘವೇಂದ್ರ, ಕರ್ನಾಟಕ ಇಂದು ಪ್ರಾದೇಶಿಕ ವಿಮಾನಯಾನ ಸಂಪರ್ಕದಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಮುಂದಿರುವುದು - ಹೆಮ್ಮೆಯ ವಿಷಯ. ನಮ್ಮ ಶಿವಮೊಗ್ಗ ವಿಮಾನ ನಿಲ್ದಾಣ ಈ ಯಶಸ್ಸಿನ
ಮೈಲಿಗಲ್ಲಿನ ಪ್ರಮುಖ ಭಾಗವಾಗಿದೆ. ಕೇವಲ ವಿಮಾನ ನಿಲ್ದಾಣ ನಿರ್ಮಿಸುವುದು ಮಾತ್ರವಲ್ಲದೆ, "ವಿಮಾನಯಾನ ಸಂಸ್ಥೆಗಳು ತಮ್ಮ ಬದ್ಧತೆಯನ್ನು ಕಾಪಾಡಿಕೊಳ್ಳುವಂತೆ ಕೇಂದ್ರ ಸರ್ಕಾರದ ನಿಯಮಗಳಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ರಾಘವೇಂದ್ರ ತಿಳಿಸಿದ್ದಾರೆ.
Tags:
ಶಿವಮೊಗ್ಗ ಸುದ್ದಿ