ತೀರ್ಥಹಳ್ಳಿಗೆ ಬಿ.ಎಲ್.ಸಂತೋಷ್ ದಿಢೀರ್ ಭೇಟಿ - ಇದರ ಹಿಂದಿದ್ಯಾ ಟಿಕೆಟ್ ಅದೃಷ್ಟ? bjp Mla ticket

ತೀರ್ಥಹಳ್ಳಿಗೆ ಬಿ.ಎಲ್.ಸಂತೋಷ್ ದಿಢೀರ್ ಭೇಟಿ - ಇದರ ಹಿಂದಿದ್ಯಾ ಟಿಕೆಟ್ ಅದೃಷ್ಟ?

ತೀರ್ಥಹಳ್ಳಿ :  ಬಿಜೆಪಿ ಪಕ್ಷದ ಯ ಅತ್ಯಂತ ಪ್ರಭಾವಿ ನಾಯಕ, ಸಂಘ ಪರಿವಾರದ ಪ್ರಭಾವಿ ಮುಖಂಡ, ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ತೀರ್ಥಹಳ್ಳಿಗೆ ದಿಡೀರ್ ಭೇಟಿ ನೀಡಿದ್ರು. ಅದರಲ್ಲೂ ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಮನೆಗೆ ಭೇಟಿ ನೀಡಿರುವುದು ಈಗ  ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ.

ಮಾಹಿತಿ ಪ್ರಕಾರ ಚಕ್ಕೋಡಬೈಲಿನ ಆರ್ ಎಸ್ ಎಸ್ ಪ್ರಮುಖರ ಮನೆಗೆ ಭೇಟಿ ನೀಡಿದ್ದ ಬಿ.ಎಲ್.ಸಂತೋಷ್ ಅಲ್ಲಿಂದ  ದಿಢೀರನೆ ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಮನೆಗೆ ಭೇಟಿ ನೀಡಿದರು. ಈಗ ಈ ಬೆಳವಣಿಗೆ ಬಿಜೆಪಿ ಪಕ್ಷದಲ್ಲಿ ಕುತೂಹಲವಾಗಿ ಕಾಣಿಸಿಕೊಳ್ಳುತ್ತಿದೆ. ಈ ಭೇಟಿಯ ಹಿಂದೆ 2028 ರ ಚುನಾವಣೆಯ ಸುಳಿವು ಸಿಕ್ಕಿತೆ? ಎಂಬ ಪ್ರೆಶ್ನೆ ಕಾಡತೊಡಗಿದೆ..

ತೀರ್ಥಹಳ್ಳಿಗೆ ಬಿ ಎಲ್ ಸಂತೋಷ್ ಆಗಮನದ ಸುದ್ದಿ ಕೇಳಿದ ಶಾಸಕ ಆರಗ ಜ್ಞಾನೇಂದ್ರ ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಇದ್ದರೂ ಆ ನಂತರ ಅಲ್ಲಿಂದ ವಿಮಾನ ಏರಿ ಶಿವಮೊಗ್ಗಕ್ಕೆ ಬಂದು ತೀರ್ಥಹಳ್ಳಿಯಲ್ಲಿ ಸಂತೋಷ್ ಅವರನ್ನು ಭೇಟಿಯಾಗಿ ತಾವು ಬಂದಿದ್ದು ಸಂತೋಷ ಎಂದು ತಿಳಿಸಿದ್ದಾರೆ.  ಈಗ ಸಂತೋಷ್ ಅವರ ತೀರ್ಥಹಳ್ಳಿ ಭೇಟಿ ಆರಗ ಹಾಗೆ ನವೀನ್ ಇಬ್ಬರಲ್ಲಿ ಯಾರಿಗೆ ಸಂತೋಷ ತರಲಿದ್ಯೋ ಆ ಭಗವಂತನೆ ಬಲ್ಲ...

ಚುನಾವಣೆಗೆ ಎರಡು ವರ್ಷ ಬಾಕಿ - ಆಗಲೇ ರಣತಂತ್ರ ಶುರು..!

2023 ರ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ಅನ್ನು ಆರಗ ಜ್ಞಾನೇಂದ್ರ ಅವರಿಗೆ ನೀಡಲಾಗಿತ್ತು.  ಈಗಾಗಲೇ 5 ಬಾರಿ ಶಾಸಕರಾಗಿರುವ ಆರಗ ಜ್ಞಾನೇಂದ್ರ  2028ರ ವಿಧಾನಸಭಾ ಚುನಾವಣಾ ಹೊತ್ತಿಗೆ 70 ವರ್ಷ ದಾಟಿದ ನಾಯಕರಾಗಿರುತ್ತಾರೆ. ಬಿಜೆಪಿ ಪಕ್ಷದ ನಿಯಮಾವಳಿ ಪ್ರಕಾರ ಸೀನಿಯರ್ ಸಿಟಿಜನ್ ಎಂಬ ಕಾರಣಕ್ಕೆ ಟಿಕೆಟ್ ದೊರಕುವ ಸಾಧ್ಯತೆ ಕಡಿಮೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇರುವ ಗೊಂದಲ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಕೂಡ ಹೌದು. ಈ ಕಾರಣದಿಂದ ಈಗಾಗಲೇ ರಣತಂತ್ರ ಶುರು ಮಾಡಿದ್ರಾ? ಎಂಬ ಪ್ರೆಶ್ನೆ ಸಹ ಇದೆ.

ತೀರ್ಥಹಳ್ಳಿ ಬಿಜೆಪಿಯಲ್ಲಿ ನಾಯಕರ ಕೊರತೆ..!?

ತೀರ್ಥಹಳ್ಳಿ ಬಿಜೆಪಿ ಪಕ್ಷದಲ್ಲಿ ನಾಯಕತ್ವದಿಂದ ಪಕ್ಷ ಗೆಲ್ಲಿಸುವ ನಾಯಕರ ಕೊರತೆ ಎದ್ದು ಕಾಣಿಸುತ್ತಿದೆ. ಇಲ್ಲಿಯವರೆಗೆ ಆರಗ ಜ್ಞಾನೇಂದ್ರರ ನಂತರ ಯಾರು? ಎಂಬ ಪ್ರೆಶ್ನೆಗೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಹೆಸರಿಗೆ ಹಲವು ನಾಯಕರು ಇದ್ದರೂ ಸಹ ಇವರೇ ಸೂಕ್ತ ನಾಯಕ ಎನ್ನುವ ಹೆಸರು ಇಲ್ಲ. ಹಾಗಾಗಿ ಚುನಾವಣೆಯಲ್ಲಿ  ತೀರ್ಥಹಳ್ಳಿ ಬಿಜೆಪಿಯಲ್ಲಿ ನಾಯಕರ ಕೊರತೆ ಇದೆ ಎಂದರೂ ತಪ್ಪಾಗಲ್ಲ..

ನಾಯಕರ ಆಯ್ಕೆ ಸಂಘ ಪಾರಿವಾರದ್ದು..!

ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರರ ನಂತರ ಚುನಾವಣೆಗೆ ಸ್ಪರ್ಧೆ ಮಾಡಲು ಹಲವು ಆಕಾಂಕ್ಷಿಗಳು ಇರಬಹುದು ಆದರೆ ಆಯ್ಕೆ ಸಂಘ ಪರಿವಾರದ್ದೇ ಆಗಿರುತ್ತದೆ ಎಂಬುದು ಮರೆಯುವಂತಿಲ್ಲ. ಹೀಗಾಗಿ ಆರಗ ನಂತರ ಸಂಘ ಪರಿವಾರದ ನೆಚ್ಚಿನ ಅಭ್ಯರ್ಥಿ ಹೆದ್ದೂರು ನವೀನ್ ಎಂಬುದು ಕಳೆದ ಚುನಾವಣೆಗೆ ಮುಂಚಿನಿಂದಲೂ ಚಾಲ್ತಿಯಲ್ಲಿತ್ತು. ಈಗಲೂ ಕೂಡ ರೇಸ್ನಲ್ಲಿ ಇರುವುದು ನವೀನ್ ಹೆಸರೇ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ಈ ಬಾರಿ ಸಂಘ ಪರಿವಾರ ಸ್ಪಷ್ಟವಾಗಿ ಚುನಾವಣಾ ಕಣದಿಂದ ಜ್ಞಾನೇಂದ್ರ ಅವರನ್ನು ಹಿಂದಕ್ಕೆ ಸರಿಯಬೇಕು ಎಂಬ ಸೂಚನೆ ನೀಡಿದರೆ ಅದನ್ನು ಪಾಲಿಸದೇ ಇರಲು  ಬೇರೆ ಮಾರ್ಗ ಇಲ್ಲ. 

ಕಾಂಗ್ರೆಸ್ ನಾಯಕರ ವಿರುದ್ಧ ಗೆಲ್ಲುವ ಸಾಮರ್ಥ್ಯ ಇದೆಯೇ?

ಒಂದು ವೇಳೆ ಆರಗ ಜ್ಞಾನೇಂದ್ರರನ್ನು ಕೆಳಗಿಳಿಸಿ ನವೀನ್ ಅವರಿಗೆ ಅದೃಷ್ಟ ಸಿಕ್ಕಿದರು ಅದು ಅತೀ ದೊಡ್ಡ ಪರೀಕ್ಷೆ ಆಗಲಿದೆ. ಕಾರಣ ಕಾಂಗ್ರೆಸ್ ನಾಯಕರ ವಿರುದ್ಧ ಗೆಲ್ಲುವ ಸಾಮರ್ಥ್ಯ ಇದೆಯೇ? ಎಂಬ ಪ್ರೆಶ್ನೆ? ಕಾಂಗ್ರೆಸ್ ಪಕ್ಷದ ಕಿಮ್ಮನೆ ರತ್ನಾಕರ್ ಅಥವಾ ಆರ್ ಎಂ ಮಂಜುನಾಥ್ ಗೌಡ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಫಿಕ್ಸ್, ಇಂತಹ ಘಟಾನುಘಟಿ ನಾಯಕರ ವಿರುದ್ಧ ನವೀನ್ ಗೆಲ್ತಾರಾ? ಎಂಬ ಪ್ರೆಶ್ನೆ ಸಂಘ ಪರಿವಾರದ ಮುಂದೆ ಬರಬಹುದು.. ಆಗ ಆರಗ ಅವರಿಗೆ ಮತ್ತೊಂದು ಚಾನ್ಸ್ ಸಿಕ್ಕರೂ ಅಚ್ಚರಿ ಇಲ್ಲ. ಆದರೆ ಸೋತರು ಪರವಾಗಿಲ್ಲ ನೋಡೇ ಬಿಡುವ ಎಂಬ ನಿರ್ಣಯಕ್ಕೆ ಬಂದರೆ ನವೀನ್ ಪಾಲಿಗೆ ಬಂಪರ್ ಲಾಟರಿ ಹೊಡೆದಂತೆ..

ಚುನಾವಣೆ ಟಿಕೆಟ್ ಕೈ ತಪ್ಪಿದರೆ ಆರಗ ಕಥೆ ಏನು?

ಕಳೆದ ಹಲವಾರು ವರ್ಷಗಳಿಂದ ತೀರ್ಥಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾ ಬಂದಿರುವ ಆರಗ ಜ್ಞಾನೇಂದ್ರ 5 ಬಾರಿ ಶಾಸಕರಾಗಿ ಅದರಲ್ಲೂ ಗೃಹಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದಕ್ಕಿಂತ ಹೆಚ್ಚು ಬಿಜೆಪಿ ಪಕ್ಷ ಬಿಡದ ನಿಷ್ಠಾವಂತ ನಾಯಕ ಎಂದರೆ ತಪ್ಪಾಗಲಾರದು. ಇಂತಹ ನಾಯಕನಿಗೆ ಟಿಕೆಟ್ ನೀಡದಿದ್ದರೆ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಎಂಎಲ್ಸಿ ಅಥವಾ ರಾಜ್ಯಪಾಲರ ಅಧಿಕಾರ ಕೊಟ್ಟರು ಅಚ್ಚರಿ ಏನಲ್ಲ. 

ನಿವೃತ್ತಿ ಆಗಲ್ಲ ಎಂದಿದ್ದ ಆರಗ..!

ಇತ್ತೀಚಿಗೆ ನಡೆದ ಎಳ್ಳಮಾವಾಸ್ಯೆ ಜಾತ್ರೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸುವ ವಿಷಯವನ್ನು ಜಾತ್ರಾ ಸಮಿತಿಯಯವರು ಪ್ರಸ್ತಾಪಿಸಿದಾಗ ನಾನು ರಾಜಕಾರಣದಿಂದ ನಿವೃತ್ತಿ ಆಗಲ್ಲ. ಈ ಸನ್ಮಾನದ ನೆಪದಲ್ಲಿ ನನ್ನನ್ನು ಮನೆಗೆ ಕಳುಹಿಸಬೇಕು ಅಂದುಕೊಂಡಿದ್ದೀರ? ಎಂದು ಹೇಳುವ ಮೂಲಕ ಮುಂದಿನ ಬಾರಿ ಸಹ  ನಾನೇ ಅಭ್ಯರ್ಥಿ ಎಂಬಂತೆ ಹೇಳಿದ್ದರು. 

ನವೀನ್ ಹೆದ್ದೂರ್ ಗೆ ಬಂಪರ್ ಲಾಟರಿ..!

ಅದೇನೇ ಇರಲಿ ಬಿ.ಎಲ್.ಸಂತೋಷ್ ಹೆದ್ದೂರು ನವೀನ್ ಅವರ ಮನೆಗೆ ಭೇಟಿ ನೀಡಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ. ನವೀನ್ ಪರವಾಗಿ ಈಗಾಗಲೇ ಪಕ್ಷದ ಯುವಪಡೆ ಕೆಲಸ ಮಾಡುತ್ತಿದೆ. ಕಾರ್ಯಕರ್ತರ ಮನೆಗೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ, ಪಕ್ಷದ ಸಭೆಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಅವರಿಗೆ ಪಕ್ಷದ ಅನೇಕ ಹಿರಿಯ, ಕಿರಿಯ ನಾಯಕರ ಬೆಂಬಲ ಇದ್ದಂತೆ ಕಾಣಿಸುತ್ತಿದ್ದು ಈಗ ಸಂಘ ಪರಿವಾರದ ನಾಯಕರ ಭೇಟಿ ಬಂಪರ್ ಲಾಟರಿ ಹೊಡೆದಂತಾಗಿದೆ..

Previous Post Next Post