ತೀರ್ಥಹಳ್ಳಿಯ ಕೃತಿ.ಕೆ. ರಾವ್ ಗೆ ಯುವ ಸಂಶೋಧಕ ಪ್ರಶಸ್ತಿ
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅನೇಕ ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕೆಲಸ ನಿರ್ವಹಿಸುತ್ತಿರುವ ಮುಸ್ಸಂಜೆ ಪಾನಿಪುರಿ ಸ್ಟಾಲ್ ಮಾಲೀಕರಾದ ಕೃಷ್ಣಮೂರ್ತಿ ಹಾಗೂ ಭಾರತಿ ದಂಪತಿಗಳ ಪುತ್ರಿಯಾದ ಕೃತಿ ಕೆ ರಾವ್ರವರಿಗೆ ರಾಜಸ್ಥಾನದ ಜೋಧ್ಪುರ್ನಲ್ಲಿ ನಿನ್ನೆ ಭಾನುವಾರ ಯುವ ಸಂಶೋಧಕ ಪ್ರಶಸ್ತಿ ದೊರೆಕಿದೆ.
ರಾಜಸ್ಥಾನದ ಇನ್ಸ್ಟಿಟ್ಯೂಟ್ ಆಫ್ ನ್ಯಾನೋ ಸೈನ್ಸ್ ಅಂಡ್ ಟೆಕ್ನಾಲಜಿ (INST), ಮೊಹಾಲಿಯಿಂದ ಪಿಎಚ್ಡಿ ಮಾಡುತ್ತಿರುವ ಕೃತಿ ಕೆ. ರಾವ್ ಅವರು NBRCOM 2025ನಲ್ಲಿ ನಡೆದ Health Science – Oral Presentation ವಿಭಾಗದ “ಯುವ ಸಂಶೋಧಕ ಪ್ರಶಸ್ತಿಯ ಜೊತೆಗೆ ಪ್ರಥಮ ಸ್ಥಾನ ಪಡೆದು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಗಳಿಸಿದ್ದಾರೆ.
NBRCOM 2025 ದೇಶದ ಪ್ರಮುಖ ಜೈವಿಕ ಮತ್ತು ಆರೋಗ್ಯ ವಿಜ್ಞಾನ ವೇದಿಕೆಗಳಲ್ಲೊಂದಾಗಿದ್ದು, ದೇಶದಾದ್ಯಂತದ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಿಂದ ಅತ್ಯುತ್ತಮ ಯುವ ವಿಜ್ಞಾನಿಗಳು ಸ್ಪರ್ಧೆಗೆ ಬರುತ್ತಾರೆ. ಅತ್ಯಂತ ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ ಶ್ರೇಷ್ಠ ಸಂಶೋಧನೆಗಳಿಗೆ ರಾಷ್ಟ್ರಮಟ್ಟದ ಮಾನ್ಯತೆ ನೀಡುವ ಪ್ರತಿಷ್ಠಿತ ವೇದಿಕೆ ಎಂದೇ NBRCOM ಹೆಸರಾಗಿದೆ.
ಈ ಸ್ಪರ್ಧೆಯಲ್ಲಿ ಕೃತಿ ಅವರ ಸಂಶೋಧನೆ e-Patram ಎಂಬ ಅತಿ ಕಡಿಮೆ ವೆಚ್ಚದ, ಪೇಪರ್-ಆಧಾರಿತ ಪಾಯಿಂಟ್-ಆಫ್-ಕೇರ್ (POCT) ಸೆನ್ಸರ್ ಕುರಿತು.
ಇದು ಮೂತ್ರದಲ್ಲಿನ ಡೊಪಮಿನ್ ಅನ್ನು ಸುಲಭವಾಗಿ ಪತ್ತೆಹಚ್ಚಿ, Parkinson’s Disease ಸೇರಿದಂತೆ ನ್ಯೂರಾಲಜಿಕಲ್ ಆರೋಗ್ಯ ಸ್ಥಿತಿಗಳಿಗೆ ಮುನ್ನೋಟ ನೀಡಲು ಸಹಕಾರಿಯಾಗಿದೆ.
ಪ್ರಸ್ತುತ catecholamine test ಮಾಡಿಸಲು ರೋಗಿಗಳು ಸುಮಾರು 5000 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ಕೃತಿಯವರು ಅಭಿವೃದ್ಧಿಪಡಿಸಿರುವ e-Patram ಸೆನ್ಸರ್ ಒಂದೇ ಪರೀಕ್ಷೆಗೆ ಕೇವಲ 5 ರೂಪಾಯಿ ವೆಚ್ಚದಲ್ಲಿ ಬಳಸಬಹುದಾದ ಅತ್ಯಂತ ಆರ್ಥಿಕ ಮತ್ತು ಸುಲಭವಾದ ಪರ್ಯಾಯ.
ಈ ಸಾಧನೆ ಆರೋಗ್ಯ ಸೇವೆಗಳಲ್ಲಿನ ವೆಚ್ಚ ಕಡಿತಕ್ಕೆ ಮಹತ್ವದ ದಾರಿ ತೆರೆದಿದ್ದು, NBRCOM ನಲ್ಲಿ ಪ್ರಶಸ್ತಿ ಪಡೆಯುವುದು ದೇಶದ ಶ್ರೇಷ್ಠ ವಿಜ್ಞಾನಿಗಳ ನಡುವೆ ಕೃತಿ ಅವರ ಸಂಶೋಧನೆ ಹೊರಹೊಮ್ಮಿದೆ ಎಂಬುದಕ್ಕೆ ದೊಡ್ಡ ಮಾನ್ಯತೆಯಾಗಿದೆ.
Tags:
ತೀರ್ಥಹಳ್ಳಿ ಸುದ್ದಿ