ಗುರುಗಳನ್ನು, ಹಿರಿಯರನ್ನು ಗೌರವದಿಂದ ಕಾಣುವ ಅಭ್ಯಾಸವನ್ನು ಮಕ್ಕಳಿಗೆ ಪೋಷಕರು ಮಾಡಿಸಬೇಕು students

ಗುರುಗಳನ್ನು,  ಹಿರಿಯರನ್ನು ಗೌರವದಿಂದ ಕಾಣುವ ಅಭ್ಯಾಸವನ್ನು ಮಕ್ಕಳಿಗೆ ಪೋಷಕರು ಮಾಡಿಸಬೇಕು


ನನ್ನ ಚಿಕ್ಕವಳಿಂದ ಏನಾಗ್ತೀಯ  ದೊಡ್ಡವಳಾದ್ಮೇಲೆ..?!
 ಅಂತ ಕೇಳಿದ್ರೆ..., 'ಏನಾದ್ರೂ  ಟೀಚರ್ ಮಾತ್ರ ಆಗಲ್ಲ' ಅಂತಿದ್ದೆ. ತಾನೊಂದು ಬಗೆದರೆ, ದೈವವೊಂದು ಬಗೆಯುವುದು ಅನ್ನೋಹಾಗೆ, ನಾನು ಅಂದುಕೊಳ್ಳದ ಒಳ್ಳೆಯ ದಾರಿಯಲ್ಲಿ ನನ್ನ ನಡೆಸುತ್ತಿದ್ದಾನೆ. ನನಗೆ ಗೊತ್ತಿಲ್ಲದೆ ನಾನು ಗುರುವಾದೆ. ಹಾಗೆ ಕಲಿಕೆಯಲ್ಲಿ ಮಕ್ಕಳೊಂದಿಗೆ ವಿದ್ಯಾರ್ಥಿಯು ಆಗಿರುವೆ.

ಪ್ರಪಂಚದಲ್ಲಿರುವ ಅದೆಂತಹದ್ದೇ ಶ್ರೇಷ್ಠ / ಅತೀ ಹೆಚ್ಚು ಸಂಬಳ ಬರುವ ಉದ್ಯೋಗವೇ ಆದ್ರೂ ಅದರ ಮೂಲ ಮೊಳಕೆ ಒಬ್ಬ 'ಶಿಕ್ಷಕನಿಂದಲೇ' ಅನ್ನೋದು ಎಷ್ಟು ಸತ್ಯ ಅಲ್ವಾ! ಎಲ್ಲರಿಗೂ ಗುರುವಾಗುವ ಯೋಗ್ಯತೆ ಅಥವಾ ಅದೃಷ್ಟ ಇರೋದಿಲ್ಲ ಅದಕ್ಕೆ ಹಿರಿಯರು ಹೇಳಿರೋದು "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು.

ಹಾಂ! ನಾನು ಏನು ಹೇಳೋಕೆ ಬಂದಿದ್ದೀನಿ ಅಂದ್ರೆ...,
 ಈಗಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಒಂತರ ಅವರ ಕ್ಲಾಸ್ಮೇಟ್ಸ್  ತರ ಆಗೋಗಿದಾರೆ, ಇದು ಒಂದು ರೀತಿಯಲ್ಲಿ ಖುಷಿ ಹಾಗೆ ದುರಂತ ಕೂಡ.  ಈಗಿನ ಪೋಷಕರು ತಮ್ಮ ಮಕ್ಕಳನ್ನು ತೀರ ಕುರುಡರ ಹಾಗೆ ಪ್ರೀತಿಸೋದನ್ನ ನೋಡುವಾಗ, ನಗುವಿನ ಜೊತೆಗೆ ಇವರ ತಲೆಲಿ ಯೋಚನೆ ಮಾಡುವ ಅಥವಾ ಪರಂಬರಿಸುವ ಸಾಮರ್ಥ್ಯ ಸತ್ತು ಹೋಗಿದಿಯಾ ಅಂತ..

ಅದು ಹಾಗಿರ್ಲಿ.
ನಾವೆಲ್ಲ ಈಗಲೂ ನಮ್ಮ ಗುರುಗಳನ್ನ ಕಂಡಾಗ ಒಂದು ಕ್ಷಣ ಹೆದರಿ ಪ್ರೀತಿಯಿಂದ ಕೈ ಮುಗಿದು ನಮಸ್ತೆ ಸರ್, ನಮಸ್ತೆ ಮಿಸ್ ಅಂತ ಮಕ್ಕಳ ಹಾಗೆ ಮಾತಾಡಿಸುವುದು ರೂಢಿ.
ಆದರೆ ಈಗಿನ ವಿದ್ಯಾರ್ಥಿಗಳ ಬಗ್ಗೆ ನಾನು ಹೇಳೋ ಅಗತ್ಯವೇ ಇಲ್ಲ. 'ಶಿಕ್ಷಕರನ್ನು ಕಂಡಾಗ ಗೌರವದಿಂದ ಕಾಣಬೇಕು' ಎಂಬ ವಿಷಯವನ್ನು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿ, ಶಾಲೆಯಲ್ಲಿ ಪ್ರತಿನಿತ್ಯ ಮಕ್ಕಳು ಶಾಲೆಯೊಳಗೆ ಶಿಕ್ಷಕರಿಗೆ ಗೌರವ ಕೊಡುವ ವ್ಯವಸ್ಥೆ ನಮ್ಮಲ್ಲಿದೆ.  ಆದರೆ ರಸ್ತೆಯಲ್ಲಿ ಶಾಲಾ ಆವರಣದ ಹೊರಗಡೆ ಪೋಷಕರೊಂದಿಗೇ ಸಿಕ್ಕಾಗ ಮಕ್ಕಳಿಗೆ ಸಂಸ್ಕಾರವನ್ನು ಪೋಷಕರು ತಾನೇ ಹೇಳಿಕೊಡಬೇಕು..? 
 ಅಲ್ಲಿಯೂ.. 'ನಾನು ನಿನ್ನ ಟೀಚರ್ ವಿಶ್ ಮಾಡು' ಎಂದು ಹೇಳಲು ಸಾಧ್ಯವಿದೆಯೇನು?! ಇದಕ್ಕೆ ಹೇಳಿರೋದು, 
"ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ "ಎಂದು.

ಸರಿ ಈಗಿನ ಕಾಲಘಟ್ಟದಲ್ಲಿ ದಡ್ಡ ವಿದ್ಯಾರ್ಥಿಗಳು ತೀರಾ ಕಡಿಮೆ..ಒಂದು ತರಗತಿಯ 40 ಮಕ್ಕಳಿಗೆ ಒಬ್ಬರೇ ಟೀಚರ್ ಪಾಠ ಮಾಡಿರ್ತಾರೆ 40 ಮಕ್ಕಳಲ್ಲಿ ನೂರಕ್ಕೆ ನೂರು ಅಂಕ ತೆಗೆಯುವ ವಿದ್ಯಾರ್ಥಿಗಳಿದ್ದರೆ, ಅದು ಅಪ್ಪ- ಅಮ್ಮನ, ಟ್ಯೂಷನ್ ಮಿಸ್ ನ ಶ್ರಮ. ಅದೇ ಕಡಿಮೆ ಅಂತ ತೆಗೆದ ವಿದ್ಯಾರ್ಥಿ ಇದ್ದರೆ ಅದು 'ಶಿಕ್ಷಕರ ಅಸಡ್ಡೆ ಮತ್ತು ಪಾಠ ಸರಿಯಾಗಿ ಮಾಡದ ಕಾರಣ'. ಮಗು ಶಾಲೆಯಲ್ಲಿ ಬಿದ್ದು ಅನಾಹುತವಾದರೆ, ಅದು ಶಾಲಾ ಆಡಳಿತದ ಶಿಕ್ಷಕರ ಬೇಜವಾಬ್ದಾರಿ  ಮತ್ತು ಅಪರಾಧ. ಅದೇ ಮನೆಯಲ್ಲಿ ಬಿದ್ದರೆ ಮಗುವಿಗೆ ಗೊತ್ತಾಗಲಿಲ್ಲ, ಅಕಸ್ಮಾತ್ ಆಗಿದ್ದು.
ಕಾಂಪಿಟೇಶನ್ ಗಳಲ್ಲಿ ಸೋತರೆ ಶಿಕ್ಷಕರು ಸರಿಯಾಗಿ ಪ್ರಾಕ್ಟೀಸ್ ಮಾಡಿಸಿರಲಿಲ್ಲ, ಅದೇ ಗೆದ್ದರೆ ಪೋಷಕರು ಬೇರೆ ಪಠ್ಯತರ ಚಟುವಟಿಕೆಗಳ ತರಗತಿಗಳಿಗೆ ಮಕ್ಕಳನ್ನು ಹಾಕಿದ್ದರಿಂದ.

ಇದೆಲ್ಲದರ ನಡುವೆಯೂ  ಪೋಷಕರನ್ನು, ಮಕ್ಕಳನ್ನು, ಆಡಳಿತ ಮಂಡಳಿಯನ್ನು ಸಮನಾಗಿ ತೂಗಿಸಿ ಸುಧಾರಿಸಿಕೊಂಡು ವಯಕ್ತಿಕ ಕಾರಣಗಳನ್ನೆಲ್ಲ ಬದುಗಿಟ್ಟು  ಕೆಲಸ ನಿರ್ವಹಿಸುವ ಶಿಕ್ಷಕರ ಪರಿಸ್ಥಿತಿ ನಿಜಕ್ಕೂ ಊಹಿಸಲಸಾಧ್ಯ ಎಂದರೆ ಉತ್ಪ್ರೇಕ್ಷೆ ಏನಲ್ಲ. ಪ್ರತಿ ಸಣ್ಣ ಪುಟ್ಟ ವಿಷಯಗಳು  ತಮ್ಮ ಬಳಿ ಬರುವಾಗ ಯಾರನ್ನು ಬಿಟ್ಟು ಕೊಡದೆ ಪರಿಸ್ಥಿತಿಗಳನ್ನು ನಿಭಾಯಿಸುವ 'ಮುಖ್ಯ ಶಿಕ್ಷಕರು ' ಎಲ್ಲ ಸಹಶಿಕ್ಷಕರಿಗೂ ಸ್ಫೂರ್ತಿಯೇ ಸರಿ.

ಗುರು ಬ್ರಹ್ಮ  ಗುರು ವಿಷ್ಣು 
ಗುರು ದೇವೋ ಮಹೇಶ್ವರ||
ಗುರು ಸಾಕ್ಷಾತ್ ಪರಬ್ರಹ್ಮ 
ತಸ್ಮೈ ಶ್ರೀ ಗುರವೇ ನಮಃ||
 
ಪೋಷಕರು ಶಾಲಾ ಪಠ್ಯದ ಜೊತೆಗೆ, ಪಠ್ಯೇ ತರ ಚಟುವಟಿಕೆಗಳ ಜೊತೆಗೆ, ಗುರುಗಳನ್ನು ಹಿರಿಯರನ್ನು ಗೌರವದಿಂದ ಕಾಣುವ ಅಭ್ಯಾಸವನ್ನು ದಿನನಿತ್ಯ ಮನೆಯಲ್ಲಿ ರೂಢಿ ಮಾಡಿಸಿ ಸಂಸ್ಕಾರಯುತ ಮಕ್ಕಳನ್ನು ಬೆಳೆಸಿದರೆ ಮುಂದೆ ನಿಮ್ಮ ಮಕ್ಕಳು ನಿಮ್ಮನ್ನು ಗೌರವದಿಂದ ಪ್ರೀತಿಯಿಂದ ಕಾಣುತ್ತಾರೆ ಅನ್ನೋದು ನಮ್ಮ ಕಾಳಜಿ..



Previous Post Next Post