ಗಣಪತಿಯನ್ನು ನೀರಲ್ಲೇ ಮುಳುಗಿಸುವುದು ಯಾಕೆ? ಗಣೇಶ ವಿಸರ್ಜನೆಯ ಮಹತ್ವ ಗೊತ್ತಾ?
ಗಣಪತಿ ಹಬ್ಬ ಬಂತು ಎಂದರೆ ಅದೇನೋ ಸಡಗರ, ಸಂಭ್ರಮ, ಆದರೆ ಗಣೇಶನನ್ನು ವಾಪಸ್ ಕಳಿಸಿಕೊಡಲು ಮನಸ್ಸಿಗೆ ಸಂಕಟವಾಗುತ್ತದೆ. ಆದರೆ ಸಂಪ್ರದಾಯದ ಭಾಗವಾಗಿರೋದ್ರಿಂದ ಗಣೇಶನ ವಿಸರ್ಜನೆ ಅನಿವಾರ್ಯ.
ಗಣೇಶನ ಪ್ರತಿಷ್ಠಾಪನೆ, ಪೂಜೆ ಎಷ್ಟು ಮಹತ್ವದ್ದೋ ಅಷ್ಟೇ ಮಹತ್ವ ಗಣೇಶನ ಮೂರ್ತಿಗಳ ವಿಸರ್ಜನೆಗೆ ಅದರದ್ದೇ ಆದ ಮಹತ್ವ ಇರುತ್ತದೆ. ಒಂದು ದಿನ, ಮೂರು ದಿನ, ಐದು, ಏಳು, ಒಂಬತ್ತು, ಹನ್ನೊಂದು ದಿನ ಹೀಗೆ ಗಣೇಶನನ್ನು ಹಲವು ದಿನಗಳ ಕಾಲ ಇಟ್ಟು ಪೂಜಿಸಲಾಗುತ್ತದೆ. ಅಂತಿಮವಾಗಿ ಗಣೇಶನನ್ನು ನೀರಲ್ಲಿ ವಿಸರ್ಜಿಸಲಾಗುತ್ತದೆ. ಹಾಗಿದ್ರೆ ಗಣೇಶನ ಮೂರ್ತಿ ವಿಸರ್ಜನೆ ಮಹತ್ವವೇನು? ಅದನ್ನು ನೀರಲ್ಲೇ ಯಾಕೆ ಮುಳುಗಿಸಲಾಗುತ್ತದೆ? ಇದರ ವಿಧಿವಿಧಾನಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ…
ಗಣೇಶ ವಿಸರ್ಜನೆಯ ಸಂದೇಶವೇನು?
ಗಣೇಶನ ಮೂರ್ತಿಯನ್ನು ತಯಾರಿಸಿ, ಪೂಜಿಸಿ, ನಂತರ ವಿಸರ್ಜನೆ ಮಾಡುವುದು ಜೀವನದ ಚಕ್ರವನ್ನು ಸಂಕೇತಿಸುತ್ತದೆ. ಸೃಷ್ಟಿ, ಸ್ಥಿತಿ ಮತ್ತು ಲಯ ಅಥವಾ ವಿನಾಶದ ಬಗ್ಗೆ ತಿಳಿಸುತ್ತದೆ. ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುವುದು ಎಂದರೆ ಎಲ್ಲವೂ ತಾತ್ಕಾಲಿಕವಾಗಿದೆ ಎಂಬ ತತ್ವವನ್ನು ಒಪ್ಪಿಕೊಳ್ಳುವುದು. ಇದು ಜೀವನದ ನಶ್ವರತೆಯನ್ನು ಮತ್ತು ಎಲ್ಲವೂ ದೇವರಲ್ಲಿ ಒಂದಾಗುತ್ತದೆ ಎಂಬ ಆಧ್ಯಾತ್ಮಿಕ ಸಂದೇಶವನ್ನೂ ನೀಡುತ್ತದೆ.
ಪ್ರಕೃತಿಯಿಂದಲೇ ಬಂದು, ಪ್ರಕೃತಿಯಲ್ಲೇ ಲೀನ
ಗಣೇಶನ ಮೂರ್ತಿಗಳನ್ನು ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸಲಾಗುತ್ತದೆ. ನೀರಿನಲ್ಲಿ ವಿಸರ್ಜನೆ ಮಾಡುವಾಗ, ಮೂರ್ತಿಯು ಮಣ್ಣಾಗಿ ಕರಗಿ ಪರಿಸರದೊಂದಿಗೆ ಒಂದಾಗುತ್ತದೆ. ಇದು 'ಎಲ್ಲವೂ ಪ್ರಕೃತಿಯಿಂದ ಬಂದು ಪ್ರಕೃತಿಗೆ ಮರಳುತ್ತದೆ' ಎಂಬ ಆಧ್ಯಾತ್ಮಿಕ ತತ್ವವನ್ನು ಪ್ರತಿಬಿಂಬಿಸುತ್ತದೆ. ಇದು ಮಾನವನಿಗೆ ತನ್ನ ಮೂಲದೊಂದಿಗೆ ಸಾಮರಸ್ಯದಿಂದ ಬದುಕಬೇಕೆಂಬ ಸಂದೇಶವನ್ನು ನೀಡುತ್ತದೆ.
ಗಣೇಶ ವಿಸರ್ಜನೆಗೂ ಇದೆ ಮಹತ್ವ
ಈಶ್ವರ ಮತ್ತು ಪಾರ್ವತಿಯರ ಪುತ್ರ ಗಣೇಶನನ್ನು ಭೂಮಿಗೆ ಸ್ವಾಗತಿಸುವ ಸಲುವಾಗಿ ಗಣೇಶನನ್ನು ಕೂರಿಸಲಾಗುತ್ತದೆ. ಅದೇ ರೀತಿ ಆತನ್ನು ಪೂಜಿಸಿ, ಪುನಃ ಕೈಲಾಸಕ್ಕೆ ಗಣೇಶನನ್ನು ಕಳುಹಿಸುವ ಪ್ರಯುಕ್ತ ಮನೆಯಲ್ಲಿಟ್ಟು ಪೂಜಿಸಿದ ಗಣೇಶನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಗಣೇಶನನ್ನು ಕೂರಿಸುವಾಗ ಹೇಗೆ ಪ್ರತಿಷ್ಠಾಪನಾ ವಿಧಿ - ವಿಧಾನಗಳನ್ನು ಅನುಸರಿಸಲಾಗುತ್ತದೆಯೋ ಹಾಗೇ ಗಣೇಶನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವಾಗಲೂ ಕೆಲವೊಂದು ವಿಸರ್ಜನಾ ವಿಧಿ - ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಗಣೇಶನ ಮೂರ್ತಿ ನೀರಲ್ಲಿ ಮುಳುಗಿಸುವುದು ಸೂಕ್ತ
ಹಿಂದೂ ಪುರಾಣಗಳ ಪ್ರಕಾರ ದೇವಸ್ಥಾನದಲ್ಲಲ್ಲದೆ ಬೇರೆಲ್ಲೇ ಆದರೂ ಪೂಜೆ ಮುಗಿದ ತಕ್ಷಣ ಮಣ್ಣಿನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವ ಪರಿಪಾಠವಿದೆ. ದೇವಾಲಯದಲ್ಲಿ ವಿಗ್ರಹವನ್ನಿಟ್ಟು ಪ್ರತಿದಿನವೂ ಅದಕ್ಕೆ ಪೂಜೆ ನಡೆಯುತ್ತಿದ್ದರೆ ಸರಿ, ಇಲ್ಲವೆಂದರೆ ಪೂಜೆ ನಡೆಯದ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುವುದು ಸೂಕ್ತ ಅಂತ ಶಾಸ್ತ್ರಗಳು ಹೇಳುತ್ತವೆ.
ಮುಳುಗಿಸದೇ ಹಾಗೇ ಇಟ್ಟುಕೊಂಡರೆ ಏನಾಗುತ್ತದೆ?
ಒಂದು ವೇಳೆ ಗಣೇಶನ ಮೂರ್ತಿಯನ್ನು ಮುಳುಗಿಸಲು ಇಷ್ಟವಿಲ್ಲದಿದ್ದರೆ, ಅದನ್ನು ಮನೆಯಲ್ಲೇ ಇಟ್ಟುಕೊಂಡು ಪ್ರತಿದಿನ ಪೂಜೆ, ಮಂತ್ರಾದಿಗಳು ನಡೆಯಬೇಕು. ಪೂಜೆಯಿಲ್ಲದೆ ಹಾಗೆಯೇ ಮೂರ್ತಿಯನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರವಲ್ಲ. ಆದ್ದರಿಂದಲೇ ನಿರ್ದಿಷ್ಟ ದಿನಗಳ ಕಾಲ ಮೂರ್ತಿಯನ್ನು ಪೂಜಿಸಿ ನಂತರ ಅದ್ಧೂರಿ ಕಾರ್ಯಕ್ರಮಗಳೊಂದಿಗೆ ಅದನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ.
Tags:
ಗಣೇಶೋತ್ಸವ