ತೀರ್ಥಹಳ್ಳಿ ಅಭಿವೃದ್ಧಿಗಾಗಿ ಆಸಾದಿ ಪಣ - ಹಲವು ಯೋಜನೆಯ ಮೂಲಕ ಕಾರ್ಯಗತ Muncipal

ತೀರ್ಥಹಳ್ಳಿ ಅಭಿವೃದ್ಧಿಗಾಗಿ ಆಸಾದಿ ಪಣ - ಹಲವು ಯೋಜನೆಯ ಮೂಲಕ ಕಾರ್ಯಗತ
ತೀರ್ಥಹಳ್ಳಿ : ರಾಷ್ಟ್ರಕವಿ ಕುವೆಂಪು ಅವರ ಹೆಸರಲ್ಲಿ ತೀರ್ಥಹಳ್ಳಿ ಪ.ಪಂ. ಮೈದಾನದ ಜಾಗದಲ್ಲಿ ಸುವ್ಯವಸ್ಥಿತವಾದ ಬಯಲು ರಂಗ ಮಂದಿರವನ್ನು 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಬೇಕೆಂಬ ನನ್ನ ಆಲೋಚನೆಗೆ ಯಶಸ್ಸು ಸಿಕ್ಕಿದೆ. ಈಗಾಗಲೇ ಅನುದಾನದ ವ್ಯವಸ್ಥೆಯಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ತಿಳಿಸಿದರು.

ತಾವು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ರೂಪಿಸಿದ ಕಾರ್ಯಕ್ರಮ, ಅನುಷ್ಠಾನಗೊಳಿಸಿದ ಯೋಜನೆ, ತಮ್ಮ ಪ್ರಯತ್ನದಿಂದ ಮಂಜೂರಾತಿ-ಅನುಮೋದನೆ ಪಡೆದು ಸದ್ಯದಲ್ಲೇ ಕಾರ್ಯಗತವಾಗಲಿರುವಂತಹ ಕೆಲಸಗಳ ಕುರಿತು  ಮಾಹಿತಿ ನೀಡಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಸ್ಮರಣೀಯ ಸೇವೆ ಸಲ್ಲಿಸಿರುವ ತೀರ್ಥಹಳ್ಳಿಯ ಹಿರಿಯ ವೈದ್ಯರಾದ ಡಾ.ಟಿ.ನಾರಾಯಣ ಸ್ವಾಮಿ ಅವರ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪಟ್ಟಣ ಪಂಚಾಯ್ತಿ ನೂತನ ಕಟ್ಟಡದ ಸಭಾಂಗಣಕ್ಕೆ ಡಾ|ನಾರಾಯಣಸ್ವಾಮಿ ಹೆಸರನ್ನು ನಾಮಕರಣ ಮಾಡುವ ವಿಚಾರ ಪ್ರಸ್ತಾಪಿಸಿದ್ದೇ, ಆ ನಂತರ ಸರ್ವ ಸದಸ್ಯರ ಸಮ್ಮತಿ ಮೇರೆಗೆ ನಿರ್ಣಯ ಸ್ವೀಕರಿಸಿ ಸಭಾಂಗಣಕ್ಕೆ ಹಿರಿಯ ಬಿಜೆಪಿ ನಾಯಕರು ಆಗಿರುವ ಡಾ||ನಾರಾಯಣ ಸ್ವಾಮಿ ಅವರ ಹೆಸರು ಇಡಲಾಗಿದೆ ಎಂದರು

ದಸರಾ ಹಬ್ಬ ಆಚರಿಸಲ್ಪಡುವ ಕುಶಾವತಿ ಪಾರ್ಕಿನ ವಿಜಯ ಮಂಟಪವನ್ನು ನವೀಕರಣಗೊಳಿಸಲು 10 ಲಕ್ಷ ರೂ.ಗಳನ್ನು ಕಾಯ್ದಿರಿಸಿದ್ದೇವೆ. ಕುಶಾವತಿ ನೆಹರೂ ಪಾರ್ಕನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಮಕ್ಕಳ ಆಟಿಕೆ ಹಾಗೂ ಮನೋರಂಜನಾ ಸಾಮಾಗ್ರಿಗಳನ್ನು ಅನ್ನು ಸ್ಥಾಪಿಸಲಾಗುವುದು. ಇನ್ನು ಪಟ್ಟಣದ ನಾಗರೀಕರ ಸುರಕ್ಷತೆ ದೃಷ್ಟಿಯಿಂದ ಪಟ್ಟಣದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ 40ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಅದರ ಜವಾಬ್ದಾರಿಯನ್ನು ಪೋಲಿಸ್ ಇಲಾಖೆಗೆ ನೀಡುವ ಕೆಲಸ ಶುರುವಾಗಿದ್ದು ಪೋಲಿಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎಲ್ಲೆಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಸಲಹೆ ಪಡೆಯುತ್ತಿದ್ದೇವೆ ಎಂದರು.

ತೀರ್ಥಹಳ್ಳಿ ಪಟ್ಟಣಕ್ಕೆ ಬರುವವರು ತುಂಗಾ ತೀರಾ ಹಾಗೂ ಕುಶಾವತಿ ಪಾರ್ಕಿಗೆ ಭೇಟಿ ಕೊಡುತ್ತಾರೆ. ಈ ಎರಡೂ ಸ್ಥಳಗಳನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ತುಂಗಾತೀರದ ಸೌಂದರ್ಯೀಕರಣ, ಕೂರುವ ವ್ಯವಸ್ಥೆ ಮಾಡಲಾಗುತ್ತದೆ. ಕುಶಾವತಿ ಪಾರ್ಕ್‌ ದಸರಾ ಮಂಟಪವನ್ನು ಇನ್ನಷ್ಟು ಅಂದವಾಗಿ ರೂಪಿಸಲಾಗುತ್ತಿದೆ ಮತ್ತು ಪಾರ್ಕಿನಲ್ಲಿ ಮಕ್ಕಳಿಗಾಗಿ ಅಂಡರ್ ಗೌಂಡ್ ಫೌಂಟೇನ್ ನಿರ್ಮಿಸಿ ನೀರಿನಲ್ಲಿ ಆಟವಾಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪಟ್ಟಣ ಪಂಚಾಯ್ತಿ ಅದಾಯ ಕ್ರೋಢೀಕರಿಸುವ ಉದ್ದೇಶದಿಂದ ಮುಖ್ಯ ಬಸ್‌ ನಿಲ್ದಾಣದ ಪ.ಪಂ. ಕಾಂಪ್ಲೆಕ್ಸ್‌ನ ಮೊದಲ ಅಂತಸ್ತಿನಲ್ಲಿ ಸುವ್ಯವಸ್ಥಿತ ರೀತಿಯಲ್ಲಿ ಲಾಡ್ಡಿಂಗ್ ರೂಂಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗುತ್ತದೆ ಹಾಗೆಯೇ
ಪಟ್ಟಣ ಪಂಚಾಯ್ತಿ ಕ್ಲಿನಿಕ್ ಆರಂಭಿಸಿ ಪ್ರತಿವಾರ ತಜ್ಞ ವೈದ್ಯರನ್ನು ಇಲ್ಲಿಗೆ ಕರೆಸಿ ಉಚಿತ ಆರೋಗ್ಯ ತಪಾಸಣೆ ಚಿಕಿತ್ಸೆಗೆ ಯೋಜನೆ ಸಿದ್ಧವಾಗಿದೆ. ಹಲವು ಪರಿಣಿತ ವೈದ್ಯರು ಇದಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ತೀರ್ಥಹಳ್ಳಿಯ ಮಹಾಜನತೆಗೆ ಪಟ್ಟಣ ಪಂಚಾಯ್ತಿ ಕ್ಲಿನಿಕ್ ಉಪಯೋಗವಾಗಲಿದೆ ಎಂದರು.

ಪಟ್ಟಣದ ಕೊಪ್ಪ ಸರ್ಕಲ್‌ನಿಂದ ಎಪಿಎಂಸಿ ವರೆಗೆ ವಾಹನ ಪಾರ್ಕಿಂಗ್ ಮಾಡುವ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದು. ಮೊದಲ ಅರ್ಧ ಗಂಟೆ ವಾಹನ ನಿಲುಗಡೆಗೆ ಯಾವ ಚಾರ್ಜ್‌ಗಳೂ ಇರುವುದಿಲ್ಲ. ಅರ್ಧ ಗಂಟೆಗಿಂತ ಹೆಚ್ಚು ಸಮಯ ವಾಹನ ನಿಲ್ಲಿಸಿದರೆ ಹಣ ಪಾವತಿ ಮಾಡಬೇಕಾಗುತ್ತದೆ. ಆ ವ್ಯವಸ್ಥೆ ರೂಪಿಸಲಾಗುವುದು. ಇದರಿಂದ ಇಡೀ ದಿನ ವಾಹನ ನಿಲ್ಲಿಸಿ ಬೇರೆ ಊರಿಗೆ ಹೋಗಿ ಬರುವವರಿಂದ ಆಗುತ್ತಿದ್ದ ರಗಳೆ ಕಡಿಮೆಯಾಗಲಿದೆ.
ಪಟ್ಟಣ ಪಂಚಾಯ್ತಿ ವತಿಯಿಂದ ಯುಪಿಎಸ್‌ ಪರೀಕ್ಷೆಗಳಿಗೆ ಸಿದ್ಧವಾಗುವ ತೀರ್ಥಹಳ್ಳಿಯ ಯುವಕ-ಯುವತಿಯರಿಗೆ ಉಚಿತ ಕೋಚಿಂಗ್ ಕ್ಲಾಸ್-ತರಬೇತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ತಾವು ಪ್ರಯತ್ನ ನಡೆಸುತ್ತಿರುವುದಾಗಿ ಅಸಾದಿ ಹೇಳಿದರು.
Previous Post Next Post