ಸರ್ಕಾರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಮಾಡಬೇಕಾದದ್ದು ಏನು..!?
ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶುಲ್ಕ ವಸೂಲಿ ಮಾಡಬಹುದೇ..!?
ಶಾಲೆಯ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಳ್ಳದೆ ಲಕ್ಷಗಟ್ಟಲೆ ಹಣ ಓರ್ವರ ಕೈಯಲ್ಲಿ ಇಟ್ಟುಕೊಳ್ಳಬಹುದೇ..!?
ತೀರ್ಥಹಳ್ಳಿ : ಸರ್ಕಾರಿ ಶಾಲೆ ಇತ್ತೀಚಿಗೆ ಮುಚ್ಚಲು ಬಹು ಮುಖ್ಯ ಕಾರಣ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಂದರೆ ತಪ್ಪಾಗುವುದಿಲ್ಲ, ಹೌದು ಇತ್ತೀಚಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ದೊರಕುತ್ತಿದ್ದರು ಮಕ್ಕಳು ಇಲ್ಲದೆ ಶಾಲೆಗಳು ಮುಚ್ಚಲು ಒಂದು ಅಧಿಕಾರಿಗಳು ಹಾಗೂ ಕೆಲವು ಬೇಜವಾಬ್ದಾರಿ ಕೆಲಸ ಮಾಡುವ ಶಿಕ್ಷಕರು ಎಂಬುದಾಗಿ ತಿಳಿದು ಬಂದಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಸರಿ ಸುಮಾರು 25 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿವೆ. ಸರ್ಕಾರಿ ಶಾಲೆ ಉಳಿಯಬೇಕು ಎಂದು ಯಾವುದೇ ಕಾರ್ಯಕ್ರಮದಲ್ಲಿ ಬೊಬ್ಬೆ ಇಡುವ ರಾಜಕಾರಣಿಗಳಿಗೂ ಗೊತ್ತಿದೆ, ಯಾವ ಕಾರಣದಿಂದ ಶಾಲೆಗಳು ಮುಚ್ಚುತ್ತಿವೆ ಎಂದು, ಆದರೂ ಸಹ ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳುವ ದೃಷ್ಟಿಯಿಂದ
ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ರಾಜಕಾರಣಿಗಳೇ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯನ್ನು ಕೆಲವು ರಾಜಕೀಯ ಮುಖಂಡರು, ರಾಜಕಾರಣಿಗಳು ದತ್ತು ಎಂಬ ಹೆಸರಿನಲ್ಲಿ ತೆಗೆದುಕೊಂಡು ಅದಕ್ಕೆ ಯಾವುದೇ ರೀತಿ ಒತ್ತು ನೀಡದೆ
ನಂತರ ಶಾಲೆ ಮುಚ್ಚಿತು ಎನ್ನುತ್ತಾರೆ.
ಇನ್ನು ಸರ್ಕಾರಿ ಶಾಲಾ ಮಕ್ಕಳಿಗೆ ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಇದೆ. ಸರ್ಕಾರದಿಂದ ಉಚಿತ ಪಠ್ಯ ಪುಸ್ತಕ, ಉಚಿತ ಸಮವಸ್ತ್ರ, ಊಟ, ಹೀಗೆ ಹಲವು ಯೋಜನೆಗಳನ್ನು ತಂದಿದೆ. ಆದರೆ ಅದರಲ್ಲಿ ಎಷ್ಟೋ ಮಕ್ಕಳಿಗೆ ತಲುಪುವುದೇ ಇಲ್ಲ. ಇನ್ನು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶುಲ್ಕ ತೆಗೆದುಕೊಳ್ಳಲು ಯಾವುದೇ ಅನುಮತಿ ಇಲ್ಲ, ಒಂದು ವೇಳೆ ತೆಗೆದುಕೊಂಡರು ಸಹ ಕನಿಷ್ಠ ಒಂದು ಸಾವಿರದ ಒಳಗೆ ಇರಬೇಕು ಆದರೆ ಇತ್ತೀಚಿಗೆ ಸರ್ಕಾರಿ ಶಾಲೆಯಲ್ಲಿ ನಾಲ್ಕರಿಂದ ಐದು ಸಾವಿರದವರೆಗೆ ಶುಲ್ಕ ತೆಗೆದುಕೊಳ್ಳಲಾಗುತ್ತಿದೆ. ಕಾರಣ ನಮ್ಮದು ಆಂಗ್ಲ ಮಾಧ್ಯಮ ಎಂಬ ಸಬೂಬು ಬೇರೆ..
ಶಾಲಾ ಮಕ್ಕಳ ಶುಲ್ಕ ಏನಾಗುತ್ತೆ..!?
ಒಂದು ವೇಳೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶುಲ್ಕ ಪಾವತಿ ಮಾಡಿಕೊಂಡರು ಸಹ ಆ ಹಣ ಏನು ಮಾಡುತ್ತಾರೆ? ಶಾಲಾ ಅಭಿವೃದ್ಧಿಗೆ ಅಥವಾ ಅತಿಥಿ ಶಿಕ್ಷಕರ ಸಂಬಳಕ್ಕಾಗಿ ಏನಾದರು ಹೋಗುತ್ತಾ? ಈ ರೀತಿ ಹಲವು ಪ್ರೆಶ್ನೆಗಳು ಉದ್ಭವವಾಗಿದೆ. ಇನ್ನು ಶಾಲೆಗಳಿಗೆ ಹಲವು ಮಂದಿ ದಾನಿಗಳು ದಾನ ಕೂಡ ನೀಡುತ್ತಾರೆ. ಆದರೆ ಆ ಹಣ ಎಲ್ಲಿಗೆ ಹೋಗುತ್ತೆ? ಶಾಲೆಯ ಅಭಿವೃದ್ಧಿ ಮಾತ್ರ ಶೂನ್ಯವಾಗಿಯೇ ಉಳಿದಿರುತ್ತೆ..! ಸರ್ಕಾರಿ ಶಾಲೆಯಲ್ಲಿ 250 ಮಕ್ಕಳಿದ್ದರೆ ಶುಲ್ಕದ ಹಣ ಬರೋಬ್ಬರಿ ಲಕ್ಷಗಟ್ಟಲೆ ಆಗುತ್ತದೆ. ಶಾಲೆ ಅಭಿವೃದ್ಧಿಯೂ ಆಗದೇ ಇದ್ದರೆ ಹಣ ಏನಾಗುತ್ತೆ? ಎಂಬುದೇ ಯಕ್ಷ ಪ್ರೆಶ್ನೆ ಆಗಿದೆ..
ಶಾಲಾ ಅಭಿವೃದ್ಧಿ ಆಡಳಿತ ಮಂಡಳಿಗೂ ಹಿರಿಯ ವಿದ್ಯಾರ್ಥಿಗಳ ಸಂಘಕ್ಕೂ ಏನು ವ್ಯತ್ಯಾಸ..!?
ಸರ್ಕಾರಿ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಮಂಡಳಿ ( SDMC ) ಇರುತ್ತದೆ. ಹಾಗೆ 2017 ರಲ್ಲಿ ಆ ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳ ಸಂಘ ಎಂದು ಸ್ಥಾಪನೆ ಮಾಡಬೇಕೆಂದು ಸರ್ಕಾರ ಆದೇಶ ಮಾಡಿತು. ಕಾರಣ ಸರ್ಕಾರಿ ಶಾಲೆಯ ಉಳಿವಿಗಾಗಿ ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರು ದಾನಿಗಳನ್ನು ಹುಡುಕಿ ಶಾಲೆಯ ಅಭಿವೃದ್ಧಿಗಾಗಿ ಸಹಕಾರ ನೀಡಬೇಕು ಎಂಬುದು ಸರ್ಕಾರದ ಆದೇಶ ಆಗಿತ್ತು. ಆದರೆ ಇತ್ತೀಚಿಗೆ ಶಾಲಾ ಅಭಿವೃದ್ಧಿ ಆಡಳಿತ ಮಂಡಳಿಗಿಂತ ಜಾಸ್ತಿ ಹಿರಿಯ ವಿದ್ಯಾರ್ಥಿಗಳ ಸಂಘವೇ ತಮ್ಮ ಶಾಲೆ ಎಂಬ ಕಾರಣದಿಂದ
ಶಾಲಾ ವ್ಯವಸ್ಥೆಯನ್ನು ತಮ್ಮ ತೆಕ್ಕೆಯಲ್ಲಿ ಇಟ್ಟುಕೊಂಡು
ಶಾಲೆಯ ವ್ಯವಸ್ಥೆ ಹಾಳು ಮಾಡುತ್ತಿದ್ದಾರಾ? ಎಂಬ ಅನುಮಾನಕ್ಕೆ ತೀರ್ಥಹಳ್ಳಿಯ ಕೆಲವು ಶಾಲೆಗಳು ಪುಷ್ಟಿ ನೀಡುತ್ತಿವೆ...
ಶಾಲೆಯ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಳ್ಳದೆ ಲಕ್ಷಗಟ್ಟಲೆ ಹಣ ಓರ್ವರ ಕೈಯಲ್ಲಿ ಇಟ್ಟುಕೊಳ್ಳಬಹುದೇ..!?
ಶಾಲೆಯ ಅಭಿವೃದ್ಧಿಗೆ ಹಣ ಎನ್ನುವುದು ಬಹಳ ಮುಖ್ಯ, ಆದರೆ ಮಕ್ಕಳ ಬಳಿ ಹಣ ತೆಗೆದುಕೊಳ್ಳುವಂತಿಲ್ಲ. ಆ ಸಂದರ್ಭದಲ್ಲಿ ದಾನಿಗಳ ಸಹಾಯದಿಂದ ಶಾಲೆಯ ಅಭಿವೃದ್ಧಿ ಮಾಡಬೇಕು. ಆದರೆ ಇತ್ತೀಚಿಗೆ ಮಕ್ಕಳ ಬಳಿಯೂ ಶುಲ್ಕದ ಹೆಸರಲ್ಲಿ ಹಣ ಪಡೆದುಕೊಳ್ಳುವುದು, ಇತ್ತ ದಾನಿಗಳು ನೀಡುವ ಹಣ ಪಡೆದುಕೊಳ್ಳುವುದು, ಶಾಲೆಯ ಅಭಿವೃದ್ಧಿಗೆ ಕೊಕ್ ನೀಡುವುದು. ಇದೆಲ್ಲದರ ನಡುವೆ ಯಾವುದೇ ಚಟುವಟಿಕೆ ನಡೆಯಬೇಕು ಎಂದರೆ ಶಾಲೆಯ ಹೆಸರಲ್ಲಿ ಬ್ಯಾಂಕ್ ಖಾತೆ ಇರಬೇಕು, ಆದರೆ ತೀರ್ಥಹಳ್ಳಿಯ ಕೆಲವು ಸರ್ಕಾರಿ ಶಾಲೆಯಲ್ಲಿ ಬ್ಯಾಂಕ್ ಖಾತೆ ಮಾಡಿಕೊಳ್ಳದೆ ಲಕ್ಷಗಟ್ಟಲೆ ಹಣ ಓರ್ವರ ಕೈಯಲ್ಲಿ ಇಟ್ಟುಕೊಂಡಿದ್ದಾರೆ ಎಂಬುದಾಗಿ ಪೋಷಕರಿಂದ ತಿಳಿದು ಬಂದಿದ್ದು ಹಾಗೆ ಲಕ್ಷಗಟ್ಟಲೆ ಹಣ ಇಟ್ಟುಕೊಳ್ಳಬಹುದೇ? ಎಂಬ ಪ್ರೆಶ್ನೆ ಮೂಡಿದೆ.
ಬ್ಯಾಂಕ್ ಖಾತೆ ಇಲ್ಲದೆ ಹಣ ಓರ್ವರ ಕೈಯಲ್ಲಿ ಇರುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿದಿಲ್ವಾ..!?
ಸರ್ಕಾರಿ ಶಾಲೆಯೊಂದರ ಹಣ ಬ್ಯಾಂಕ್ ಖಾತೆಯಲ್ಲಿ ಇರದೇ ಓರ್ವ ವ್ಯಕ್ತಿಯ ಕೈಯಲ್ಲಿ ಲಕ್ಷಗಟ್ಟಲೆ ಹಣ ಇದೆ ಇದು ಸರಿಯೇ? ಎಂಬುದಾಗಿ ಈಗ ಪೋಷಕರು ಸೇರಿ ಸಾರ್ವಜನಿಕರೇ ಮಾತನಾಡುತ್ತಿದ್ದರು ಸಹ ಈ ವಿಚಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿದಿಲ್ವಾ..!? ಅಥವಾ ತಿಳಿದರು ಮೌನ ವಹಿಸಿದ್ದರಾ? ಅಥವಾ ಈ ವಿಚಾರದಲ್ಲಿ ಅವರೇನಾದರೂ ಭಾಗಿ ಆಗಿದ್ದಾರಾ? ಎಂಬೆಲ್ಲಾ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಶಾಲಾ ಮಕ್ಕಳ ಹಣದ ವಿಚಾರ ಮತ್ತಷ್ಟು ರೋಚಕತೆ ಇದ್ದು
ಈ ವಿಚಾರವಾಗಿ ಮತ್ತಷ್ಟು ಸುದ್ದಿ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ, ಭಾಗ - 2 ರ ಜೊತೆಗೆ ಶೀಘ್ರದಲ್ಲಿ.....