ಕುಪ್ಪಳ್ಳಿಯ ಕುವೆಂಪು ಮನೆ ಈಗ ಮೋಜು ಮಸ್ತಿಯ ತಾಣವಾಗ್ತಿದ್ಯಾ..!?
ರಾಷ್ಟ್ರ ಕವಿ ಮನೆ, ಸಮಾಧಿ ಈಗ ರೀಲ್ಸ್ ಸ್ಪಾಟ್..!
ತೀರ್ಥಹಳ್ಳಿ : ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಮನೆ ಹಾಗೂ ಸುತ್ತ ಮುತ್ತಲಿನ ಜಾಗ ಈಗ ಮೋಜು ಮಸ್ತಿಗೆ ಕಾರಣವಾಗಿರುವುದು ದುರಂತದ ವಿಷಯವಾಗಿದೆ.
ಕವಿಮನೆ, ಕುವೆಂಪು ಅವರ ಸಮಾಧಿ ಬಳಿಯೇ ಜ್ಞಾನವಿಲ್ಲದೆ ಪ್ರವಾಸಿಗರ ಹುಚ್ಚಾಟ ಮುಂದುವರೆದಿದೆ.
ತೀರ್ಥಹಳ್ಳಿಯಿಂದ ಇಪತ್ತು ಕಿಮೀ ದೂರದಲ್ಲಿರುವ
ಕುವೆಂಪು ಅವರ ಹುಟ್ಟು ಮನೆಯಾದ ಕುಪ್ಪಳ್ಳಿಯಲ್ಲಿರುವ ಅವರ ಮನೆಯನ್ನು ಹಾಗೂ ಸುತ್ತ ಮುತ್ತಲಿನ ಜಾಗವನ್ನು ನೋಡಲು ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಾರೆ.
ಅದರಲ್ಲೂ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಅಲ್ಲಿನ ವೈಶಿಷ್ಟ್ಯವನ್ನು ಹೇಳಿ ಕೊಡಲಾಗುತ್ತದೆ. ಆದರೆ ಈಗಿನ ಯುವ ಪೀಳಿಗೆಯ ಜನರು ಸಂಪೂರ್ಣ ಬದಲಾಗಿದ್ದು ಕುಪ್ಪಳ್ಳಿಯಲ್ಲಿ ಕವಿಮನೆ ಹಾಗೂ ಕುವೆಂಪು ಅವರ ಸಮಾಧಿ ಬಳಿ ಪ್ರವಾಸಿಗರು ರೀಲ್ಸ್ ಎಂಬ ಹುಚ್ಛಾಟವನ್ನು ಮಾಡುತ್ತಾ ಸಮಾಧಿ ಬಳಿಯೆ ಕುಣಿಯುವುದು ಕಂಡುಬಂದಿದೆ.
ಕುಪ್ಪಳ್ಳಿಯ ಕುವೆಂಪು ರವರ ಮನೆಗೆ ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಅದರಲ್ಲೂ ಭಾನುವಾರ ಕೇಳುವುದೇ ಬೇಡ. ಪ್ರತಿ ಭಾನುವಾರ ಸಾವಿರಾರು ಜನ ಭೇಟಿ ನೀಡುತ್ತಾರೆ. ಕವಿ ಮನೆಗೆ ಬಂದವರು ಕವಿಯ ಸಮಾಧಿಗೂ ಸಹ ಭೇಟಿ ನೀಡಿ ಅಲ್ಲಿನ ಪ್ರಕೃತಿಯ ಸೌಂದರ್ಯವನ್ನು ಸವಿಯುವುದು ವಾಡಿಕೆ. ಕವಿ ಮನೆಯಲ್ಲಿ ಒಂದಿಷ್ಟು ಕಾಲ ಕಳೆಯುವುದು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಕುವೆಂಪು ಅವರ ಸಮಾಧಿ ಬಳಿಯೇ ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿ ರೀಲ್ಸ್ ಮಾಡುತ್ತಿರುವುದು ಈಗಿನ ಯುವ ಪೀಳಿಗೆಯ ಮನಸ್ಥಿತಿಯನ್ನು ಬಿಂಬಿಸುವಂತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸೌಂದರ್ಯದ ಪ್ರದೇಶಗಳಲ್ಲಿ ಭೇಟಿ ನೀಡಿ ರೀಲ್ಸ್ ಮಾಡಿ ಹರಿಬಿಡುವುದು ಒಂದು ಟ್ರೆಂಡ್ ಆಗಿದ್ದರೂ ಸಹ ಕವಿ ಮನೆಯಲ್ಲಿ ಕವಿಯ ಸಮಾಧಿಯ ಬಳಿಯೇ ಕುಣಿದಾಡುವುದು ಸಿನಿಮಾ ಹಾಡಿಗೆ ನೃತ್ಯ ಮಾಡುವುದು ಎಷ್ಟು ಸಮಂಜಸ ಎಂಬುದೇ ಪ್ರೆಶ್ನೆಯಾಗಿದೆ.
ಇತ್ತೀಚಿಗೆ ಮಧ್ಯ ರಸ್ತೆಯಲ್ಲಿ ರೀಲ್ಸ್ ಮಾಡುವುದನ್ನು ಶಿವಮೊಗ್ಗ ಸುದ್ದಿ ವರದಿ ಮಾಡಿತ್ತು. ವರದಿಯಾದ ನಂತರ ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯನ್ನು ಕರೆಸಿ ವಾರ್ನಿಂಗ್ ಕೂಡ ಮಾಡಿದ್ದರು. ಆಗ ಆತನ ಪರ ಕೆಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಆತ ಒಳ್ಳೆಯವನು ಆತನ ಬಗ್ಗೆ ಸುದ್ದಿ ಮಾಡಿದ ಮಾಧ್ಯಮಗಳದ್ದೇ ತಪ್ಪು ಎಂಬಂತೆ ಹೇಳುತ್ತಿದ್ದರು. ಆದರೆ ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತಿನಿಂದ ವರ್ತಿಸದೆ ಇರುವವರ ವಿರುದ್ಧ ಹಾಗೂ ಅಂತವರಿಗೆ ಬೆಂಬಲ ನೀಡುವವರ ವಿರುದ್ಧ ಕೂಡ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Tags:
ಕುವೆಂಪು ಮನೆ