ಮುಸ್ಲಿಮರ ಓಲೈಕೆ ವಿರುದ್ಧ ಹೋರಾಟ- ಚನ್ನಬಸಪ್ಪ
ಶಿವಮೊಗ್ಗ : ಮುಸಲ್ಮಾನರ ತುಷ್ಠಿಕರಣ ಮಿತಿಮೀರಿ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಮುಂದಿನ ಅಧಿವೇಶನದಲ್ಲಿ ಬಿಜೆಪಿ ಹೋರಾಟದ ಸಂಕಲ್ಪ ಮಾಡಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಗುಡುಗಿದರು.
ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆ ಮುಂದುವರಿಸುತ್ತಿದೆ. ಈಗಾಗಲೇ ಸಾಕಷ್ಟು ಅನುದಾನಗಳನ್ನು, ಮೀಸಲಾತಿಯನ್ನು ನೀಡಿದ್ದರೂ ಕೂಡ ಈಗ ಮತ್ತೊಮ್ಮೆ ವಸತಿ ಯೋಜನೆಗಳಲ್ಲಿ
ಶೇ.15ರಷ್ಟು ಮೀಸಲಾತಿಯನ್ನು ಹೆಚ್ಚಿಸಿದೆ. ಇದೊಂದು
ಘೋರ ಅಪರಾಧವಾಗಿದೆ ಎಂದರು.
ಒಂದು ಕಡೆ ತುಷ್ಟಿಕರಣ ನೀತಿಯಾದರೆ ಮತ್ತೊಂದು ಕಡೆ ರಾಜ್ಯ ಸರ್ಕಾರದಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ವಸತಿ ಯೋಜನೆಗಳಲ್ಲಿ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಶಾಸಕರೇ ಆದ ಬಿ.ಆರ್. ಪಾಟೀಲ್ ಈಗಾಗಲೇ ತಮ್ಮ ನೋವುಗಳನ್ನು ಹಂಚಿಕೊಂಡಿದ್ದಾರೆ. ಇಲಾಖೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಸಾರ್ವಜನಿಕರ ಮುಂದೆಯೇ ಹೇಳಿದ್ದಾರೆ. ಇಲಾಖೆಯಲ್ಲಿ ಲಂಚ ಕೊಟ್ಟವರಿಗೆ ಮನೆ
ಮಂಜೂರಾಗುತ್ತಿದೆ ಎಂದು ಹೇಳಿದ್ದಾರೆ. ಇಷ್ಟಾದರೂ
ಕೂಡ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿಲ್ಲ. ಇಲಾಖೆಯ ಸಚಿವರಿಂದ ಸ್ಪಷ್ಟನೆಯೂ ಕೇಳಲ್ಲ. ತಿಪ್ಪೆ ಸಾರುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ಸಾಕುತ್ತಿದೆ ಎಂಬುದು ಈಗಾಗಲೇ ಗೊತ್ತಾಗಿದೆ. ಇಂತಹ ಭ್ರಷ್ಟಾಚಾರ ಕೂಡಲೇ ತನಿಖೆಯಾಗಬೇಕು. ವಸತಿ ಸಚಿವ ಜಮೀರ್ ಅಹ್ಮದ್ ತಮ್ಮ ಹುದ್ದೆಯಲ್ಲಿ ಮುಂದುವರಿದರೆ ತನಿಖೆ ಮಾಡಲು ಸಾಧ್ಯವಿಲ್ಲ.
ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು
ಎಂದು ಆಗ್ರಹಿಸಿದರು.
ಶಿಕ್ಷಣ ಸಚಿವ ಮಧುಬಂಗಾರಪ್ಪ ನಮ್ಮ ಮುಖಂಡರು, ಹಿರಿಯರೂ ಆದ ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರು ಎನ್ನುತ್ತಿದ್ದಾರೆ. ಮಧು ಬಂಗಾರಪ್ಪನವರಿಗೆ
ಗೊತ್ತಿರಲಿ. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಪ್ರಜಾಪ್ರಭುತ್ವದ ಉಳಿವಿಗಾಗಿ, ಬಡವರ ಉದ್ಧಾರಕ್ಕಾಗಿ, ಕಾರ್ಮಿಕರ ಪರವಾಗಿ, ರೈತರ ಪರವಾಗಿ, ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲಿಗೆ ಹೋಗಿದ್ದಾರೆ. ಇದು ಮಧು ಬಂಗಾರಪ್ಪನವರಿಗೆ ಗೊತ್ತಿರಲಿ. ತೇಜೋವಧೆಗೂ ಒಂದು ಮಿತಿ ಇರಬೇಕು.
ಬಿ.ಎಸ್. ಯಡಿಯೂರಪ್ಪನವರ ಹೋರಾಟವನ್ನೇ ಅವರು ಮಾದರಿಯನ್ನಾಗಿ ತೆಗೆದುಕೊಳ್ಳಲಿ ಎಂದು ತಿರುಗೇಟು
ನೀಡಿದರು..
Tags:
ಬಿಜೆಪಿ