ಸಿಂಧೂರದ ತಾಕತ್ತೇನೆಂಬುದನ್ನು ಭಾರತೀಯರು ತೋರಿಸಿದ್ದಾರೆ - ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಪೆಹಲ್ಗಾಂವ್‌ನಲ್ಲಿ ಧರ್ಮವನ್ನು ಕೇಳಿ ಭಯೋತ್ಪಾದಕರು ನಾರಿಯರ ಸಿಂಧೂರ ಅಳಿಸಿದ್ದರು. ಅದಕ್ಕೆ ಪ್ರತಿಯಾಗಿ ಸಿಂಧೂರದ ತಾಕತ್ತೇನೆಂಬುದನ್ನು ಭಾರತೀಯರು ತೋರಿಸಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು
ಮಂಗಳವಾರ ತೀರ್ಥಹಳ್ಳಿಯಲ್ಲಿ ನಾಗರಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಿಂಧೂರ ತಿರಂಗ ಯಾತ್ರೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು
ಭಾರತದ ಸೇನೆಯ ಸಾಮರ್ಥ್ಯವು ಜಗತ್ತಿನ ಯಾವುದೇ ಶತ್ರು ರಾಷ್ಟ್ರಗಳು ಭಾರತದ ವಿರುದ್ಧ ಬಂದರೂ ಸಮರ್ಥವಾಗಿ ಎದುರಿಸಬಲ್ಲದ್ದಾಗಿದೆ. ಆದರೆ ದೇಶದ ಒಳಗಡೆ ನಮ್ಮೊಡನೆಯೇ ಇರುವ ಪಾಕೀಸ್ಥಾನದ ಧ್ವನಿಯಲ್ಲಿ ಮಾತನಾಡುವ ಹಿತ ಶತ್ರುಗಳ ವಿರುದ್ಧ ಪ್ರತಿಯೊಬ್ಬ ನಾಗರೀಕನೂ ಕಣ್ಣಿಟ್ಟು ಯೋಧನಂತೆ ಗೌಪ್ಯ ಮಾಹಿತಿಗಳು ಶತ್ರು ರಾಷ್ಟ್ರಕ್ಕೆ ಸಿಗದಂತೆ ರಕ್ಷಣೆಗೆ ನಿಲ್ಲಬೇಕಾಗಿದೆ ಎಂದರು.
ಗೋವಾದ ಮನೋಹರ ಪಾರಿಕ್ಕರ್‌ರವರು ಕೇಂದ್ರ ರಕ್ಷಣಾ ಸಚಿವರಾಗಿದ್ದ ಸಮಯದಲ್ಲಿ ಸೇನೆಯಲ್ಲಿನ ಕೊರತೆಗಳ ಪಟ್ಟಿಮಾಡಿ ಅತ್ಯಾಧುನಿಕ ಯುದ್ಧ ಸಾಮಾಗ್ರಿಗಳನ್ನು ಸೇನೆಗೆ ನೀಡಿದ್ದರು. ಮಂತ್ರಿ ಎನಿಸಿಕೊಳ್ಳಲು ಮಾತ್ರವಲ್ಲದೇ ಮಂತ್ರಿ ಸ್ಥಾನಕ್ಕೆ ಗೌರವ ತರುವಂತಹ ಕೆಲಸ ಮಾಡಿದ್ದರು. ಆ
ಶಸ್ತ್ರಾಸ್ತ್ರಗಳು ಇಂದಿನ ವಿಜಯದ ಬಹು ಪಾಲನ್ನು ಹೊಂದಿದೆ. ದುಷ್ಟರನ್ನು ತುಳಿದು ದೇಶವನ್ನು ಮೇಲೆತ್ತುತ್ತೇವೆ ಎಂಬ ಸಂದೇಶವನ್ನು ಈ ವಿಜಯದ ಮೂಲಕ ವಿಶ್ವಕ್ಕೇ ಭಾರತ ಸಾರಿದೆ ಎಂದರು.
ಈ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ ಭಾರತವು ತನ್ನ ಶಸ್ತ್ರಾಸ್ತ್ರಗಳನ್ನು ಪಾಕೀಸ್ಥಾನದ ನೆಲದ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದೆ. ಚೀನಾದ ಅಸ್ತ್ರಗಳ ಗುಣಮಟ್ಟವೂ ಗೊತ್ತಾಗಿದೆ. ಈ ಮೂಲಕ ತಂತ್ರಜ್ಞಾನಾಧಾರಿತ ಯುದ್ಧದಲ್ಲಿ ಜಗತ್ತು ಬೆರಗುಗಣ್ಣಿನಿಂದ ಭಾರತವನ್ನು ನೋಡುವಂತಾಗಿದೆ. ಮುಂದಿನ ದಿನಗಳಲ್ಲಿ ಭಾರತವು ಯುದ್ಧಾಸ್ತ್ರಗಳನ್ನು ಮಾರಾಟ ಮಾಡುವ ಬಹುದೊಡ್ಡ ರಾಷ್ಟ್ರವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಯುದ್ಧ ಗೆದ್ದಿದ್ದಕ್ಕಾಗಿ ವಿಜಯ ಸಿಂಧೂರ ತಿರಂಗಾ ಯಾತ್ರೆ ಮಾಡಿದ್ದೇವೆ. ಆದರೆ ಆಪರೇಷನ್ ಸಿಂಧೂರ ಇನ್ನೂ ಮುಕ್ತಾಯವಾಗಿಲ್ಲ, ಪೆಹಲ್ಗಾಂವ್ ಘಟನೆಯನ್ನು ಸರ್ಕಾರವು ಮಾಡಿಸಿದೆ ಎಂಬ ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಹೇಳಿಕೆ ಪಾಕೀಸ್ಥಾನಕ್ಕೆ ವಿದೇಶದಲ್ಲಿ ನಾನೇನೂ ಮಾಡಲಿಲ್ಲ ಎಂಬುದನ್ನು ಹೇಳಿಕೊಳ್ಳಲು ಪುಷ್ಟಿ ನೀಡಿದಂತಾಗಿತ್ತು. ಹಲವು ವಿದೇಶೀ ಮಾಧ್ಯಮಗಳು ಇದನ್ನು ಬಿತ್ತರಿಸಿದ್ದವು. ರಾಷ್ಟ್ರದ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದಿರಬೇಕು ಎಂದರು.
ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಪ್ರಯೋಗಿಸಿದಾಗಲೂ ತಮ್ಮ ರಾಷ್ಟ್ರದಲ್ಲೇ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಅಮೇರಿಕಾಕ್ಕೂ ಇದರಿಂದ ಹೊಡೆತ ನೀಡಿದಂತಾಗಿದೆ. ಯುದ್ಧ ಕಾಲದಲ್ಲಿ ಎಲ್ಲದರ ಬೆಲೆಗಳು ಏರುವ ಸಹಜ ಪ್ರಕ್ರಿಯೆಯನ್ನು ನಾವು ಕಂಡಿದ್ದೇವೆ. ಆದರೆ ಭಾರತದಲ್ಲಿ ಹಣದುಬ್ಬರ ಪ್ರಮಾಣವು ಯುದ್ಧ ಕಾಲದಲ್ಲೂ ಸಮಪ್ರಮಾಣದಲ್ಲಿತ್ತು. ಈ ಮೂಲಕ ನವ ಭಾರತ ಮತ್ತೊಂದು ದಿಕ್ಕಿನತ್ತ ಪಯಣಿಸುವುದನ್ನು ನಾವು ಕಾಣುತ್ತಿದ್ದೇವೆ ಎಂದರು.