ಸ್ವಂತ ಜಾಗ ಬಾಡಿಗೆ ಕೊಟ್ಟಿದ್ದಕ್ಕೆ ಗ್ರಾಮಸ್ಥರಿಂದಲೇ ಆ ಕುಟುಂಬಕ್ಕೆ ಬಹಿಷ್ಕಾರ!
ಭದ್ರಾವತಿ : ಮಧ್ಯದ ಅಂಗಡಿಗೆ ಬಾಡಿಗೆ ಕೊಟ್ಟಿರುವ ಕಾರಣಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ಘಟನೆವೊಂದು ಭದ್ರಾವತಿ ತಾಲೂಕಿನ ತಟ್ಟೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು ಭದ್ರಾವತಿ ತಾಲೂಕಿನ ತಟ್ಟೆಹಳ್ಳಿ ಗ್ರಾಮದ ಮಂಜೋಜಿರಾವ್ ಎಂಬುವರಿಗೆ ಸೇರಿದ ಜಾಗವನ್ನ ಖಾಸಗಿ ವ್ಯಕ್ತಿಯೊಬ್ಬರು 27 ವರ್ಷಕ್ಕೆ ಜಾಗ ಲೀಜ್ ಪಡೆದು ಮದ್ಯದ ಅಂಗಡಿ ತೆರೆದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಊರಿನ ಮುಖಂಡರು ಮಂಜೋಜಿರಾವ್ ಕುಟುಂಬಕ್ಕೆ ಊರಿಂದ ಬಹಿಷ್ಕಾರ ಹಾಕಿದ್ದಲ್ಲದೇ ಅವರ ಕುಟುಂಬದವರ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ 5 ಸಾವಿರ ದಂಡ ವಿಧಿಸಿದ್ದಾರೆ.
ಅವರ ಸಮೂದಾಯ ಸೇರಿದಂತೆ ಒಟ್ಟು ಐದಾರು ಸಮುದಾಯದ ಮುಖಂಡರು ಬಹಿಷ್ಕಾರ ಹಾಕಿದ್ದು ಮಂಜೋಜಿರಾವ್ ಕುಟುಂಬ ತಮ್ಮ ಸಮೂದಾಯವರ ಮನೆಗಳಿಗೆ ಹೋಗುವ ಹಾಗಿಲ್ಲ, ಶುಭ ಸಮಾರಂಭಕ್ಕೆ ಬರುವ ಹಾಗಿಲ್ಲ, ಹಾಗೆ ದೇವಸ್ಥಾನಕ್ಕೂ ಹೋಗುವಂತಿಲ್ಲ, ಒಂದು ವೇಳೆ ಪೂಜೆಗೆ ಹೋದ್ರೆ ಅರ್ಚಕರು ಪೂಜೆ ಮಾಡಿಕೊಡುವ ಹಾಗಿಲ್ಲ.
ಇನ್ನು ಇವರನ್ನ ಮಾತನಾಡಿಸಿದಕ್ಕೆ ವ್ಯಕ್ತಿಯೊಬ್ಬರಿಗೆ ಐದು ಸಾವಿರ ದಂಡ ಹಾಕಿದ್ದಾರೆ. ಇದೆಲ್ಲಾ ನಡೆಸಬಾರದು ಕೂಡಲೇ ಇದರ ಕ್ರಮ ಆಗಬೇಕು ಅಂತಾ ಸ್ಥಳೀಯರು ಆಗ್ರಹಿಸಿದ್ದಾರೆ. ಸ್ವಂತ ಜಾಗ ಬಾಡಿಗೆ ಕೊಟ್ಟಿದ್ದಕ್ಕೆ ಗ್ರಾಮಸ್ಥರು ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ.
