ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕುಂದಾದ್ರಿ ಪರಿಸರ ಸ್ವಚ್ಛತೆ
ತೀರ್ಥಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತೀರ್ಥಹಳ್ಳಿ ತಾಲೂಕು ಆಗುಂಬೆ ವಲಯದ ವತಿಯಿಂದ ಕುಂದಾ ಕುಂದಾ 1008 ತೀರ್ಥಂಕರ ತಪೋಭೂಮಿ ಕುಂದಾದ್ರಿ ಬೆಟ್ಟದ ದೇವಸ್ಥಾನ ಮತ್ತು ಸುತ್ತಮುತ್ತ ಪರಿಸರದ ಬೆಟ್ಟಕ್ಕೆ ಹೋಗುವ ರಸ್ತೆಯ ಎರಡೂ ಕಡೆಗಳಲ್ಲಿ ಗಿಡ ಗಂಟೆಗಳನ್ನು ತೆಗೆದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದರು.
ಹೊಂಬುಜ ಜೈನ ಮಠದ ಸುಪರ್ದಿಯಲ್ಲಿರುವ ಈ ಪುರಾತನ ಪುಣ್ಯ ಕ್ಷೇತ್ರ ಕುಂದಾದ್ರಿ ಬೆಟ್ಟದಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯಂದು ವಾರ್ಷಿಕ ಜಾತ್ರೆ ನಡೆಯುತ್ತಿದ್ದು ಕಳೆದ ಹದಿನಾಲ್ಕು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದ್ದು ಈ ಬಾರಿಯೂ ಸ್ವಚ್ಛತಾ ಅಭಿಯಾನವನ್ನು ಆಯೋಜನೆ ಮಾಡಿದ್ದರು.
ಹೊಂಬುಜ ಜೈನ ಮಠದ ಟ್ರಸ್ಟಿಗಳಾದ ಪಟ್ಟಣದ ಪೂಜ್ಯಪಾದ ಚಿಕಿತ್ಸಾಲಯದ ವೈದ್ಯರಾದ ಡಾ. ಜೀವಂಧರ್ ಜೈನ್‌ರವರ ಸರ್ವ ಸಹಕಾರದೊಂದಿಗೆ ಯೋಜನಾಧಿಕಾರಿ ಮಾಲತಿ ದಿನೇಶ್‌ರವರ ಮಾರ್ಗದರ್ಶನದಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ, ಆಗುಂಬೆ ವಲಯದ ಮೇಲ್ವಿಚಾರಕರಾದ ಅಶೋಕ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಪಾಂಡುರಂಗ, ಹೊಂಬುಜ ಶ್ರೀ ಮಠದ ಮ್ಯಾನೇಜರ್ ಅಶೋಕ್ ಕುಮಾರ್, ಹೊನ್ನೆತಾಳು ನಿತ್ಯಾನಂದ, ಅರ್ಚಕ ಶಾಂತಿನಾಥ್ ಜೈನ್, ಹೊಂಬುಜ ಗುರುಕುಲದ ವಿದ್ಯಾರ್ಥಿಗಳು, ಜ್ಞಾನ ವಿಕಾಸ ಸಂಸ್ಥೆಯ ಮಹಿಳೆಯರು, ಆಗುಂಬೆ ವಲಯ ಶೌರ್ಯ ವಿಪತ್ತು ತಂಡದ ಸದಸ್ಯರು, ಸೇವಾ ಪ್ರತಿನಿಧಿಗಳು, ಹಾಗೂ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನ ಸ್ವಯಂ ಸೇವಕರು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು.
ಅರ್ಪಣಾ ಮನೋಭಾವದಿಂದ ಈ ಧಾರ್ಮಿಕ ಕ್ಷೇತ್ರ ಹಾಗೂ ಪರಿಸರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಅಭಿನಂದನೆಗಳನ್ನು ಈ ಸಂದರ್ಭದಲ್ಲಿ ಡಾ. ಜೀವಂಧರ್ ಜೈನ್‌ರವರು ತಿಳಿಸಿದರು. ಜನಸೇವೆ ಜನಾರ್ಧನ ಸೇವೆ ಎಂಬಂತೆ ಧಾರ್ಮಿಕ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ತಮ್ಮ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದೀರಿ ನಿಮಗೆ ಹೊಂಬುಜ ಜೈನ ಮಠದ ಪರವಾಗಿ ಅಭಿನಂದಿಸುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
