ಕಾಮಧೇನು ರಾಮಚಂದ್ರ ಪ್ರಭು ನಿಧನ

 ಕಾಮಧೇನು ರಾಮಚಂದ್ರ ಪ್ರಭು ನಿಧನ 



ತೀರ್ಥಹಳ್ಳಿ :ಪಟ್ಟಣದ ಯು ಆರ್ ಅನಂತ ಮೂರ್ತಿ ಹೈಸ್ಕೂಲ್ ರಸ್ತೆ ನಿವಾಸಿ ರಾಮಚಂದ್ರ ಪ್ರಭು (69) ತೀವ್ರ ಅನಾರೋಗ್ಯದಿಂದ ಇಂದು ಗುರುವಾರ ಮಧ್ಯಾಹ್ನ ಪಟ್ಟಣದ ಜಯಚಾಮರಾಜೇಂದ್ರ ಆಸ್ಪತ್ರಯಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.


ಮೃತರು ಈ ಹಿಂದೆ ಹೋಟೆಲ್ ಉದ್ಯಮದಲ್ಲಿ ಚಿರಪರಿಚಿತರಗಿದ್ದು ಕಾಮಧೇನು ರಾಮಚಂದ್ರ ಎಂದೇ ಹೆಸರುವಾಸಿಯಾಗಿದ್ದರು. ಇವರು ಪ್ರಥಮವಾಗಿ ರಥಬೀದಿಯಲ್ಲಿ ಶ್ರೀ ರಾಘವೇಂದ್ರ ಕ್ಯಾಂಟೀನ್ ಎಂಬ ಹೋಟೆಲ್ ಉದ್ಯಮವನ್ನು ಯಾವುದೇ ಅನುಭವಿಲ್ಲದೆ ಪ್ರಾರಂಭಿಸಿ ತದನಂತರ ಹೋಟೆಲ್ ಉದ್ಯಮದಲ್ಲೇ ಹೆಸರು ಗಳಿಸಬೇಕೆಂಬ ಉದ್ದೇಶದಿಂದ ತಮ್ಮ ಸತತವಾದ ಪ್ರಯತ್ನದ ನಂತರ ಕುಶಾವತಿಯಲ್ಲಿ ಹೋಟೆಲ್ ವಿದ್ಯಾ ಎಂಬ ಹೋಟೆಲ್ ತೆರೆದು ತದನಂತರ ಕೊಪ್ಪ ಸರ್ಕಲ್ ನಲ್ಲಿ ಈಗಿನ ಕಲ್ಪವೃಕ್ಷ ಹೋಟೆಲ್ ಇರುವ ಜಾಗದಲ್ಲಿ ಹೋಟೆಲ್ ಕಾಮಧೇನು ಎಂಬ ನಾಮಾಂಕಿತದೊಂದಿಗೆ ತಮ್ಮ ಹೋಟೆಲ್ ಉದ್ಯಮವನ್ನು ಉತ್ತುಂಗಕ್ಕೆ ಕೊಂಡೊಯ್ದರು.


ತದನಂತರ ವಿನಾಯಕ ಟಾಕೀಸ್ ರಸ್ತೆಯಲ್ಲಿ ಬೇಕರಿ ಉದ್ಯಮವನ್ನು ಪ್ರಾರಂಭ ಮಾಡಿ ಜೊತೆ ಜೊತೆಗೆ ಹೋಟೆಲ್ ಕಾಮಧೇನು ಎಂಬ ಹೆಸರಿನಲ್ಲಿ ಅನೇಕ ವರ್ಷಗಳ ಕಾಲ ಹೋಟೆಲ್ ಉದ್ಯಮ ನಡೆಸಿದ್ದರು. ಇದರ ಜೊತೆಗೆ ಸಂಜೆ ಬಿಡುವಿನ ಸಮಯದಲ್ಲಿ ಕಸಬಾ ಸೊಸೈಟಿಯಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದರು.


ಅನೇಕ ಸಂಘ ಸಂಸ್ಥೆಗಳಲ್ಲಿ ಕೂಡ ಕೆಲಸ ನಿರ್ವಹಿಸಿದ್ದರು. ಆರ್.ಎಸ್.ಬಿ ಸಮಾಜದ ಸ್ಥಾಪಕ ಸದಸ್ಯರಾಗಿಯೂ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು. ಮೃತರು ಪತ್ನಿ ಓರ್ವ ಗಂಡು ಓರ್ವ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 


ಮೃತರ ಪಾರ್ಥಿವ  ಶರೀರವನ್ನು ಹೈಸ್ಕೂಲ್ ರಸ್ತೆಯ ಗೃಹದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಇಂದು ಸಂಜೆ 7 ಗಂಟೆಯ ಸಮಯದಲ್ಲಿ ಮೃತರ ಅಂತ್ಯ ಸಂಸ್ಕಾರ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

Previous Post Next Post