ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಆಕಾಂಕ್ಷಿಗಳಿಂದ ಆಣೆ ಪ್ರಮಾಣ
ತೀರ್ಥಹಳ್ಳಿ : ತಾಲೂಕಿನಲ್ಲಿ ಸೊಸೈಟಿ ಚುನಾವಣೆಯ ಅಬ್ಬರ ದಿನೇ ದಿನೇ ಹೆಚ್ಚುತ್ತಿದೆ. ರಾಜಕೀಯ ಕ್ಷೇತ್ರಕ್ಕೂ ಮಿಗಿಲಾಗಿ ಸಹಕಾರಿ ಕ್ಷೇತ್ರದ ಚುನಾವಣೆಗಳು ಚುನಾವಣೆಯ ರಂಗನ್ನು ಹೆಚ್ಚಿಸುತ್ತಿದ್ದು ಹಣ ಹೆಂಡದ ಆಮಿಷವೊಡ್ಡಿ ಮತಗಿಟ್ಟಿಸುವ ಪ್ರಯತ್ನಕ್ಕೇನೂ ಕಡಿಮೆಯಿಲ್ಲ.
ಅದೇ ರೀತಿ ವಿಶೇಷ ಮತ್ತು ಅಚ್ಚರಿ ಎಂಬಂತೆ ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೆಂದಾಳಬೈಲಿನ ನಿರ್ದೇಶಕ ಆಕಾಂಕ್ಷಿಗಳು ನಾವು ಸಮಾಜ ಸೇವಕರು, ಹಣ ಹೆಂಡ ಹಂಚಿ ಮತ ಕೇಳುವುದಿಲ್ಲ ಎಂದು ವನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ.
ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 12 ನಿರ್ದೇಶಕ ಸ್ಥಾನವನ್ನು ಹೊಂದಿದ್ದು ಅದರಲ್ಲಿ ಈಗಾಗಲೇ 3 ಜನ ಅವಿರೋಧ ಆಯ್ಕೆಯಾಗಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನ ಬೆಂಬಲಿತ 17 ಮಂದಿ ನಿರ್ದೇಶಕ ಸ್ಥಾನದ ಆಯ್ಕೆಗೆ ಟೊಂಕ ಕಟ್ಟಿ ನಿಂತು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಒಳ್ಳೆಯ ಆಡಳಿತವನ್ನು ಮೈಗೂಡಿಸಿಕೊಂಡಿರುವ ಈ ಸೊಸೈಟಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುತ್ತದೆ. ಶಚ್ಚಿ0ದ್ರ ಹೆಗಡೆ ನೇತೃತ್ವದಲ್ಲಿ ವನ ದುರ್ಗಾ ಪರಮೇಶ್ವರಿ ದೇವಸ್ಥಾನ ದಲ್ಲಿ ನಿರ್ದೇಶಕ ಆಕಾಂಕ್ಷಿಗಳು ಒಮ್ಮತದಿಂದ ಮನಃಪೂರ್ವಕವಾಗಿ ಆಣೆ ಮಾಡಿದ್ದು ನಾಳೆಯ ಚುನಾವಣೆ ಹೇಗಿರಲಿದೆ ಎಂಬುದು ಮತ್ತಷ್ಟು ಕುತೂಹಲ ಮೂಡಿಸಿದೆ. ಸುರೇಶ್ ಅನಗವಾಡಿ ಅವರ ನೇತೃತ್ವದಲ್ಲಿ ನಾಳೆಯ ಮತದಾನಕ್ಕೆ ಸಕಲ ಸಿದ್ಧತೆ ನಡೆದಿದೆ.
