ಅಪರಾಧ ತಡೆಯುವ ಬಗ್ಗೆ ಮಕ್ಕಳಿಗೆ ಪಾಠ ಮಾಡಿದ ಡಿವೈಎಸ್'ಪಿ ಗಜಾನನ ವಾಮನ ಸುತಾರ
ತೀರ್ಥಹಳ್ಳಿ : ಗಂಡು ಹೆಣ್ಣು ಎಂಬ ಭೇದ ಭಾವ ಮಾಡುವ ಕಾಲವಿತ್ತು. ಆದರೆ ಈಗ ಹಲವಾರು ರೀತಿ ಬದಲಾವಣೆ ಆಗಿದೆ. ಸತಿ ಸಾವಿತ್ರಿ ಕಥೆ ಕೇಳಿದ್ದೀರಾ? ಗಂಡ ಸತ್ತರೆ ಹೆಂಡತಿ ಕೂಡ ಸಾವಿಗೆ ಶರಣಾಗುವ ಕಾಲವಿತ್ತು ಆದರೆ ಈಗ ಎಲ್ಲವೂ ಬದಲಾಗಿದೆ. ಅದಕ್ಕೆ ಮುಖ್ಯ ಕಾರಣ ಶಿಕ್ಷಣ ಎಂದು ಡಿವೈಎಸ್'ಪಿ ಗಜಾನನ ವಾಮನ ಸುತಾರ ತಿಳಿಸಿದರು.
ಮಂಗಳವಾರ ಪಟ್ಟಣದ ಪ್ರತಿಷ್ಠಿತ ವಾಗ್ದೇವಿ ಶಿಕ್ಷಣ ಸಂಸ್ಥೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ, ಡ್ರಗ್ಸ್, ಸೋಶಿಯಲ್ ಮೀಡಿಯಾದಿಂದ ಆಗುವ ದುಶ್ಪರಿಣಾಮ ಹೀಗೆ ಹಲವು ಅಪರಾಧ ತಡೆಯುವಿಕೆ ಬಗ್ಗೆ ಮಕ್ಕಳಿಗೆ ಪಾಠ ಮಾಡಿದರು.
18 ವರ್ಷದ ಒಳಗೆ ವಾಹನ ಓಡಿಸಬಾರದು ಎನ್ನುತ್ತಾರೆ ಅದಕ್ಕೆ ಕಾರಣ, ಮಾನಸಿಕವಾಗಿ ನಮ್ಮಲ್ಲಿ ಸದೃಢತೆ ಕಡಿಮೆ ಇರುತ್ತದೆ. ವಾಹನ ಚಾಲನೆ ಮಾಡುವಾಗ ವೇಗವಾಗಿ ಓಡಿಸುವುದು, ವೀಲಿಂಗ್ ಮಾಡುವುದು, ಇನ್ನೊಬ್ಬರಿಗೆ ತೊಂದರೆ ಕೊಡುವುದು ಹೀಗೆ ಮನಸ್ಥಿತಿ ಬದಲಾವಣೆ ಆಗುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ಕಾನೂನು ಪರಿಪಾಲನೆ ಮಾಡುವ ಕರ್ತವ್ಯ ನಮ್ಮೆಲ್ಲರದ್ದೂ ಆಗಿರುತ್ತದೆ. ಅದನ್ನು ಮೀರಿ ವಾಹನ ಓಡಿಸಿದರೆ 25 ಸಾವಿರಕ್ಕೂ ಹೆಚ್ಚು ಮೊತ್ತದ ದಂಡ ಕಟ್ಟಬೇಕಾಗುತ್ತದೆ. ಅಪಘಾತವಾದರೆ ಜೀವಕ್ಕೂ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ನಮ್ಮೆಲ್ಲರ ಆರೋಗ್ಯ ನಮ್ಮ ಜವಾಬ್ದಾರಿ ಆಗಿರುವುದರಿಂದ ಲೈಸೆನ್ಸ್ ಮಾಡಿಸಿಕೊಳ್ಳುವವರೆಗೂ ವಾಹನ ಚಾಲನೆ ಮಾಡುವುದಿಲ್ಲ ಎಂದು ಮಕ್ಕಳ ಬಳಿ ಶಪಥ ಮಾಡಿಸಿದರು.
ಮದ್ಯ, ತಂಬಾಕು,ಡ್ರಗ್ಸ್, ಗಾಂಜಾ ,ಅಫೀಮು ಮತ್ತಿತರವು ಮಾದಕ ವಸ್ತುಗಳಾಗಿವೆ. ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ. ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇತ್ತೀಚೆಗೆ 17-18 ವರ್ಷ ವಯೋಮಾನದವರು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಇವರು ಸಾಮಾನ್ಯ ವ್ಯಕ್ತಿಗಿಂತ 3 ಪಟ್ಟು ಹೆಚ್ಚು ಕಾಯಿಲೆಗಳಿಗೆ ಒಳಗಾಗುತ್ತಾರೆ. ಇದರಿಂದ ಸಾವು ಬೇಗ ಸಂಭವಿಸುತ್ತದೆ ಎಂದರು.
ಇನ್ನು ಮೊಬೈಲ್ ಬಳಕೆಯ ಸಾಧಕ ಬಾಧಕಗಳ ಬಗ್ಗೆ ಅದರಲ್ಲೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ , ಇನ್ಸ್ಟಾಗ್ರಾಮ್, ಹೀಗೆ ಸೋಶಿಯಲ್ ಮೀಡಿಯಾದ ಆ್ಯಪ ಬಳಕೆಯ ಅಪಾಯಗಳ ಎಚ್ಚರಿಕೆಯಿಂದ ಇರಬೇಕು. ನೀವುಗಳು ಜಾಸ್ತಿ ಸಮಯ ಮೊಬೈಲ್ ನೋಡುವುದು ತಪ್ಪು. ಅದರಲ್ಲೂ ಸಾಮಾಜಿಕ ಜಾಲತಾಣಗಳ ಬಗ್ಗೆ ದೂರವಿರಬೇಕು ಎಂದು ತಿಳಿ ಹೇಳಿದರು.
ಮಕ್ಕಳಿಗೆ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ತಿಳಿಸಿದ ಅವರು ಮದ್ಯಪಾನ, ಧೂಮಪಾನದಂತಹ ದುಶ್ಚ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇನ್ನುಳಿದಂತೆ ಮಕ್ಕಳ ಸುರಕ್ಷತೆಯ ಬಗ್ಗೆ, ಹಾಗೂ ಪೋಕ್ಸೋ ಕಾಯ್ದೆಯ ಮತ್ತು ಕಾನೂನಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಹಂಚಿಕೊಂಡು, ಮಕ್ಕಳು ಕಲಿಕೆಯಲ್ಲಿ ಹೇಗೆ ತೊಡಗಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.
