ಪಟ್ಟಣ ಪಂಚಾಯಿತಿ ಸುವರ್ಣ ಕರ್ನಾಟಕ ಕ್ರಿಕೆಟ್ ಟೂರ್ನಿ
ಮೆಸ್ಕಾಂ ವಿನ್ನರ್ - ಕಂದಾಯ ಇಲಾಖೆ ರನ್ನರ್
ತೀರ್ಥಹಳ್ಳಿ : ಪಟ್ಟಣ ಪಂಚಾಯ್ತಿ ಆಡಳಿತ, ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ ಅವರ ಸಾರಥ್ಯದಲ್ಲಿ ಡಿಸೆಂಬರ್ 14 ಮತ್ತು 15ರಂದು ಹೈಸ್ಕೂಲ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಆಯೋಜಿಸಿದ್ದ ಸುವರ್ಣ ಕರ್ನಾಟಕ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಕ್ರೀಡಾಕೂಟದಲ್ಲಿ ವಕೀಲರ ತಂಡ, ಪತ್ರಕರ್ತರ ತಂಡ, ನ್ಯಾಯಾಂಗ ಇಲಾಖೆ ತಂಡ, ಗುತ್ತಿಗೆದಾರರ ತಂಡ, ಶಿಕ್ಷಣ ಇಲಾಖೆ ತಂಡ, ಪಂಚಾಯತ್ ರಾಜ್ ಇಲಾಖೆ ತಂಡ, ಆರೋಗ್ಯ ಇಲಾಖೆ ತಂಡ, ಪೋಲಿಸ್ ತಂಡ, ಕಂದಾಯ ಇಲಾಖೆ ತಂಡ,ಅರಣ್ಯ ಇಲಾಖೆ ತಂಡ, ಪ.ಪಂ.ತಂಡ, ಬ್ಯಾಂಕರ್ ತಂಡ, ಮೆಸ್ಕಾಂ ತಂಡ, ಎಲ್‌ಐಸಿ ತಂಡ, ಸಹ್ಯಾದ್ರಿ ಪಾಲಿಟೆಕ್ನಿಕ್ ತಂಡ, ಜಿ.ಪಂ. ತಂಡ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು.
ಅತ್ಯುತ್ತಮ ಪ್ರದರ್ಶನ ನೀಡಿದ ಮೆಸ್ಕಾಂ ತಂಡ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು. ಕಂದಾಯ ಇಲಾಖೆ ತಂಡ ರನ್ನರ್ ಆಗಿ ಹೊರ ಹೊಮ್ಮಿತು.ಸತತ 8ನೇ ವರ್ಷಗಳಿಂದ 'ಸೌಹಾರ್ದ ಕ್ರಿಕೆಟ್' ಕ್ರೀಡಾಕೂಟವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿರುವ ರೆಹಮತ್ ಉಲ್ಲಾ ಅಸಾದಿ ನಡೆಸಿಕೊಂಡು ಬರುತ್ತಿದ್ದಾರೆ. ಅಸಾದಿ ಕೂಡ ಓರ್ವ ಉತ್ತಮ ಕ್ರಿಕೆಟ್ ಆಟಗಾರರು. ಕಳೆದ 8
ವರ್ಷಗಳಿಂದ ಅಸಾದಿ ತೀರ್ಥಹಳ್ಳಿಯಲ್ಲಿ ಸರ್ಕಾರಿ ನೌಕರರು, ಪತ್ರಕರ್ತರು, ವಕೀಲರು, ವೈದ್ಯರು, ಗುತ್ತಿಗೆದಾರರು ಸೇರಿದಂತೆ ವಿವಿಧ ವಲಯಗಳಲ್ಲಿ ದುಡಿಯುತ್ತಿರುವವರನ್ನು ಒಂದೆಡೆ ಸೇರಿಸಿ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಪೂರಕವಾಗುವ ರೀತಿಯಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
