ಸ್ವಾಮೀಜಿಗಳು ಯಾವ ಲೋಪವಿಲ್ಲದೆ, ನಿರ್ದೋಷಿಯಾಗಿ ಹೊರಗೆ ಬರ್ತೀರಾ ಎಂದಿದ್ದಾರೆ: ಈಶ್ವರಪ್ಪ
ಶಿವಮೊಗ್ಗ: ಪ್ರತಿ ಹುಣ್ಣಿಮೆಯ ದಿನ ಮನೆಯಲ್ಲಿ ವಿಶೇಷ ಪೂಜೆ ಇರುತ್ತೆ. ಇವತ್ತು ಸಹ ಹುಣ್ಣಿಮೆ ಪೂಜೆ ಜೊತೆಗೆ ಸತ್ಯನಾರಾಯಣ ಪೂಜೆ ಮಾಡುತ್ತಿದ್ದೆವು. ಇದೇ ವೇಳೆ 10ಕ್ಕೂ ಹೆಚ್ಚು ಶ್ರೀಗಳು ನಮ್ಮ ಮನೆಗೆ ಭೇಟಿ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ವಿವಿಧ ಮಠಾಧೀಶರ ಭೇಟಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ಬರುವ ಕಲ್ಪನೆ ಸಹ ನನಗೆ ಇರಲಿಲ್ಲ. ಪೂಜೆಯ ಸಮಯಕ್ಕೆ ದೇವರ ರೀತಿ ಬಂದು ಅವರೆಲ್ಲರೂ ಆಶೀರ್ವಾದ ಮಾಡಿದ್ದಾರೆ. ಯಾವ ಲೋಪವೂ ಇಲ್ಲದೇ, ನಿರ್ದೋಷಿಯಾಗಿ ಹೊರಗೆ ಬರ್ತೀರಾ ಎಂದು ಅಭಯ ನೀಡಿದ್ದಾರೆ. ನಾನೇನು ಕುಗ್ಗಿರಲಿಲ್ಲ. ನನಗೆ ಆನೆಬಲದಷ್ಟು ಧೈರ್ಯ ಬಂದಿದೆ. ಎಲ್ಲಾ ಶ್ರೀಗಳು ಆಶೀರ್ವಾದ ಮಾಡಿದ್ದು, ನನ್ನ ಪೂರ್ವ ಜನ್ಮದ ಪುಣ್ಯ.
ಮಂತ್ರಾಲಯದ ಶ್ರೀಗಳು ಕರೆ ಮಾಡಿದ್ದರು. ರಾಯರ ಭಕ್ತರು ನೀವು, ನಿಮಗೆ ಒಳ್ಳೆಯದಾಗುತ್ತೆ ಎಂದು ಹರಸಿದ್ದಾರೆ. ಪರಿವಾರದ ಹಿರಿಯರು, ಪಕ್ಷ ಹಾಗೂ ಸರ್ಕಾರಕ್ಕೆ ಇರಿಸು-ಮುರಿಸು ಆಗಬಾರದು. ಹಾಗಾಗಿ ನಿನ್ನೆ ಹೋಗಿ ರಾಜೀನಾಮೆ ಕೊಟ್ಟಿದ್ದೇನೆ. ರಾಜ್ಯ ನಾಯಕರ ಜೊತೆ ಮಾತನಾಡಿಯೇ ನಿರ್ಧಾರ ಮಾಡಿದ್ದೇನೆ. ಕಾರ್ಯಕರ್ತರು ಅಭಿಮಾನವಿಟ್ಟು ಬೆಂಗಳೂರಿಗೆ ಬಂದಿದ್ದರು. ಅವರಿಗೆ ನಾನು ಅಭಾರಿ ಎಂದರು.