ತುಂಗಾ ಕಾಲೇಜಿನಲ್ಲಿ ತಾಲೂಕು ಮಟ್ಟದ ಕಲ್ಪಿತ ಯುವ ಸಂಸತ್ ಕಲಾಪ
ತೀರ್ಥಹಳ್ಳಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ನಡೆದ ತಾಲೂಕು ಮಟ್ಟದ ಕಲ್ಪಿತ ಯುವ ಸಂಸತ್ ಕಲಾಪದಲ್ಲಿ ಕಸ್ತೂರಿರಂಗನ್ ವರದಿ ಸೇರಿದಂತೆ ಗ್ರಾಮೀಣ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧ್ಯಾರ್ಥಿಗಳು ಮಂಡಿಸಿದ ಪರ ವಿರೋದದ ವಾದ ಮತ್ತು ಸಮರ್ಥನೆ ಅರ್ಥಪೂರ್ಣವಾಗಿದ್ದು ಗಮನಾರ್ಹವಾಗಿತ್ತು. ಶಿಸ್ತುಬದ್ದವಾಗಿ ನಡೆದ ಈ ಕಲ್ಪಿತ ಸಂಸತ್ ಕಲಾಪದಲ್ಲಿ ವಿಧ್ಯಾರ್ಥಿಗಳ ಆಂತರಿಕದಲ್ಲಿ ಇದ್ದ ಗಂಭೀರತೆ ಹಾಗೂ ಕಾಳಜಿಯೂ ವ್ಯಕ್ತವಾಗಿತ್ತು..
ತುಂಗಾ ಕಾಲೇಜಿನ ರಜತ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ, ಶಾಲಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ತುಂಗಾವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ದಿ, ಗ್ರಾಮೀಣ ಉದ್ಯೋಗ ಮತ್ತು ವಲಸೆ ಹಾಗೂ ಮಾನವ ವನ್ಯಜೀವಿ ಸಂಘರ್ಷ ಈ ಮೂರು ವಿಷಯಗಳನ್ನು ನೀಡಲಾಗಿತ್ತು. ಈ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗಿದ್ದ ಕಾಳಜಿ ಇಂತಹಾ ಕಾರ್ಯಕ್ರಮಗಳ ಉದ್ದೇಶ ಮತ್ತು ಸಾರ್ಥಕತೆಯನ್ನು ಎತ್ತಿ ಹಿಡಿಯುವಂತಿತ್ತು.
ಆರು ರಾಜ್ಯ ವ್ಯಾಪ್ತಿಯ ಜನರ ಬದುಕಿಗೆ ಮಾರಕವಾಗಿರುವ ಅವೈಜ್ಞಾನಿಕವಾದ ಕಸ್ತೂರಿರಂಗನ್ ವರದಿಯ ಮರು ಪರಿಶೀಲನೆ ಅಗತ್ಯ. ರೈತರಿಂದಲೇ ಅರಣ್ಯ ಉಳಿದಿದ್ದು ಪ್ರತ್ಯೇಕ ಕಾನೂನಿನ ಅಗತ್ಯವಿಲ್ಲಾ. ದಾಖಲೆ ಇಲ್ಲದ ವಾಸದ ಮನೆಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು. ಅಕ್ರಮ ಸಕ್ರಮದ ಬಗ್ಗೆ ಸರ್ಕಾರ ನೆವ ಹೇಳುವುದನ್ನು ಬಿಟ್ಟು ಮಂಜೂರಾತಿ ನೀಡಬೇಕಿದೆ ಎಂದು ವಿರೋದ ಪಕ್ಷದ ಸದಸ್ಯರು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಪಕ್ಷದವರ ಪ್ರಶ್ನೆಗಳಿಗೆ ಆಡಳಿತ ಪಕ್ಷದವರು ನೀಡಿದ ಉತ್ತರವೂ ಸಮರ್ಥನೀಯವಾಗಿತ್ತು.
ಗ್ರಾಮೀಣ ಭಾಗದ ಉದ್ಯೋಗ ಮತ್ತು ವಲಸೆ ವಿಚಾರದಲ್ಲಿ ಆಡಳಿತ ಮತ್ತು ವಿರೋದ ಪಕ್ಷದವರ ಪ್ರಶ್ನೆ ಉತ್ತರವೂ ಅತ್ಯಂತ ಗಂಭೀರವಾಗಿದ್ದು ಗಮನಾರ್ಹವಾಗಿತ್ತು. ಸರ್ಕಾರ ಗ್ರಾಮೀಣ ಭಾಗದ ಬಗ್ಗೆ ಅಸಡ್ಡೆ ತೋರಿ ಕಡೆಗಣಿಸಿರುವುದೇ ಗ್ರಾಮೀಣರ ವಲಸೆಗೆ ಕಾರಣವಾಗಿದೆ ಎಂಬುದು ಪ್ರತಿಪಕ್ಷದ ನಾಯಕಿಯ ಆರೋಪವಾಗಿತ್ತು. ಇದಕ್ಕೆ ಉತ್ತರವಾಗಿ ಮಾತನಾಡಿದ ಸಂಪುಟ ಸಚಿವ, ಗ್ರಾಮೀಣರ ಸ್ವಾವಲಂಬಿ ಬದುಕಿಗೆ ಪೂರಕವಾದ ಸರ್ಕಾರದ ತರಬೇತಿ ಆರ್ಥಿಕ ನೆರವಿನ ಯೋಜನೆಗಳು ಇದ್ದರೂ ಇದನ್ನು ಬಳಸಿಕೊಳ್ಳದ ಗ್ರಾಮೀಣ ಭಾಗದ ಯುವಕರು ನಗರ ವ್ಯಾಮೋಹದಿಂದ ವಲಸೆ ಹೋಗುತ್ತಿದ್ದಾರೆ ಎಂದರು. ಯುವ ಜನತೆಯ ಪಟ್ಟಣ ವ್ಯಾಮೋಹದಿಂದ ಕೃಷಿಗೆ ಹಿನ್ನಡೆಯಾಗುತ್ತಿದ್ದು ಹಳ್ಳಿಗಳು ವೃದ್ದಾಶ್ರಮವಾಗಿ ಪರಿವರ್ತನೆಗೊಳ್ಳುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿತ್ತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಎಸ್.ರಂಜಿತ್, ಯುವಜನತೆಯಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನೂ ಮೂಡಿಸುವ ಈ ಕಾರ್ಯಕ್ರಮ ಮಹತ್ವವನ್ನು ಹೊಂದಿದೆ. ಜಗತ್ತಿನಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ತ ರಾಷ್ಟ್ರವಾದ ಭಾರತದ ಭವಿಷ್ಯ ಇಂದಿನ ಯುವ ಜನತೆ ಮೇಲಿದೆ. ನಾವೇ ಸಮರ್ಪಿಸಿಕೊಂಡಿರುವ ಸಂವಿಧಾನದ ಆಶಯವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯೂ ನಿಮ್ಮೆಲ್ಲರ ಮೇಲಿದೆ. ಸಂವಿಧಾನದ ಆಶಯದಂತೆ ವಿವಿದತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಗ್ರಾಪಂಯಿಂದ ಸಂಸತ್ತಿನವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಶೋಭೆಗೆ ಕಳಂಕ ಬಾರದ ರೀತಿಯಲ್ಲಿ ನಡೆದುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪರಿಣಾಮಕಾರಿಯಾಗಿದೆ ಎಂದೂ ಹೇಳಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ ಹಾಗೂ ಉಪಾಧ್ಯಕ್ಷೆ ಗೀತಾ ರಮೇಶ್ ಸಮಯೋಚಿತವಾಗಿ ಮಾತನಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ. ಶೈಲಾ ಸಂವಿಧಾನದ ಪೀಠಿಕೆಯನ್ನು ಬೋದಿಸಿದರು.
ತುಂಗಾವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂಎನ್.ರಮೇಶ್, ಬಿಇಓ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕಿ ಸುಮನ ಎಚ್.ಕೆ. ತುಂಗಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್.ಕುಮಾರಸ್ವಾಮಿ ಇದ್ದರು. ತಾಲೂಕಿನ ಎಲ್ಲಾ ಪದವಿ ಮತ್ತು ಪದವಿಪೂವ ಕಾಲೇಜುಗಳು ಹಾಗೂ ಪ್ರೌಡಶಾಲೆಯ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Tags:
ತೀರ್ಥಹಳ್ಳಿ ಸುದ್ದಿ