ತುಂಗಾ ಮಹಾವಿದ್ಯಾಲಯದ ಕ್ರೀಡಾ ಸಾಧನೆ ಉನ್ನತ ಸ್ಥಾನದಲ್ಲಿದ್ದು ಈ ಪರಂಪರೆಯನ್ನು ಮುಂದುವರೆಸಬೇಕು - ಡಾನ್ ರಾಮಣ್ಣ ಶೆಟ್ಟಿ
ತೀರ್ಥಹಳ್ಳಿ: ವಜ್ರ ಮಹೋತ್ಸವದತ್ತ ಮುನ್ನಡೆಯುತ್ತಿರುವ ತುಂಗಾ ಮಹಾವಿದ್ಯಾಲಯದ ಕ್ರೀಡಾ ಸಾಧನೆ ಉನ್ನತ ಸ್ಥಾನದಲ್ಲಿದ್ದು ಈ ಪರಂಪರೆಯನ್ನು ಇಂದಿನ ವಿದ್ಯಾರ್ಥಿಗಳು ಮುಂದುವರೆಸುವ ಮೂಲಕ ಕಾಲೇಜಿನ ಕೀರ್ತಿಯನ್ನು ಬೆಳಗಬೇಕಿದೆ ಎಂದು ತುಂಗಾ ವಿಧ್ಯಾವರ್ಧಕ ಸಂಘದ ನಿಕಟಪೂರ್ವ ಕಾರ್ಯದರ್ಶಿ ಡಾನ್ ರಾಮಣ್ಣ ಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಹಾಕಿ ಮಾಂತ್ರಿಕ ಧ್ಯಾನ್ಚಂದ್ ಗೌರವಾರ್ಥ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನೋತ್ಸವದ ಅಂಗವಾಗಿ ಶನಿವಾರ ಕಾಲೇಜಿನ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಕೂಟದ ಉಧ್ಘಾಟನೆ ನೆರವೇರಿಸಿ, ತುಂಗಾ ಮಹಾವಿದ್ಯಾಲಯ ಕಳೆದ 59 ವರ್ಷಗಳ ಅವಧಿಯಲ್ಲಿ ಸೇವಾ ಮನೋಭಾವದೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಿದೆ. ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲಿ ತುಂಗಾ ಕಾಲೇಜನ್ನು ಪ್ರತಿನಿಧಿಸಿ ನೂರಾರು ಮಂದಿ ಕ್ರೀಡಾಪಟುಗಳು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದವರೆಗೂ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ಕಾಲೇಜಿನ ಹಿಂದಿನ ಕ್ರೀಡಾ ನಿರ್ದೆಶಕ ಕೆ.ಎಸ್.ಜಗದೀಶ್ ಅವರ ಮಾರ್ಗದರ್ಶನದಲ್ಲಿ ಮಾಡಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸುದರ್ಶನ್ ಅವರ ವೈಯಕ್ತಿಕ ಸಾಧನೆ ಇಂದಿಗೂ ದಾಖಲೆಯಾಗಿಯೇ ಉಳಿದಿದೆ ಎಂದರು.
ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಭೆಗೆ ಪೂರಕವಾದ ಅವಕಾಶವಿದೆ. ಪ್ರಸ್ಥುತ ಕಾಲೇಜಿನ ಕ್ರೀಡಾ ನಿರ್ದೆಶಕ ಡಾ. ಸುಜನ್ ವೈಯಕ್ತಿಕವಾಗಿಯೂ ಉತ್ತಮ ಕ್ರೀಡಾ ಸಾಧಕರಾಗಿದ್ದು ವಿಧ್ಯಾರ್ಥಿಗಳಿಗೆ ಇವರ ತರಬೇತಿ ಮತ್ತು ಮಾರ್ಗದರ್ಶನವೂ ದೊರೆಯಲಿದೆ. ಉದಯೋನ್ಮುಖ ಕ್ರೀಡಾಪಟುಗಳು ತುಂಗಾ ಕಾಲೇಜಿನಲ್ಲಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಉತ್ತಮ ಅವಕಾಶವಿದೆೆ. ಮತ್ತು ಪ್ರತಿಭೆಗೆ ಪೂರಕವಾದ ಎಲ್ಲ ರೀತಿಯ ಸವಲತ್ತುಗಳೂ ದೊರೆಯುತ್ತದೆ ಎಂದೂ ಹೇಳಿದರು.
ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎನ್.ರಮೇಶ್ ಮಾತನಾಡಿ, ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು ಸಾಧನೆಯ ಮೂಲಕ ಎತ್ತರದ ಸ್ಥಾನವನ್ನು ತಲುಪುವ ಮಾಧ್ಯಮವೂ ಆಗಿದೆ. ಕ್ರೀಡೆ ಜೀವನದಲ್ಲಿ ಎದುರಾಗುವ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮಾನಸಿಕ ಧೃಡತೆಯನ್ನು ನೀಡುವುದಲ್ಲದೇ ಶಿಸ್ತು ಸಂಯಮವನ್ನು ಮೂಡಿಸುವ ಮೂಲಕ ಇತರರನ್ನು ಗೌರವಿಸುವ ಸೌಹಾರ್ದತೆಯನ್ನೂ ಮೂಡಿಸುತ್ತದೆ. ಭವಿಷ್ಯದ ಆಶಾಕಿರಣಗಳಾದ ವಿದ್ಯಾರ್ಥಿಗಳು ಕ್ರೀಡೆಯ ಮಹತ್ವವನ್ನು ಅರಿತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಾಲೇಜಿನ ಹಿರಿಯ ಕ್ರೀಡಾಪಟು ಆರಗ ಪಿಯು ಕಾಲೇಜಿನ ಉಪನ್ಯಾಸಕಿ ಟಿ.ಆರ್.ಶ್ರೀಕಲಾ, ಕ್ರೀಡೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೇ ನಾಯಕತ್ವ ಗುಣವನ್ನೂ ರೂಪಿಸುತ್ತದೆ. ವಿದ್ಯಾರ್ಥಿಗಳು ಅಮೂಲ್ಯವಾದ ಸಮಯವನ್ನು ಮೊಬೈಲ್ ಬಳಕೆಗೆ ವಿನಿಯೋಗಿಸದೇ ನಿರಂತರ ಅಭ್ಯಾಸದ ಮೂಲಕ ಹಾಕಿ ಮಾಂತ್ರಿಕ ಧ್ಯಾನ್ಚಂದ್ ಸಾಧನೆಯನ್ನು ಅನುಸರಿಸಿ ಎಂದು ಕಿವಿಮಾತು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಕುಮಾರಸ್ವಾಮಿ ವಹಿಸಿದ್ದರು. ಕ್ರೀಡಾ ನಿರ್ದೆಶಕ ಡಾ. ಸುಜನ್ ಸ್ವಾಗತಿಸಿ, ಹಾಕಿ ಮಾಂತ್ರಿಕ ಧ್ಯಾನ್ಚಂದ್ ಗೌರವಾರ್ಥ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನೋತ್ಸವದ ಮಹತ್ವವನ್ನು ವಿವರಿಸಿದರು. ಐಕ್ಯೂಎಸಿ ಸಂಚಾಲಕ ಡಾ. ಎಂ.ನಾಗರಾಜ್ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕ ಪ್ರಮೋದ್ ಬಿ.ನಿರೂಪಿಸಿದರು.
Tags:
ತೀರ್ಥಹಳ್ಳಿ ಸುದ್ದಿ