ಶಿವಮೊಗ್ಗ ಕಾರಾಗೃಹಕ್ಕೆ ಕರೆದೋಯ್ಯುವಾಗ ಸೀನಿಮಿಯ ರೀತಿಯಲ್ಲಿ ಎಸ್ಕೇಪ್ ಆದ ಖೈದಿ
ಹೊಸನಗರ: ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿಯೊಬ್ಬನನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸುಪರ್ದಿಯಿಂದ ತಪ್ಪಿಸಿಕೊಂಡಿರುವ ಘಟನೆ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸರ್ಕಲ್ ಸಮೀಪ ನಡೆದಿದೆ. ಆರೋಪಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹೊಸನಗರ ತಾಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ್ (36) ಪರಾರಿಯಾದ ಖೈದಿ . ಪ್ರಕರಣವೊಂದರ ಸಂಬಂಧ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವೆಂಕಟೇಶ್ನನ್ನು ವಶಕ್ಕೆ ಪಡೆದು ಹೊಸನಗರ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವಂತೆ ಆದೇಶ ನೀಡಿದ್ದರು. ಅದರಂತೆ ಅರಣ್ಯ ಉಪವಲಯ ಅಧಿಕಾರಿಗಳು ಇಲಾಖೆಯ ವಾಹನದಲ್ಲಿ ಆರೋಪಿಯನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ವಾಹನವು ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸರ್ಕಲ್ ಸಮೀಪ ತಲುಪಿದಾಗ, ತನಗೆ ಹಸಿವಾಗಿದ್ದು ಊಟ ಕೊಡಿಸುವಂತೆ ಆರೋಪಿ ವೆಂಕಟೇಶ್ ಮನವಿ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯ ಮನವಿಯನ್ನು ನಂಬಿದ ಅರಣ್ಯ ಅಧಿಕಾರಿಗಳು ಊಟ ತರಲು ತೆರಳಿದ್ದಾರೆ.
ಈ ವೇಳೆ ವಾಹನದಲ್ಲೇ ಕಾವಲು ಕಾಯುತ್ತಿದ್ದ ಅರಣ್ಯ ವೀಕ್ಷಕ ಹಾಗೂ ಸಿಬ್ಬಂದಿಗಳ ಮೇಲೆ ಆರೋಪಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪರಾರಿಯಾಗಲು ಕಾರಣವಾದ ಎಲ್ಲ ಅಂಶಗಳ ಕುರಿತು ತನಿಖೆ ನಡೆಯುತ್ತಿದೆ.
Tags:
ಹೊಸನಗರ ಸುದ್ದಿ