ತೀರ್ಥಹಳ್ಳಿ ಭೂ ಬ್ಯಾಂಕ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಶೇಕಡಾ 88.30 ವಸೂಲಾತಿ PLD Bank

ತೀರ್ಥಹಳ್ಳಿ ಭೂ ಬ್ಯಾಂಕ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಶೇಕಡಾ 88.30 ವಸೂಲಾತಿ

ಬಸವಾನಿ ವಿಜಯದೇವ್ ಸಾರಥ್ಯದಲ್ಲಿ ಈ ಬಾರಿಯೂ ನಿರಂತರ 82.76 ಲಕ್ಷ ಲಾಭ

ತೀರ್ಥಹಳ್ಳಿ : ತೀರ್ಥಹಳ್ಳಿಯ ಭೂ ಬ್ಯಾಂಕ್ ಈ ಬಾರಿ ಒಟ್ಟಾರೆಯಾಗಿ ಸುಮಾರು 43.57 ಕೋಟಿ ರೂಪಾಯಿ ವ್ಯವಹಾರ ನಡೆಸಿ ಸುಮಾರು 82 ಲಕ್ಷದ 76 ಸಾವಿರ ರೂಪಾಯಿ ನಿವ್ವಳ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷವೂ ಸಹ ಶೇಕಡಾ 10ರಷ್ಟು ಲಾಭಾಂಶ ಷೇರುದಾರ ಸದಸ್ಯರಿಗೆ ವಿತರಿಸಿದ್ದು ಈ ಬಾರಿಯೂ ಶೇಕಡಾ 10 ಲಾಭಾಂಶ ಹಂಚಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತೀರ್ಥಹಳ್ಳಿಯ ಭೂ ಬ್ಯಾಂಕಿನ ಅಧ್ಯಕ್ಷ ಬಸವಾನಿ ವಿಜಯದೇವ್  ತಿಳಿಸಿದರು..

ಭೂ ಬ್ಯಾಂಕಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ 20 ವರ್ಷಗಳಿಂದಲೂ ಆಡಿಟ್ ವರದಿಯಲ್ಲಿ 'ಎ' ಗ್ರೇಡ್ ಪಡೆದು ಜಿಲ್ಲೆಯ ಸದೃಢ ಹಾಗೂ ಲಾಭಗಳಿಕೆಯ ಭೂ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕಿನ ಷೇರುದಾರ ಸದಸ್ಯರಿಗೆ ಸುಮಾರು 12.52 ಕೋಟಿ ರೂಪಾಯಿ ಸಾಲ ನೀಡಿ ತೀರ್ಥಹಳ್ಳಿ ಭೂ ಬ್ಯಾಂಕಿನ ಇತಿಹಾಸದಲ್ಲೇ ಪ್ರಪ್ರಥಮ ಎಂಬಂತೆ ಸುಮಾರು ಶೇ. 88.30 ವಸೂಲಾತಿ ಮಾಡಿ ಇತರೆ ಬ್ಯಾಂಕ್ ಗಳ ಹುಬ್ಬೇರಿಸುವಂತೆ ಮಾಡಿದೆ ಆಡಳಿತಗಾರನೋರ್ವನ ಕೈಗೆ ಎಷ್ಟೇ ನಷ್ಟದಲ್ಲಿದ್ದ ಸಂಸ್ಥೆಯೊಂದು ಸಿಕ್ಕಿದರೆ ಅದನ್ನು ಲಾಭದತ್ತ ಕೊಂಡೊಯ್ಯಬಲ್ಲದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ ಎಂದರು..

ಒಂದು ಕಾಲದಲ್ಲಿ ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳೇ ಹಳ್ಳಿಗಾಡಿನ ರೈತರಿಗೆ ಕೃಷಿ ಚಟುವಟಿಕೆಗೆ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುವ ಸಂಸ್ಥೆಗಳಾಗಿತ್ತು. ಆ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ರೈತ ಸಮುದಾಯಕ್ಕೆ ಪ್ರತಿ ವರ್ಷದ ಬೇಸಾಯ, ತೋಟ ಕೂರಿಸುವುದು, ಬೇಲಿ ಕೊಟ್ಟಿಗೆ ಇತ್ಯಾದಿಗಳ ಅಭಿವೃದ್ಧಿಗೆ ನಬಾರ್ಡ್ ಅನುದಾನದಲ್ಲಿ ಹಣಕಾಸನ್ನು ಸಾಲ ರೂಪದಲ್ಲಿ ಕೊಡುವ ಪರಿಪಾಠವಿತ್ತು. ಇಂದು ತಲೆ ಎತ್ತಿ ನಿಂತಿರುವ ಮಲೆನಾಡು ಭಾಗ ಬಹುತೇಕ ಅಡಿಕೆ ತೋಟಗಳಿಗೆ ಭೂ ಬ್ಯಾಂಕ್ ಸಾಲ ನೀಡಿರುವುದು ನಾವು ನೆನಪಿಸಿಕೊಳ್ಳಬಹುದು ಎಂದರು..

ಇತ್ತೀಚಿನ ಕೆಲವು ವರ್ಷಗಳಿಂದ ನಬಾರ್ಡ್ ಸಹಕಾರ ಕುಂಠಿತನಾದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳ ಕೃಷಿಕರಿಗೆ ಕೃಷಿ ಚಟುವಟಿಕೆಗೆ ಹಣಕಾಸು ಒದಗಿಸುವಲ್ಲಿ ಹಿಂದೆ ಬಿದ್ದವು. ಪ್ರಸ್ತುತ ರಾಜ್ಯದ ಬಹುತೇಕ ಭೂ ಬ್ಯಾಂಕ್ ಗಳೂ ತಮ್ಮಸಿಬ್ಬಂದಿಗೂ ವೇತನ ನೀಡಲು ಪರದಾಡುವ ಪರಿಸ್ಥಿತಿ ಇದೆ. ಬಹುತೇಕ ಎಲ್ಲವೂ ನಷ್ಟದಲ್ಲಿದೆ. ಆದರೆ ತೀರ್ಥಹಳ್ಳಿ ಭೂ ಬ್ಯಾಂಕ್ ಸಾಲ ವಸೂಲಾತಿ, ವ್ಯವಹಾರ ನಿವ್ವಳ ಲಾಭ. ಸಾಲ ನೀಡಿಕೆಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ. ಕಳೆದ ಸುಮಾರು 11 ವರ್ಷಗಳಿಂದ ಈ ಬ್ಯಾಂಕಿನ ಆಡಳಿತದ ಶಿಸ್ತುಬದ್ಧ ಕಟ್ಟುನಿಟ್ಟಿನ ವ್ಯವಹಾರವೇ ತೀರ್ಥಹಳ್ಳಿ ಭೂ ಬ್ಯಾಂಕ್ ಪ್ರಗತಿಯ ಮೆಟ್ಟಿಲೇರಲು ಕಾರಣವಾಗಿದೆ ಎಂದರು..

ನಮ್ಮ ಪ್ರಾಮಾಣಿಕ ನಡೆ, ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮ, ಬದ್ಧತೆ ಗಮನಿಸಿರುವ ಷೇರುದಾರರು ತಾವು ಪಡೆದ ಸಾಲವನ್ನು ಅತ್ಯಂತ ಮುತುವರ್ಜಿಯಿಂದ ಮರುಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಯಲ್ಲಿ ಕೈಜೋಡಿಸಿರುತ್ತಾರೆ. ಈ ಬ್ಯಾಂಕಿನಲ್ಲಿ ಸುಮಾರು 5508 ಮಂದಿ ಷೇರುದಾರರಿದ್ದು ಬಹುಪಾಲು ಷೇರುದಾರರಿಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡುತ್ತಾ ಅವರೆಲ್ಲರ ಆರ್ಥಿಕ ಪ್ರಗತಿಗೆ ತೀರ್ಥಹಳ್ಳಿ ಭೂ ಬ್ಯಾಂಕ್ ಕೈಜೋಡಿಸಿದೆ.  ಭೂ ಬ್ಯಾಂಕ್ ಜನಸ್ನೇಹಿ ಆರ್ಥಿಕ ಸಂಸ್ಥೆ ಆಗಿಸುವಲ್ಲಿ ನಿರಂತರ ಶ್ರಮಿಸಲಾಗುತ್ತಿದ್ದು ವಿವಿಧ ಯೋಜನೆಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ಕಂತು ಪಾವತಿ ಮಾಡಿ ಹೊಸ-ಹೊಸ ರೈತರಿಗೆ ಬ್ಯಾಂಕಿನ ಸೇವೆ ವಿಸ್ತಾರಗೊಳ್ಳಲು ಸಹಕರಿಸುತ್ತಿರುವುದಕ್ಕೆ ಬ್ಯಾಂಕಿನ ಅಧ್ಯಕ್ಷರಾದ ಬಸವಾನಿ ವಿಜಯದೇವ್ ಸಂತಸ ವ್ಯಕ್ತಪಡಿಸಿದರು 

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀಧರ್ ಮೂರ್ತಿ, ಬ್ಯಾಂಕ್ ಮ್ಯಾನೇಜರ್ ಸಂಜಯ್ ಇದ್ದರು..
Previous Post Next Post