ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು Rippanpete

ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

ರಿಪ್ಪನ್‌ಪೇಟೆ : ಬಾವಿಯಲ್ಲಿದ್ದ ನೀರನ್ನು ಹೊರತೆಗೆಯಲು ವಿದ್ಯುತ್ ಮೋಟಾರ್ ಸಂಪರ್ಕಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ದುರ್ಘಟನೆ ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ದೊಣಂದೂರು ಗ್ರಾಮದ ನಿವಾಸಿ ಕೃಷ್ಣಪ್ಪ (59) ಎಂದು ಗುರುತಿಸಲಾಗಿದೆ.  ಕೃಷ್ಣಪ್ಪ ಅವರು ಕಳೆದ ಮೂರು ವರ್ಷಗಳಿಂದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೃಷ್ಣಪ್ಪನವರ ಮನೆಯ ಹಿಂಭಾಗದಲ್ಲಿ ಬಾವಿ ತೋಡುವ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ವೇಳೆ ಬಾವಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿದ್ದರಿಂದ ಅದನ್ನು ಹೊರತೆಗೆದು ಖಾಲಿ ಮಾಡಲು ವಿದ್ಯುತ್ ಮೋಟಾರ್ ಅಳವಡಿಸಿ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣಪ್ಪ ಅವರು ಮೋಟಾರ್ ವೈರನ್ನು ಮನೆಯ ಅಡುಗೆ ಮನೆಯಲ್ಲಿದ್ದ ಸ್ವಿಚ್ ಬೋರ್ಡ್‌ಗೆ ಸಂಪರ್ಕಿಸಲು ಮುಂದಾಗಿದ್ದರು.

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ್ದು, ಕೃಷ್ಣಪ್ಪ ಅವರ ಬಲಗೈಗೆ ತೀವ್ರವಾಗಿ ವಿದ್ಯುತ್ ಶಾಕ್ ತಗುಲಿದೆ. ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಘಟನೆ ಗಮನಿಸಿದ ಪತ್ನಿ ವೇದಾವತಿ ಹಾಗೂ ಅಲ್ಲಿದ್ದ ಇತರ ಕಾರ್ಮಿಕರು ತಕ್ಷಣವೇ ನೆರವಿಗೆ ಧಾವಿಸಿದ್ದು, ಅವರನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದಾರೆ.

ಆದರೆ ಆಸ್ಪತ್ರೆಗೆ ತಲುಪಿದ ಬಳಿಕ ವೈದ್ಯರು ಪರೀಕ್ಷಿಸಿ ಕೃಷ್ಣಪ್ಪ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.  ಈ ಸಂಬಂಧ  ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿದೆ. 
Previous Post Next Post