ರಾಮೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಅಧಿಕ ಮಾಸದ ಪ್ರಯುಕ್ತ ಅನ್ನದಾನ ಸೇವೆ ಮಾಡಿಸಲು ವಿಶೇಷ ಅವಕಾಶ Rameshvara Temple

ರಾಮೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಅಧಿಕ ಮಾಸದ ಪ್ರಯುಕ್ತ ಅನ್ನದಾನ ಸೇವೆ ಮಾಡಿಸಲು ವಿಶೇಷ ಅವಕಾಶ 

ತೀರ್ಥಹಳ್ಳಿ :  ಶ್ರೀ ಕ್ಷೇತ್ರ ರಾಮೇಶ್ವರ ದೇವರ ಸಾನಿಧ್ಯದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ನಿತ್ಯ ಅನ್ನಸಂತರ್ಪಣಾ ಕಾರ್ಯದಲ್ಲಿ ಲಕ್ಷಾಂತರ ಭಕ್ತಾದಿಗಳು ನಿತ್ಯ ಅನ್ನಪ್ರಸಾದವನ್ನು ಸ್ವೀಕರಿಸಿ ಸಂತೃಪ್ತರಾಗಿದ್ದಾರೆ. ಈ ಮಹತ್ಕಾರ್ಯಕ್ಕೆ ಸಹಕಾರ ನೀಡುತ್ತ ಬಂದಿರುವ ಎಲ್ಲಾ ಸದ್ಭಕ್ತರಿಗೂ ಮೊದಲಿಗೆ ದೇವಸ್ಥಾನದ ನಿತ್ಯ ಅನ್ನಸಂತರ್ಪಣಾ ಸಮಿತಿ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದು ಅಧ್ಯಕ್ಷರಾದ ಜೀವಂದರ್ ಜೈನ್ ತಿಳಿಸಿದರು.

ರಾಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಇಲ್ಲಿಯವರೆಗೆ ಲಕ್ಷಾಂತರ ಭಕ್ತರಿಗೆ ಅನ್ನದಾನ ಮಾಡಿದ್ದೇವೆ. ದಾನಗಳಲ್ಲಿ ಶ್ರೇಷ್ಠವಾದ ದಾನ ಎಂದರೆ ಅದು ಅನ್ನದಾನ ಎನ್ನುತ್ತಾರೆ. ಇಲ್ಲಿಯವರೆಗೆ ಭಕ್ತರಿಂದ ಪಡೆದ ಸಹಾಯದಿಂದಲೆ ಅನ್ನದಾನ ನಡೆಸುತ್ತಾ ಬಂದಿದ್ದೇವೆ. ಇದು ಪ್ರತಿನಿತ್ಯ ನೆಡೆಯಬೇಕು, ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಭಾವಿಸಿದ್ದೇವೆ. ತೀರ್ಥಹಳ್ಳಿಯಲ್ಲಿ ಮೃಗಾವಧೆ ಕ್ಷೇತ್ರ ಬಿಟ್ಟರೆ ನಮ್ಮಲ್ಲಿ ಮಾತ್ರ ಅನ್ನಸಂತರ್ಪಣೆ ನಡೆಯುತ್ತಿದೆ ಎಂದರು.. ರಾಮೇಶ್ವರ ದೇವಸ್ಥಾನ ಸಮೀಪದಲ್ಲಿ ಜೋಗಿ ಕುತ್ರೆ ಇದೆ. ಅಲ್ಲಿಗೆ ತೂಗು ಸೇತುವೆಯನ್ನು ರಾಜಕಾರಣಿಗಳು ಮಾಡಿಸಿಕೊಟ್ಟರೆ ನಮ್ಮ ಕ್ಷೇತ್ರಕ್ಕೆ ಹೊರ ಭಾಗದಿಂದ ಬರುವ ಭಕ್ತರು ಜಾಸ್ತಿ ಆಗುತ್ತಾರೆ. ಇದೊಂದು ಪ್ರವಾಸಿ ತಾಣ ಸಹ ಆಗುತ್ತದೆ. ಇನ್ನು  ಈಗ ಅಧಿಕ ಮಾಸ ಇರುವ ಕಾರಣ ಯಾವುದೇ ಕೆಲಸ ಮಾಡಿದರು ಅಧಿಕ ಲಾಭವಾಗುತ್ತದೆ ಎನ್ನುತ್ತಾರೆ ಹಾಗಾಗಿ ಅಧಿಕ ಮಾಸದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದರು.

ಈ ವರ್ಷದ ಶ್ರೇಷ್ಠವಾದ ಜೇಷ್ಠ “ಅಧಿಕ ಮಾಸದ ಈ ವಿಶೇಷ ಪರ್ವಕಾಲದಲ್ಲಿ ದಾನಗಳಲ್ಲೇ ಶ್ರೇಷ್ಠವಾದ ಅನ್ನದಾನ ಸೇವೆ'ಯನ್ನು ಮಾಡಲು ಅವಕಾಶವನ್ನು ಕಲ್ಪಿಸಿದ್ದು ಪ್ರತಿದಿನ ಒಬ್ಬರಿಗೆ ಅನ್ನದಾನ ಸೇವೆಯನ್ನು ಮಾಡಿಸಬಹುದಾಗಿದ್ದು, ಈ ಅಧಿಕ ಮಾಸದ ಪರ್ವಕಾಲದಲ್ಲಿ ಮಾಡುವ ಸೇವಾ
ಕಾರ್ಯಕ್ಕೆ ನೂರರಷ್ಟು ಅಧಿಕ ಫಲ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಿದೆ. ಈ ಕಾಲವನ್ನು
ವಿಷ್ಣುವಿನ ಆಳ್ವಿಕೆಯ ಕಾಲ ಎಂದು ಕರೆಯಲಾಗುತ್ತದೆ. ಈ ಅಧಿಕ ಮಾಸದ ದಿನಾಂಕ 15-06-2026ರ ಒಳಗೆ ನಿಮ್ಮ ಕುಟುಂಬದಿಂದ ಪ್ರತಿದಿನ ಒಬ್ಬರಿಗೆ ಅನ್ನದಾನ ಸೇವೆ ಯನ್ನು ಮಾಡಿಸುವ ಮೂಲಕ ಅನ್ನದಾನದ ಸೇವಾ ಪುಣ್ಯ ಪ್ರಾಪ್ತಿಯನ್ನು ಪಡೆಯುವಂತಾಗಲಿ  ಎಂದರು.

ಅಧಿಕ ಮಾಸ ಎಂಬ ಪರಮಪುಣ್ಯ ಪರ್ವಕಾಲ

ಸಾಧನದೇಹ, ಸಾಧನದೇಶ ಹಾಗೂ ಸಾಧನಕಾಲಗಳ ತ್ರಿವೇಣಿ ಸಂಗಮದಲ್ಲಿಯೇ ಒಳ್ಳೆಯ ಸತ್ಕರ್ಮಗಳು ಹುಟ್ಟುತ್ತವೆ. ಅದರಿಂದಲೇ ಜ್ಞಾನ-ಭಕ್ತಿ-ವೈರಾಗ್ಯಗಳೆಂಬ ಸಿದ್ಧಿ ಪ್ರಾಪ್ತವಾಗುತ್ತದೆ. ಆದ್ದರಿಂದ ಆಯಾ ಕಾಲಕ್ಕೆ ಇರುವ ಪ್ರಾಧಾನ್ಯತೆ ಬಹಳ  ಮಹತ್ವವಾದದ್ದು, ಹೀಗೆಯೇ ಪರಮಪುಣ್ಯ ಕಾಲವೆನಿಸಿದೆ. ಅಧಿಕಮಾಸ, ಪದ್ಮಪುರಾಣ, ಬೃಹನ್ನಾರದೀಯ ಪುರಾಣ ಹಾಗೂ ಭವಿಷ್ಯೋತ್ತರ ಪುರಾಣಗಳಲ್ಲಿ ಅಧಿಕ ಮಾಸದ ಮಹತ್ವ ನಿರೂಪಿತವಾಗಿದೆ.

ಅಧಿಕವೆಂದರೇನು ?

ರವಿ ಒಂದು ಮಾಸದಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುವುದೇ ರವಿ ಸಂಕ್ರಮಣ, ಯಾವ ಮಾಸದಲ್ಲಿ ರವಿ ಸಂಕ್ರಮಣವಿಲ್ಲದೆ ಎರಡು ಅಮಾವಾಸ್ಯೆಗಳು ಬರುತ್ತವೆಯೋ ಅದನ್ನು ಅಧಿಕ ಮಾಸ ಎಂದಿದ್ದಾರೆ. ಇದನ್ನು ಮಲಮಾಸ, ಪುರುಷೋತ್ತಮ ಮಾಸ ಅಂತಲೂ ಕರೆಯುತ್ತಾರೆ.

ಮಲ ಎಂದರೆ ಕಲ್ಮಶ, ಅಶುದ್ಧ ಅಥವಾ ಪಾಪಕೃತ್ಯಗಳು, ಮಾಡಿದ ಅನೇಕ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಅವಕಾಶವನ್ನು ಶಾಸ್ತ್ರಗಳು ವಿಧಿಸಿವೆ. ಈ ಅಧಿಕ ಮಾಸದಲ್ಲಿ ವಿಶೇಷವಾಗಿ ಭಾಗವತದ ಶ್ರವಣ, ಹರಿನಾಮ ಸಂಕೀರ್ತನೆ, ಅನೇಕ ವಿಧವಾದ ದಾನಗಳು ಅದರಲ್ಲೂ ಅನ್ನದಾನ ಬಲು ಶ್ರೇಷ್ಠ.. ಶುದ್ಧ ಮನಸ್ಸಿನಿಂದ ಆಚರಿಸಿ ಕಲ್ಮಶವನ್ನು ಅಂದರೆ ಪಾಪಗಳನ್ನು ಕಳೆದುಕೊಂಡು ಶುದ್ಧರಾಗುವ ಅವಕಾಶವನ್ನು ಹಿರಿಯರು ತಿಳಿಸಿದ್ದಾರೆ.

33 ಅಥವಾ 32 ತಿಂಗಳಿಗೊಮ್ಮೆ ಈ ಅಧಿಕ ಮಾಸ ಒದಗುತ್ತದೆ. “ಚಾತುರ್ಮಾಸ್ಯದಲ್ಲಿ ಕಾರ್ತಿಕ ಮಾಸವೇ ಶ್ರೇಷ್ಠವೆಂದು ತಿಳಿಸಿದ್ದಾರೆ. ಅಂತಹ ಕಾರ್ತಿಕ ಮಾಸಕ್ಕಿಂತಲೂ ಅಧಿಕ ಮಾಸ ಕೋಟಿ ಪಟ್ಟು ಶ್ರೇಷ್ಠವಾದದ್ದು” ಎಂದು ಪುರಾಣಗಳು ಅಧಿಕ ಮಾಸದ ಶ್ರೇಷ್ಠತೆಯನ್ನು ವರ್ಣಿಸುತ್ತವೆ. ಎಲ್ಲಾ ಮಾಸಗಳಲ್ಲಿ ಆಯಾ ಮಾಸದ ನಿಯಮಾನುಸಾರ ದೇವತೆಗಳನ್ನು ತಿಳಿಸಿದ್ದಾರೆ. ಆದರೆ ಅಧಿಕ ಮಾಸದಲ್ಲಿ ಮಾತ್ರ ಸಾಕ್ಷಾತ್ ಶ್ರೀ ಹರಿಯೊಂದಿಗೆ 33 ಕೋಟಿ ದೇವತೆಗಳು ಈ ಮಾಸದಲ್ಲಿ ಅಧಿಷ್ಠಿತರಾಗಿದ್ದಾರೆ ಎಂಬುದು ಇನ್ನೂ ವಿಶೇಷ..

ವಿಶೇಷ ಸೇವೆಯ ವಿವರಗಳು

ಅಧಿಕ ಮಾಸದ ಅನ್ನದಾನ ಸೇವೆ (33 ಜನರಿಗೆ) - ರೂ 1,000/-

ಅಧಿಕ ಮಾಸದಿಂದ ಶ್ರಾವಣ ಮಾಸದವರೆಗೆ ನಿತ್ಯ ಒಬ್ಬರಿಗೆ ಅನ್ನದಾನ ಸೇವೆ - ರೂ 3,000/-

ಅಧಿಕ ಮಾಸದಿಂದ ನಿತ್ಯ ಒಬ್ಬರಿಗೆ 1 ವರ್ಷ ಅನ್ನದಾನ ಸೇವೆ ರೂ. 12,000/-

1 ವರ್ಷದ ಸೇವೆಯನ್ನು ಮಾಡಿಸಿದವರಿಗೆ ಪ್ರತಿ ಅಮಾವಾಸ್ಯೆ ದಿನ ದೇವರ ನಲ್ಲಿ ಸಂಕಲ್ಪಿಸಿ ಪ್ರಸಾದ ಕಳುಹಿಸಿ ಕೊಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಜೀವಂದರ್ ಜೈನ್, ಗೋವರ್ಧನ್, ಪೂರ್ಣೇಶ್ ಮಂಡ್ಲೆರ್, ಲೋಕೇಶ್, ಶ್ರೀನಿವಾಸ್, ಪೂರ್ಣೇಶ್ ಪೂಜಾರಿ ಸೇರಿ ಹಲವರು ಉಪಸ್ಥಿತರಿದ್ದರು..
Previous Post Next Post