ಡಾ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು Shivamogga

ಡಾ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು

ಶಿವಮೊಗ್ಗ: ಜಿಲ್ಲೆಯ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಡಾ ಸಮೀಕ್ಷಾ ರೆಡ್ಡಿ  ಅವರ ಸಾವಿಗೆ ಕಾರಣವಾಗಿದ್ದ ನೀರಾನೆ ಹಂಸಿಣಿ ಸಾವನ್ನಪ್ಪಿದೆ. 12 ವರ್ಷದ ನೀರಾನೆ ಹಂಸಿಣಿ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಸುದ್ದಿಯಾಗಿತ್ತು. 

ಮಾರ್ಚ್ 20 ನಡೆದಿದ್ದ ದುರಂತದಲ್ಲಿ ಡಾ ಸಮಿಕ್ಷಾ ರೆಡ್ಡಿ ಅವರು ಸಾವನ್ನಪ್ಪಿದ್ದರು. ಆ ಬಳಿಕ ಹಿಪ್ಪೋ ಗರ್ಭಪಾತ  ಹಾಗೂ ತೀವ್ರ ಸೋಂಕಿನಿಂದ ಬಳಲುತ್ತಿದ್ದ ಹಂಸಿಣಿ ಉಳಿಸಿಕೊಳ್ಳಲು ವೈದ್ಯರು ನಿರಂತರವಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀರಾನೆ ಕೊನೆಯುಸಿರೆಳೆದಿದೆ.

ಶನಿವಾರದಂದು ಹಂಸಿಣಿ ಗರ್ಭದಲ್ಲೇ ಮರಿ ಮೃತಪಟ್ಟಿತ್ತು. ಆ ಬಳಿಕ ದೇಹದಾದ್ಯಂತ ವಿಷಕಾರಿ ಸೋಂಕು ಹರಡಿತ್ತು. ಬನ್ನೇರುಘಟ್ಟದ ವೈದ್ಯ ಡಾ. ಆನಂದ್‌ ಹಾಗೂ ಮೈಸೂರು ಮೂಲಕ ಮದನ್‌ ತಂಡ ಹಿಪ್ಪೋ ಉಳಿಸಲು ಪ್ರಯತ್ನಿಸಿದ್ದರು. ಆದರೆ ಡಾ.ಸಮೀಕ್ಷಾ ರೆಡ್ಡಿ ಮೃತಪಟ್ಟಾಗಲೇ ಘಾಸಿಯಾಗಿದ್ದ ಹಿಪ್ಪೋ ಆ ಬಳಿಕ ಚೇತರಿಕೆ ಕಾಣಲೇ ಇಲ್ಲ. ನಿರಂತರ ಪ್ರಯತ್ನ ನಡುವೆಯೂ ಹಿಪ್ಪೋ ಸಾವನ್ನಪ್ಪಿದ್ದು, ಪ್ರಾಣಿ ಪ್ರೇಮಿಗಳಲ್ಲಿ ದುಃಖತರಿಸಿದೆ.
ಅಂದಹಾಗೇ, ಮೈಸೂರು ಮೃಗಾಲಯದಿಂದ ಹಂಸಿನಿಯನ್ನು 2022ರಲ್ಲಿ ಶಿವಮೊಗ್ಗಕ್ಕೆ ತರಲಾಗಿತ್ತು. ಇಲ್ಲಿಗೆ ಬಂದ ನಂತರ ಹಂಸಿನಿ ಮೂರು ಬಾರಿ ಗರ್ಭ ಧರಿಸಿತ್ತು. 2024 ರಲ್ಲಿ ಅದರ ಮೊದಲ ಮರಿಗೆ ಜನ್ಮ ನೀಡಿತ್ತು. ಆದರೆ ಆ ಬಳಿಕ ಗಂಡು ಮರಿಯನ್ನು ಕೊಂದಿತ್ತು. 2025ರಲ್ಲಿ ಎರಡನೇ ಮರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿತ್ತು. ಈಗ ಮೂರನೇ ಮರಿ ಗರ್ಭದಲ್ಲೇ ಮೃತಪಟ್ಟಿದೆ. ಕಳೆದ ಮಾರ್ಚ್ 19ರ ತಡರಾತ್ರಿ ಹಂಸಿಣಿಯ ಆರೋಗ್ಯ ತಪಾಸಣೆ ನಡೆಸುತ್ತಿದ್ದ ತರಬೇತಿ ನಿರತ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಹಂಸಿಣಿ ದಾಳಿ ಮಾಡಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೈದ್ಯೆ ಮರುದಿನ ಮೃತಪಟ್ಟಿದ್ದರು.

ಸಮೀಕ್ಷಾ ಅವರ ಸಾವಿನ ಬಳಿಕ ಅವರು ಕುಟುಂಬಸ್ಥರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆರೋಪ ಮಾಡಿದ್ದರು. ರಾತ್ರಿ ಸಮಯದಲ್ಲಿ ಒಬ್ಬರೇ ಎನ್ ಕ್ಲೋಶರ್ ಗೆ ಹೋಗಲು ಅನುಮತಿ ನೀಡಿದ್ದು, ಸುರಕ್ಷತೆ ಪ್ರೋಟೋಕಾಲ್ ಪಾಲಿಸದೆ ಇದ್ದದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದು ಡಿಸಿಎಫ್ ಮತ್ತು ಇತರ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಮಗಳ ಸಾವು ಆಗಿದೆ. ಆದ್ದರಿಂದ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯ ಮಾಡಿದ್ದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕುಟುಂಬಸ್ಥರಿಗೆ ಸಂತ್ವಾನ ಹೇಳಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು. ಅಲ್ಲದೇ ಕುಟುಂಬಕ್ಕೆ 30 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.








Previous Post Next Post