ಪಟ್ಟಣ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ - ನಿವೇಶನ ವಿಚಾರದಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ವಾಕ್ಸಮರ
ತೀರ್ಥಹಳ್ಳಿ : ಬೆಟ್ಟಮಕ್ಕಿಯಿಂದ ಬಾಳೆಬೈಲಿನ ವಾಟರ್ ಹೌಸ್ ಗೆ ವಿದ್ಯುತ್ ಕೇಬಲ್ ಲೈನ್ ಸರಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಅಳವಡಿಕೆ ಮಾಡಲಾಗಿದ್ದು ಕೇವಲ ಎರಡೇ ದಿನಕ್ಕೆ ಬಸ್ಟ್ ಆಗಿದೆ. ಈಗಾಗಲೇ ಕಂಟ್ರಾಕ್ಟರ್ ಗೆ ಹಣವನ್ನು ಸಹ ನೀಡಲಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣ ಪಂಚಾಯತ್ ನ ಬಿ ರವೀಂದ್ರ ಶೆಟ್ಟಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪರಿಶೀಲನೆ ನಡೆಸದೆ ಕಂಟ್ರಾಕ್ಟರ್ ಗೆ ಹಣ ಕೊಟ್ಟಿದ್ದು ಯಾಕೆ? ಕೇವಲ ಎರಡೇ ದಿನಕ್ಕೆ ಹಾಳಾಗುತ್ತದೆ ಎಂದರೆ ಅರ್ಥವೇನು? ಸಮರ್ಪಕವಾಗಿ ಮಾಡದ ಕೆಲಸಕ್ಕೆ ಈಗಾಗಲೇ ಹಣ ನೀಡಿ ಆಗಿದೆ. ಈಗ ಅದನ್ನು ಸರಿಪಸುವುದು ಯಾರು? ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಅಧ್ಯಕ್ಷರು ಕಂಟ್ರಾಕ್ಟರ್ ಅನ್ನು ಕರೆಸಿ ಎಂದು ಕೋಪಗೊಂಡರು.
ಬಿ ಗಣಪತಿ ಮಾತನಾಡಿ ಈಗಾಗಲೇ ಪಟ್ಟಣ ಪಂಚಾಯತ್ ನಲ್ಲಿ ಈ ಸ್ವತ್ತು ಅಭಿಯಾನ ಅಂತ ಮಾಡಿದ್ದೀರಾ, ಅದು ಪಟ್ಟಣ ಪಂಚಾಯತ್ ಒಳಗೆ ಕುಳಿತು ಮಾಡುವುದಾ? ಅಥವಾ ಜನರ ಬಳಿ ಹೋಗಿ ಮಾಡುವುದಾ? ಎಂದು ಪ್ರೆಶ್ನೆ ಮಾಡಿದರು. ಹಾಗೆಯೇ ಕಸದ ವಾಹನದ ವಿಚಾರದಲ್ಲಿ ಮನೆ ಮನೆಗೆ ಹೋಗುವ ವಾಹನ ಸರಿಯಾಗಿ ಹೋಗುತ್ತಿಲ್ಲ. ಎಂದು ಹೇಳಿದ್ದಕ್ಕೆ ಮುಖ್ಯಾಧಿಕಾರಿಗಳು ಮಾತನಾಡಿ ನಮ್ಮಲ್ಲಿ ಕೆಲಸದವರ ಕೊರತೆ ಇರುವುದರಿಂದ ಕಸದ ವಾಹನದ ಓಡಾಟದ ಸಮಯ ಹಾಗೂ ದಿನದಲ್ಲಿ ವ್ಯತ್ಯಾಸ ಆಗುತ್ತಿದೆ. ಅದನ್ನು ಸರಿಪಡಿಸುತ್ತೇವೆ ಎಂದರು..
ಜ್ಯೋತಿ ಮೋಹನ್ ಮಾತನಾಡಿ ತುಂಗಾ ನದಿಯಲ್ಲಿ ಈಗಾಗಲೇ ಹಲವರು ಜೀವ ತೆಗೆದುಕೊಂಡಿದ್ದಾರೆ. ಈಜಲು ಹೋಗುವವರಿಗೆ ಆಳದ ಬಗ್ಗೆ ತಿಳಿದಿರುವುದಿಲ್ಲ. ತುಂಗಾ ನದಿಯ ಆಸು ಪಾಸಿನಲ್ಲಿ ಸೂಚನಾ ಫಲಕ ಹಾಕಬೇಕು ಹಾಗೆ ಛತ್ರಕೇರಿಯಲ್ಲಿ ರಸ್ತೆಯಲ್ಲೇ ಗುಜರಿ ಸಾಮಾನು ಹಾಕಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಅದನ್ನು ತೆಗೆಸಬೇಕು ಎಂದು ತಿಳಿಸಿದರು.
ಬೊಮ್ಮಸಯ್ಯನ ಅಗ್ರಹಾರದಲ್ಲಿ ಅಕ್ರಮವಾಗಿ ತಂಬಾಕು ಉತ್ಪಾದನೆ ಮಾಡುತ್ತಿರುವ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ತಂಬಾಕು ಮಾಡಲು ಅನುಮತಿ ಕೊಟ್ಟವರು ಯಾರು? ಅನುಮತಿ ಕೊಟ್ಟಿಲ್ಲ ಎಂದರೆ ಅದನ್ನು ನಿಲ್ಲಿಸಲು ಯಾಕೆ ಸಾಧ್ಯವಾಗುತ್ತಿಲ್ಲ. ಅಲ್ಲಿ ಪ್ರತಿಯೊಬ್ಬರಿಗೂ ತೊಂದರೆ ಆಗುತ್ತಿದೆ. ಪಕ್ಕದಲ್ಲಿ ಅಂಗನವಾಡಿ ಕೇಂದ್ರ ಇದ್ದು ಮಕ್ಕಳಿಗೂ ತೊಂದರೆ ಆಗುತ್ತದೆ ತಕ್ಷಣವೇ ನಿಲ್ಲಿಸಬೇಕು ಎಂದು ತಿಳಿಸಿದರು.
ಜ್ಯೋತಿ ಗಣೇಶ್ ಮಾತನಾಡಿ ಅಸಾದಿ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕುಶಾವತಿ ಪಾರ್ಕ್ ನಲ್ಲಿ ಮಕ್ಕಳ ಆಟಗಳನ್ನು ಸರಿಪಡಿಸಲು ಹಣವನ್ನು ಇಟ್ಟಿದ್ದರು. ಇಲ್ಲಿಯವರೆಗೆ ಯಾವುದೇ ಕೆಲಸ ಆಗಿಲ್ಲ. ಮಕ್ಕಳ ಆಟಿಕೆಗಳು ಸಂಪೂರ್ಣ ಹಾಳಾಗಿವೆ. ಕೂಡಲೇ ಅದನ್ನು ಸರಿಪಡಿಸಬೇಕು ಎಂದರು..
ಬೆಟ್ಟಮಕ್ಕಿಯ ನಿವೇಶನ ವಿಚಾರವಾಗಿ ನವೀನ್ ಯತಿರಾಜ್ ಹಾಗೂ ರಾಘವೇಂದ್ರ ಶೆಟ್ಟಿ ನಡುವೆ ವಾಕ್ಸಮರ ಮಾರ್ಪಟ್ಟಿತು. ನಿವೇಶನ ವಿಚಾರದಲ್ಲಿ 5 ಲಕ್ಷ ಲಂಚ ಪಡೆಯಲಾಗಿದೆ ಎಂದು ಆರೋಪಿಸಿದರು. ನಿವೇಶನ ವಿಚಾರದಲ್ಲಿ ಸರಿಯಾಗಿ ತನಿಖೆ ಮಾಡಬೇಕು. ಇಲ್ಲದಿದ್ದರೆ ನಾನು ಪಟ್ಟಣ ಪಂಚಾಯತ್ ಎದುರು ಪ್ರತಿಭಟನೆ ನಡೆಸುತ್ತೇನೆ ಎಂದು ತಿಳಿಸಿದರು..
Tags:
ಪಟ್ಟಣ ಪಂಚಾಯತ್