ತುಂಗಾ ನದಿಗೆ ಹಾರಲು ಮುಂದಾಗಿದ್ದ ಬಾಲಕನ ರಕ್ಷಣೆ !
ಶಿವಮೊಗ್ಗ : ತುಂಗಾ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಬಾಲಕನೋರ್ವನನ್ನು, ಸಾರ್ವಜನಿಕರ ಸಹಕಾರರೊಂದಿಗೆ ಪೊಲೀಸರು ರಕ್ಷಣೆ ಮಾಡಿದ ಘಟನೆ ಶಿವಮೊಗ್ಗ ನಗರದಲ್ಲಿ ಮಾರ್ಚ್ 29 ರ ರಾತ್ರಿ ನಡೆದಿದೆ.
16 ವರ್ಷದ ಬಾಲಕನೇ ರಕ್ಷಣೆಗೊಳಗಾದವ. ಈತ ವಾದಿ ಎ ಹುದಾ ಬಡಾವಣೆ ಸಮೀಪದ ಸೇತುವೆ ಬಳಿ ನದಿಗೆ ಹಾರಲು ನಿಂತುಕೊಂಡಿದ್ದ. ಇದನ್ನು ಸ್ಥಳೀಯ ನಾಗರೀಕರು ಗಮನಿಸಿದ್ದಾರೆ. ಗಸ್ತಿನಲ್ಲಿದ್ದ ಇಆರ್’ವಿ ವಾಹನ 112 ಸಿಬ್ಬಂದಿಗಳಾದ ತುಂಗಾನಗರ ಠಾಣೆಯ ಶಬ್ಬೀರ್ ಬೇಗ್ ಹಾಗೂ ಮಂಜುನಾಥ್ ಅವರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು, ಸ್ಥಳೀಯರ ನೆರವಿನೊಂದಿಗೆ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು?
ತಂದೆ-ತಾಯಿಯು ತನ್ನ ಹಾಗೂ ತಮ್ಮನ ನಡುವೆ ತಾರತಮ್ಯ ಮಾಡುತ್ತಿದ್ದಾರೆ. ಈ ಕಾರಣದಿಂದ ಮನನೊಂದು ನದಿಗೆ ಹಾರಲು ನಿರ್ಧರಿಸಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
Tags:
ಶಿವಮೊಗ್ಗ ಸುದ್ದಿ