ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಸಿದ ಸರ್ಕಾರ - ಶಿಕ್ಷಣ ಸಚಿವರಿಂದ ಮಹತ್ವದ ಘೋಷಣೆ
ಒಂದನೇ ತರಗತಿಗೆ ದಾಖಲಾಗಲು ಕಡ್ಡಾಯವಾಗಿ 6 ವರ್ಷ ತುಂಬಿರಲೇಬೇಕು ಎಂಬ ನಿಯಮದಿಂದ ರಾಜ್ಯ ಸರ್ಕಾರ 2 ತಿಂಗಳ ಸಡಿಲಿಕೆ ನೀಡಿದ್ದು, ಲಕ್ಷಾಂತರ ಮಕ್ಕಳ ಪಾಲಕರಿಗೆ ಇದು ಅನುಕೂಲವಾಗಲಿದೆ..ಇಂದು ಸದನದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, 1ನೇ ತರಗತಿ ಮಕ್ಕಳ ದಾಖಲಾತಿಗೆ 6 ವರ್ಷದ ಮಿತಿಯನ್ನು ನಿಗದಿ ಮಾಡಲಾಗಿತ್ತು.
ಆ ನಿಯಮದಲ್ಲಿ ಸಡಿಲ ಮಾಡುವಂತೆ ಸಾಕಷ್ಟು ಮಕ್ಕಳ ಪಾಲಕರು ನಮ್ಮ ಬಳಿ ಮನವಿ ಮಾಡಿದ್ದರು. ಆ ಪಾಲಕರೆಲ್ಲ ಸ್ವಲ್ಪ ಗಾಬರಿಯಲ್ಲೂ ಇದಾರೆ. ಅವರ ಮನವಿಯನ್ನು ಪುರಸ್ಕರಿಸಿ ಸರ್ಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡುತ್ತಿದೆ ಎಂದರು.
ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಧ್ಯಾಯ 3 ಸೆಕ್ಷನ್ 20ರ ಅಡಿಯಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡುವ ಸಂಬಂಧ 60 ದಿನಗಳ ವಿನಾಯಿತಿಯನ್ನು ನೀಡಲಾಗಿರುತ್ತದೆ. ಅದರಂತೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾತಿ ನೀಡುವ ಸಂಬಂಧ 60 ದಿನಗಳ ಸಡಿಲಿಕೆಯನ್ನು ನೀಡಲಾಗುತ್ತದೆ. ಈ ಸಂಬಂಧ ದಾಖಲಾತಿ ತಂತ್ರಾಂಶದಲ್ಲೂ ಬದಲಾವಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸದನದಲ್ಲಿ ಆದೇಶದ ಪ್ರತಿಯನ್ನು ಓದಿದರು.
ಒಂದನೇ ತರಗತಿ ಮಕ್ಕಳಿಗೆ ಮಾತ್ರವಲ್ಲ, ಎಲ್ಕೆಜಿ ಮತ್ತು ಯುಕೆಜಿ ಮಕ್ಕಳ ದಾಖಲಾತಿಯಲ್ಲೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಲ್ಲಿಗೂ ಕೂಡ ಹೊಸದಾಗಿ ಒಂದು ಕಾನೂನನ್ನೂ ನಾವು ಆದಷ್ಟು ಬೇಗ ತಂದು, ಶಾಶ್ವತವಾಗಿ ಒಂದು ಪರಿಹಾರ ಕಂಡುಕೊಳ್ಳುತ್ತೇವೆ. ಸದ್ಯಕ್ಕೆ 6 ವರ್ಷದ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆಯನ್ನು ನೀಡಿದ್ದೇವೆ. ಈ ಮಾಹಿತಿಯನ್ನು ಎಲ್ಲ ಮಕ್ಕಳ ಪಾಲಕರಿಗೆ ಈ ಸದನದ ಮೂಲಕ ನಾನು ನೀಡುತ್ತಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.
Tags:
ರಾಜ್ಯ ಸುದ್ದಿ