ಜಿಲ್ಲೆಯಲ್ಲಿ ಇಸ್ಪೀಟ್, ಡ್ರಗ್ಸ್, ಮರಳುದಂಧೆ, ಕಲ್ಲು ಗಣಿಗಾರಿಕೆ ಅನಧೀಕೃತ ಚಟುವಟಿಕೆಗಳ ಬಗ್ಗೆ ಮುಲಾಜಿಲ್ಲದೆ ಕ್ರಮ : ಸಚಿವ ಮಧು ಬಂಗಾರಪ್ಪ Madhubangarappa

ಜಿಲ್ಲೆಯಲ್ಲಿ ಇಸ್ಪೀಟ್, ಡ್ರಗ್ಸ್, ಮರಳುದಂಧೆ, ಕಲ್ಲು ಗಣಿಗಾರಿಕೆ ಅನಧೀಕೃತ ಚಟುವಟಿಕೆಗಳ ಬಗ್ಗೆ ಮುಲಾಜಿಲ್ಲದೆ ಕ್ರಮ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ರಾಜ್ಯಪಾಲರು ಭಾಷಣಕ್ಕೆ ಸದನಕ್ಕೆ ಬರುವಾಗ ನಾವೆಲ್ಲರೂ ಪ್ರೀತಿ-ವಿಶ್ವಾಸ-ಗೌರವವನ್ನು ಕೊಟ್ಟು ಪೀಠದ ಮೇಲೆ ಕೂರಿಸಿದ್ದೇವೆ. ಆದರೆ ಅವರು ಆ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಸಚಿವ ಎಸ್. ಮಧುಬಂಗಾರಪ್ಪ ಹೇಳಿದ್ದಾರೆ.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರ ವರ್ತನೆ ಒಂದು ರೀತಿಯ ವಂಚನೆಯಲ್ಲಿತ್ತು. ನಾವೆಲ್ಲರೂ ಏಳುಕೋಟಿ ಜನರನ್ನು ಪ್ರತಿನಿಧಿಸುತ್ತೇವೆ. ಸದನದ ನಿಯಮಾವಳಿಗಳಿಗೆ ಅವರೇ ವಂಚನೆ ಮಾಡಿದರು. ನಾಡಗೀತೆ ಮತ್ತು ರಾಷ್ಟ್ರಗೀತೆ ದೇಶದ ಗೌರವವಾಗಿದ್ದು, ರಾಜ್ಯಪಾಲರೇ ಅದಕ್ಕೆ ಅವಮಾನ ಮಾಡಿದರು. ಬಿಜೆಪಿ ಶಾಸಕರು ನಮ್ಮ ಪಕ್ಷದ ನಾಯಕ ಹರಿಪ್ರಸಾದ್ ಅವರನ್ನು ರೌಡಿ ಅಂದರು. ಅದಕ್ಕೆ ಪ್ರಚೋದಿಸಿದವರು ಯಾರು ಎಂದು ಮೊದಲು ಹೇಳಲಿ. ಸಾಂವಿಧಾನಿಕ ಪೀಠಕ್ಕೆ ಅಗೌರವ ತೋರಿದ ರಾಜ್ಯಪಾಲರ ವರ್ತನೆಯನ್ನು ನಾನು ಖಂಡಿಸುತ್ತೇನೆ. ರಾಜ್ಯದ ಅಡ್ವಕೇಟ್ ಜನರಲ್ ಮತ್ತು ಕಾನೂನು ಸಚಿವರು ಈ ಬಗ್ಗೆ ಚರ್ಚಿಸುತ್ತಿದ್ದಾರೆ. ರಾಜ್ಯಪಾಲರು ಕನಿಷ್ಢ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳಬೇಕಿತ್ತು ಎಂದರು.

ವಿಪಕ್ಷ ನಾಯಕರು ಈ ಬಗ್ಗೆ ಚಕಾರವೆತ್ತುತ್ತಿಲ್ಲ ಯಾಕೆ ಎಂದರು. ಹೆಚ್.ಡಿ. ಕುಮಾರಸ್ವಾಮಿ ಮುಂದಿನ ಸಿಎಂ ನಾನೇ ಎಂದು ಹೇಳಿದ್ದಾರೆ. ರಾಜ್ಯ ರಾಜಕಾರಣಕ್ಕೂ ಬಂದಿದ್ದಾರಲ್ಲಾ ಎಂಬ ಪ್ರಶ್ನೆಗೆ 2018ರಲ್ಲಿ ಅವರು ಯಾಕೆ ಸ್ಥಾನ ಕಳೆದುಕೊಂಡರು. ಮೋದಿ ಪ್ರಧಾನಿಯಾದರೆ ದೇಶಬಿಟ್ಟು ಹೋಗುತ್ತೇನೆ ಎಂದ ದೇವೇಗೌಡರು ಏಕೆ ಹೋಗಿಲ್ಲ ? ಹೆಚ್‍ಡಿಕೆಗೆ ಮುಂದಿನ ಮುಖ್ಯಮಂತ್ರಿ ಎಂದು ಭರವಸೆ ಕೊಟ್ಟವರು ಯಾರು ನನಗೆ ಗೊತ್ತಿಲ್ಲ. ಅಧಿಕಾರಕ್ಕೆ ಬರಬೇಕಾದರೆ ನಂಬರ್‍ಗೇಮ್ ಬಹಳ ಮುಖ್ಯ ಎಂದರು.

ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ನಾನು ಜಿಲ್ಲಾ ರಕ್ಷಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ, ಕಠಿಣಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಕಾನೂನು ಬಾಹಿರವಾಗಿ ಇಸ್ಪೀಟ್, ಡ್ರಗ್ಸ್, ಮರಳುದಂಧೆ, ಕಲ್ಲು ಗಣಿಗಾರಿಕೆ ಸೇರಿದಂತೆ ಯಾವುದೇ ಅನಧೀಕೃತ ಚಟುವಟಿಕೆಗಳ ಬಗ್ಗೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದರು.
Previous Post Next Post